ADVERTISEMENT

ಉಪ್ಪಿನಂಗಡಿ: ರಕ್ಷಿತಾರಣ್ಯದಲ್ಲಿ ಮತ್ತೆ ಕಡವೆ ಶಿಕಾರಿ

ಮಗನ ಹುಟ್ಟು ಹಬ್ಬ ಆಚರಿಸಲು ಬೇಟೆ– ಆರೋಪ

ಸಿದ್ದಿಕ್ ನೀರಾಜೆ
Published 20 ಅಕ್ಟೋಬರ್ 2024, 8:03 IST
Last Updated 20 ಅಕ್ಟೋಬರ್ 2024, 8:03 IST
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಶಿಬಾಜೆ ರಕ್ಷಿತಾರಣ್ಯದಿಂದ ಕಾಡುಕೋಣ ಬೇಟೆಯಾಡಿ ಮಾಡಿದ ಮಾಂಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಈಚೆಗೆ ವಶಕ್ಕೆ ಪಡೆದಿದ್ದಾರೆ (ಸಂಗ್ರಹ ಚಿತ್ರ)
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಶಿಬಾಜೆ ರಕ್ಷಿತಾರಣ್ಯದಿಂದ ಕಾಡುಕೋಣ ಬೇಟೆಯಾಡಿ ಮಾಡಿದ ಮಾಂಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಈಚೆಗೆ ವಶಕ್ಕೆ ಪಡೆದಿದ್ದಾರೆ (ಸಂಗ್ರಹ ಚಿತ್ರ)   

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಪಶ್ಚಿಮ ಘಟ್ಟದ ತಪ್ಪಲು, ರಕ್ಷಿತಾರಣ್ಯ ಪ್ರದೇಶದ  ಶಿಬಾಜೆ, ಶಿರಾಡಿ, ಶಿಶಿಲದಲ್ಲಿ ಕಾಡು ಪ್ರಾಣಿಗಳ ಶಿಕಾರಿ ಮಾಡುವ ತಂಡ ಸಕ್ರಿಯವಾಗಿದೆ. ವ್ಯಕ್ತಿಯೊಬ್ಬರು ಮಗನ ಹುಟ್ಟು ಹಬ್ಬದ ಆಚರಣೆಗಾಗಿ ಕಡವೆ ಬೇಟೆಯಾಡಿ ಸಂಗ್ರಹಿಸಿದ್ದ  ಮಾಂಸವನ್ನು ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಶಿರಾಡಿ ಗ್ರಾಮದ ಗುಂಡ್ಯದ ನಿವಾಸಿ ಸುರೇಶ್ ಹಾಗೂ ಅವರ ಸಹವರ್ತಿಗಳು ಸೇರಿ ರಕ್ಷಿತಾರಣ್ಯದಲ್ಲಿ ಕಡವೆಯನ್ನು ಗುಂಡಿಕ್ಕಿ ಕೊಂದು, ಮಗನ ಜನ್ಮದಿನದ ಔತಣಕೂಟಕ್ಕಾಗಿ ಮಾಂಸವನ್ನು ಮನೆಯ ರೆಫ್ರಿಜರೇಟರ್‌ನಲ್ಲಿಟ್ಟಿದ್ದಾರೆ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಯ ಮನೆಯನ್ನು ಶೋಧಿಸಿತ್ತು. ಸಂಗ್ರಹಿಸಿ ಇಟ್ಟಿದ್ದ ಮಾಂಸ ಪತ್ತೆಯಾಗಿತ್ತು. ಮಾಂಸವನ್ನು ಹಾಗೂ ಶಿಕಾರಿಗೆ ಬಳಸಿದ ಕೋವಿಯನ್ನು ಸಿಬ್ಬಂದಿ ವಶಪಡಿಸಿಕೊಂಡಿದ್ದರು. 

ಕಡವೆ ಬೇಟೆ ಬಗ್ಗೆ ಶುಕ್ರವಾರ ಪ್ರಕರಣ ದಾಖಲಾಗಿದೆ. ದಾಳಿ ನಡೆಸಿದಾಗ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟಿ ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ  ಮೂಲಗಳು ತಿಳಿಸಿವೆ.

