ADVERTISEMENT

ಮಂಗಳೂರು | ವ್ಯಕ್ತಿಗೆ ಆನ್‌ಲೈನ್‌ನಲ್ಲಿ ₹18.13 ಲಕ್ಷ ವಂಚನೆ

ಮುಂಬೈ ಕ್ರೈ ಬ್ರಾಂಚ್‌ ಪೊಲೀಸರ ಸೋಗಿನಲ್ಲಿ ಕರೆ, ಮಾದಕ ದ್ರವ್ಯ ಸಾಗಣೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 6:11 IST
Last Updated 4 ಜುಲೈ 2024, 6:11 IST
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)
ಸೈಬರ್ ವಂಚನೆ (ಪ್ರಾತಿನಿಧಿಕ ಚಿತ್ರ)   

ಮಂಗಳೂರು: ಮುಂಬೈ ಕ್ರೈ ಬ್ರಾಂಚ್‌ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಇಲ್ಲಿನ ವ್ಯಕ್ತಿಯೊಬ್ಬರಿಗೆ  ₹ 18.13 ಲಕ್ಷ ವಂಚಿಸಿದ ಬಗ್ಗೆ ಸೆನ್‌ ಅಪರಾಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

'ನನಗೆ ಸೋಮವಾರ  ಮಧ್ಯಾಹ್ನ 1.30ಕ್ಕೆ  ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಫೆಡೆಕ್ಸ್‌ನಿಂದ ಕರೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದರು. ನಿಮಗೆ ಕಳುಹಿಸಲಾದ ಪಾರ್ಸೆಲ್ ತಿರಸ್ಕೃತಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಸಂಖ್ಯೆ 1 ಅನ್ನು ಒತ್ತುವಂತೆ ಸೂಚಿಸಿದ್ದರು.  ಪಾರ್ಸೆಲ್ ಯಾವುದಿರಬಹುದು ಎಂದು ತಿಳಿಯಲು ಸಂಖ್ಯೆ 1 ಅನ್ನು ಒತ್ತಿದಾಗ  ಅನುರಾಗ್ ಟೋಮರ್ ಎಂದು ಹೇಳಿಕೊಂಡ ವ್ಯಕ್ತಿ ಮಾತನಾಡಿದ್ದ. ನಂತರ ಕಾಲ್ ಕಟ್ ಆಗಿತ್ತು. ನಂತರ ಇನ್ನೊಂದು ಸಂಖ್ಯೆಯಿಂದ  ಕರೆ ಬಂದಿದ್ದು, ಅನುರಾಗ್ ಟೋಮರ್ ಎಂದು ಹೇಳಿಕೊಂಡ ವ್ಯಕ್ತಿ ಮತ್ತೆ ಮಾತನಾಡಿದ್ದ. ನನ್ನ ಹೆಸರಿಗೆ ನಾಲ್ಕು ಐರನ್‌ ಪಾಸ್‌ಪೋರ್ಟ್‌, 5 ಕೆ.ಜಿ ಬಟ್ಟೆ, 4 ಕ್ರೆಡಿಟ್‌ ಕಾರ್ಡ್‌, ಮಾದಕ ಪದಾರ್ಥದ (ಎಲ್‌ಎಸ್‌ಡಿ) 25 ಸ್ಟ್ರಿಪ್‌ಗಳಿವೆ ಎಂದು ತಿಳಿಸಿದ್ದ ಆತ,  ಕರೆಯನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ಸಂಪರ್ಕಿಸುವುದಾಗಿ ಹೇಳಿದ್ದ.’

‘ನಂತರ ಕರೆ ಮಾಡಿದವರು ಸ್ಕೈಪ್‌ ಡೌನ್‌ಲೋಡ್‌ ಮಾಡಿ, ವಿಡಿಯೊ ಕಾಲ್ ಮಾಡುವಂತೆ ತಿಳಿಸಿದ್ದರು. ವಿಡಿಯೊ ಕಾಲ್‌ ವೇಳೆ ಯಾರೋ ಅಪರಿಚಿತ ವ್ಯಕ್ತಿಯು ತನ್ನನ್ನು ಮುಂಬೈ ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿ ಎಂದು ಪರಿಚಯಿಸಿಕೊಂಡು ನನ್ನ ಆಧಾರ್ ಕಾರ್ಡ್ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಕೇಳಿ ತಿಳಿದುಕೊಂಡ.  ಬೆನಿಫಿಷರಿಯನ್ನು ಸೇರಿಸುವಂತೆ  ತಿಳಿಸಿದ್ದ. ನಂತರ ಅವರ ಸೂಚನೆ ಮೇರೆಗೆ ಐ ಮೊಬೈಲ್ ಆ್ಯಪ್‌ನಲ್ಲಿ ಸ್ಕ್ರೀನ್‌ ಹಂಚಿಕೊಂಡಿದ್ದೆ. ಅದರ ಮೂಲಕ ₹ 15 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಇನ್ನೊಂದು ಬೆನಿಫಿಷಿಯರಿಯನ್ನು ಸೇರಿಸಿ ₹ 3,12,987 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಸಂಜೆ 7.30ರ ಬಳಿಕ ಕರೆ ಕಡಿತಗೊಳಿಸಿದ್ದಾರೆ.  ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ನನ್ನ ಖಾತೆಯಿಂದ ₹ 18,12,987 ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಕೊಂಡವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.