ADVERTISEMENT

ಮಂಗಳೂರು: ಸೀಟು ದೊರೆತರೂ ದಾಖಲಾತಿಗೆ ಹಿಂದೇಟು

ಖಾಸಗಿ ಶಾಲೆಗಳ ಹೆಚ್ಚುವರಿ ವೆಚ್ಚ ಪಾಲಕರಿಗೆ ಹೊರೆ, ದಾಖಲಾತಿಗೆ ಹಿಂದೇಟು

ಸಂಧ್ಯಾ ಹೆಗಡೆ
Published 24 ಜೂನ್ 2024, 5:38 IST
Last Updated 24 ಜೂನ್ 2024, 5:38 IST
   

ಮಂಗಳೂರು: ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಉಚಿತ ಪ್ರವೇಶ ಪಡೆಯಲು ಆರ್ಥಿಕವಾಗಿ ಹಿಂದುಳಿದಿರುವ ಅರ್ಹ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಖಾಸಗಿ ಶಾಲೆಗಳ ಹೆಚ್ಚುವರಿ ವೆಚ್ಚ ಭರಿಸಲು ಸಾಧ್ಯವಾಗದೆ, ಪಾಲಕರು ನೋಂದಣಿಗೆ ಹಿಂದೇಟು ಹಾಕುವ ಕಾರಣ, ಮಕ್ಕಳ ಪಾಲಿಗೆ ಆರ್‌ಟಿಇ, ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

2024–25ನೇ ಸಾಲಿನಲ್ಲಿ ಜಿಲ್ಲೆಯ 75 ಅನುದಾನಿತ ಹಾಗೂ 13 ಖಾಸಗಿ ಶಾಲೆಗಳು ಸೇರಿ ಒಟ್ಟು 88 ಶಾಲೆಗಳಲ್ಲಿ 458 ಆರ್‌ಟಿಇ ಸೀಟ್‌ಗಳು ಲಭ್ಯ ಇವೆ. ಜೂನ್ 5ರಂದು ನಡೆದ ಮೊದಲನೇ ಸುತ್ತಿನ ಲಾಟರಿ ಮೂಲಕ ಆಯ್ಕೆಯಲ್ಲಿ 61 ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿತ್ತು. ನೋಂದಣಿಗೆ ಕೊನೆಯ ದಿನವಾದ ಜೂನ್ 19ರವರೆಗೆ ದಾಖಲು ಮಾಡಿಕೊಂಡವರು 38 ವಿದ್ಯಾರ್ಥಿಗಳು ಮಾತ್ರ.

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರಲ್ಲಿ ಅನುಷ್ಠಾನಕ್ಕೆ ಬಂತು. ಆಗ, ಸೀಟ್ ಪಡೆಯಲು ತೀವ್ರ ಪೈಪೋಟಿ ಇತ್ತು. 2018ರವರೆಗೂ ಇದೇ ತುರುಸು ಇತ್ತು. ಆದರೆ, 2019ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿ ಪ್ರಕಾರ ವಿದ್ಯಾರ್ಥಿ ವಾಸವಾಗಿರುವ ಪ್ರದೇಶದ ಒಂದು ಕಿ.ಮೀ ಅಂತರದಲ್ಲಿ ಯಾವುದೇ ಸರ್ಕಾರಿ ಹಾಗೂ ಅನುದಾನಿತ ಶಾಲೆ ಇದ್ದರೆ ಅಲ್ಲಿನ ಖಾಸಗಿ ಶಾಲೆಯಲ್ಲಿ ಆರ್‌ಟಿಇ ಸೀಟ್ ಲಭ್ಯ ಇರುವುದಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ದಿಷ್ಟ ವಾರ್ಡ್‌ನಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಇಲ್ಲದಿದ್ದರೆ ಅಲ್ಲಿರುವ ಖಾಸಗಿ ಶಾಲೆಗೆ ಆರ್‌ಟಿಇ ಅಡಿ ವಿದ್ಯಾರ್ಥಿ ಪ್ರವೇಶ ಪಡೆಯಲು ಅವಕಾಶ ಇದೆ. ಇದು ಕಾಯ್ದೆಯ ಪೂರ್ಣ ಪ್ರಯೋಜನ ಪಡೆಯಲು ಹಿನ್ನಡೆಯಾಗಿದೆ ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದರು.

ADVERTISEMENT

ಆರ್‌ಟಿಇ ಅಡಿಯಲ್ಲಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಪಡೆಯಲು ಅವಕಾಶ ಇರುತ್ತದೆ. ಅನುದಾನಿತ ಶಾಲೆಗಳಿಗೆ ಅಷ್ಟಾಗಿ ಬೇಡಿಕೆ ಇರುವುದಿಲ್ಲ. ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯುವ ಕಾರಣಕ್ಕೆ ಪಾಲಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಉತ್ಸಾಹ ತೋರುತ್ತಾರೆ. ಕಾಯ್ದೆ ಅಡಿ ಖಾಸಗಿ ಶಾಲೆಗೆ ಸೇರುವ ಮಗುವಿಗೆ ಸರ್ಕಾರ ಗರಿಷ್ಠ ₹16 ಸಾವಿರ ಶುಲ್ಕ ಪಾವತಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕ ಹೊರತಾದ ಬೇರೆ ಬೇರೆ ಶುಲ್ಕಗಳು ಇರುತ್ತವೆ. ಇದನ್ನು ಪಾಲಕರೇ ಭರಿಸಬೇಕಾಗುತ್ತದೆ. ಆರ್ಥಿಕವಾಗಿ ಹಿಂದುಳಿದಿರುವ ಪಾಲಕರಿಗೆ ಇದು ಹೊರೆಯಾಗುತ್ತದೆ. ಅದಕ್ಕಾಗಿ ಕೆಲವರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಾರೆ ಎಂದು ಅವರು ಇತ್ತೀಚೆಗೆ ಅವರ ಬಳಿ ತಾಯಿಯೊಬ್ಬರು ಹೇಳಿಕೊಂಡ ಈ ಸಂಗತಿಯನ್ನು ಬಿಚ್ಚಿಟ್ಟರು.

ಮಂಗಳೂರು ಉತ್ತರ ಬ್ಲಾಕ್‌ನಲ್ಲಿ ಗರಿಷ್ಠ 20 ಮಕ್ಕಳು, ಮಂಗಳೂರು ದಕ್ಷಿಣದಲ್ಲಿ 11 ಮಕ್ಕಳು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಬಂಟ್ವಾಳ, ಪುತ್ತೂರು, ಸುಳ್ಯ ಬ್ಲಾಕ್‌ಗಳಲ್ಲಿ ಈ ಸಂಖ್ಯೆ ಶೂನ್ಯ. ಕಳೆದ ವರ್ಷ ಕೂಡ ಈ ಬ್ಲಾಕ್‌ಗಳಲ್ಲಿ ಪಾಲಕರು ಮಕ್ಕಳು ಆರ್‌ಟಿಇ ಅಡಿಯಲ್ಲಿ ಮಕ್ಕಳನ್ನು ಸೇರಿಸಲು ಆಸಕ್ತಿ ತೋರಿಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.