ಮಂಗಳೂರು: ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ ವಿಷಯಗಳ ಕುರಿತ ‘ಕಾಸ್ಮಿಕ್-2024’ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಇದೇ 22 ಮತ್ತು 23ರಂದು ಏರ್ಪಡಿಸಲಾಗಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮುಸ್ತಫಾ ಬಸ್ತಿಕೋಡಿ, ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಮುಖ್ಯ ಸಂಯೋಜನಾಧಿಕಾರಿ ಬುದ್ಧ ಚಂದ್ರಶೇಖರ್, ಥೀಟಾ ಡೈನಾಮಿಕ್ಸ್ ಸಂಸ್ಥೆಯ ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೈಬರ್ ಭದ್ರತೆ ನಿರ್ದೇಶಕ ಉದಯ ಶಂಕರ ಪುರಾಣಿಕ್, ಯುಎಸ್‌ಎ ಕ್ರೇಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಟೀವನ್ ಎಲ್.ಫರ್ನಾಂಡಿಸ್ ಭಾಗವಹಿಸಲಿದ್ದಾರೆ’ ಎಂದರು.
‘ಐಇಇಇನ ಬೆಂಗಳೂರು ವಿಭಾಗದ ಸಹಕಾರದಿಂದ ಏರ್ಪಡಿಸಿದ ಈ ಸಮ್ಮೇಳನದಲ್ಲಿ ತಂತ್ರಜ್ಞರು, ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಮಂಡಿಸಲು ವಿವಿಧ ದೇಶಗಳ 240 ತಜ್ಞರು ಸಂಶೋಧನಾ ಪ್ರಬಂಧಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಶೇ 20ರಷ್ಟನ್ನು ಆಯ್ಕೆ ಮಾಡಲಾಗಿದೆ. ಮಂಡನೆಯಾಗುವ ಪ್ರಬಂಧಗಳನ್ನು ಐಇಇಇ ಎಕ್ಸ್‌ಪ್ಲೋರ್ ಡಿಜಿಟಲ್ ಗ್ರಂಥಾಲಯಕ್ಕೆ ಸಲ್ಲಿಸಲಿದ್ದೇವೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಎಸ್.ಮಂಜಪ್ಪ, ಪ್ರಾಂಶುಪಾಲ ಎಸ್.ಎಸ್.ಇಂಜಗನೇರಿ, ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ರಿತೇಶ್ ಪಕ್ಕಳ ಪಿ, ಗುರುಸಿದ್ಧಯ್ಯ ಹಿರೇಮಠ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.