ಮಂಗಳೂರು: ಆಸ್ತಿಯೊಂದರ ಪಹಣಿ ದಾಖಲೆ (ಆರ್‌ಟಿಸಿ) ಬದಲಾವಣೆಗೆ ₹ 3,000 ಲಂಚ ಪಡೆದ ಪ್ರಕರಣದಲ್ಲಿ ಸುಳ್ಯ ತಾಲ್ಲೂಕು ಸಂಪಾಜೆ ಗ್ರಾಮದ ಹಿಂದಿನ ಗ್ರಾಮ ಕರಣಿಕ ವಿನೋದ್ ಕುಮಾರ್ ಅಪರಾಧಿ ಎಂದು ಸಾರಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯ, ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 10,000 ದಂಡ ವಿಧಿಸಿದೆ.
ಸುಳ್ಯ ತಾಲ್ಲೂಕು ತೋಡಿಕಾನದ ಮುಹಮ್ಮದ್ ಹನೀಫ್ ಎಂಬುವವರ ತಂಗಿ ನಸೀಮಾ ಎಂಬುವವರು ತಮ್ಮ ಕುಟುಂಬದ ಜಮೀನಿನ ಆರ್‌ಟಿಸಿ ಬದಲಾವಣೆಗೆ 2013ರ ಜೂನ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಲು ₹ 3,000 ಲಂಚ ನೀಡುವಂತೆ ವಿನೋದ್‌ಕುಮಾರ್ ಬೇಡಿಕೆ ಇರಿಸಿದ್ದರು. ಈ ಕುರಿತು ಮುಹಮ್ಮದ್ ಹನೀಫ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ಅರ್ಧ ತನಿಖೆಯನ್ನು ಲೋಕಾಯುಕ್ತ ಮಂಗಳೂರು ಪೊಲೀಸ್ ಠಾಣೆಯ ಹಿಂದಿನ ಇನ್‌ಸ್ಪಕ್ಟರ್ ಬಿ.ಕೆ.ಮಂಜಯ್ಯ ನಡೆಸಿದ್ದರು. ನಂತರ ಇನ್‌ಸ್ಪೆಕ್ಟರ್ ವಿಜಯಪ್ರಸಾದ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಶನಿವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ, ವಿನೋದ್‌ಕುಮಾರ್ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದರು. ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿ ಆದೇಶ ಹೊರಡಿಸಿದರು.
ಪ್ರಾಸಿಕ್ಯೂಷನ್ ಪರವಾಗಿ ಹೆಚ್ಚುವರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.