ADVERTISEMENT

ಶಿಬಾಜೆಯಲ್ಲಿ ಅ.11ರಂದು  ಹಗಲಲ್ಲೇ ಐವರ ತಂಡ ಕಾಡುಕೋಣವನ್ನು ಬೇಟೆಯಾಡಿತ್ತು. ಈ ಪ್ರದೇಶದಲ್ಲಿ ಕಾಡು ಕೋಣ ಬೇಟೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ’ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಆಧರಿಸಿ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಅರಣ್ಯ ಸಿಬ್ಬಂದಿ ಆರೋಪಿ ರಾಜು ಎಂಬಾತನ ಮನೆಯಲ್ಲಿ ಶೋಧ ನಡೆಸಿತ್ತು. ಆ ಪ್ರಕರಣದಲ್ಲೂ ಆರೋಪಿ ತಪ್ಪಿಸಿಕೊಂಡಿದ್ದ. 

ಐವರು ಆರೋಪಿಗಳು ಶಿಬಾಜೆ, ಶಿರಾಡಿಯಲ್ಲಿ ತಿರುಗಾಡುತ್ತಿದ್ದರೂ ಇಲಾಖೆ ಅಧಿಕಾರಿಗಳು ಬಂಧಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಆರೋಪಿ ಬಳಿಯೇ ವಿಳಾಸ ಕೇಳಿದ್ದರು: ಕಾಡುಕೋಣ ಬೇಟೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದವರು ಆರೋಪಿಗಳ ಸುಳಿವನ್ನೂ ನೀಡಿದ್ದರು. ಅದನ್ನು ಆಧರಿಸಿ ಸಿಬ್ಬಂದಿಯೂ ನೇರವಾಗಿ ಆರೋಪಿ ರಾಜು ಮನೆಗೆ ಹೋಗಿದ್ದರು. ಮನೆಯ ಅಂಗಳದಲ್ಲಿದ್ದ ರಾಜು ಬಳಿಯೇ ವಿಳಾಸ ಕೇಳಿದ್ದರು. ಅವರಿಗೆ ದಾರಿ ತೋರಿಸಿದ್ದ ಆತ ತಪ್ಪಿಸಿಕೊಂಡಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅದೇ ತಂಡವು ಸುಮಾರು 1 ಕ್ವಿಂಟಲ್‌ ತೂಕದ ಕಡವೆಯೊಂದನ್ನು ವಾರದ ಹಿಂದೆ ಬೇಟೆಯಾಡಿದೆ. ಅದಕ್ಕೂ 5 ದಿನಗಳ ಹಿಂದೆ ಸುಮಾರು 70 ಕೆ.ಜಿ. ತೂಕದ ಕಾಡು ಹಂದಿಯನ್ನು ಬೇಟೆಯಾಡಿದೆ. ಶಿಕಾರಿಯಲ್ಲಿ ಭಾಗಿಯಾದವರಿಗೆ, ಮಾಂಸ ಸಾಗಿಸಲು ನೆರವಾದ ವಾಹನಗಳಿಗೆ ಹಾಗೂ ಕೋವಿಗೆ ಮಾಂಸದಲ್ಲಿ ಪಾಲು ಹಂಚಲಾಗಿದೆ. ಈ ರೀತಿಯಾಗಿ ಒಬ್ಬ ವ್ಯಕ್ತಿಗೆ 3 ಪಾಲು ನೀಡಿದ್ದಕ್ಕೆ ತಂಡದಲ್ಲಿ ಅಸಮಾಧಾನ ಭುಗಿಲೆದ್ದು, ಶಿಕಾರಿಯ ವಿಚಾರ ಬಹಿರಂಗಗೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ತಲೆಮರೆಸಿಕೊಂಡ ಆರೋಪಿಗಳ ಬಂಧನ ಶೀಘ್ರ’

‘ಆರೋಪಿಗಳ ಮನೆಗೆ ದಾಳಿ ವೇಳೆ ಸಿಬ್ಬಂದಿಯಿಂದ ಪ್ರಮಾದ ಆಗಿದೆ. ಆದರೆ ಇದೀಗ ಅವರ ಬಂಧನಕ್ಕೆ ವಾರಂಟ್ ಜಾರಿ ಆಗಿದೆ. ಆರೋಪಿಗಳು ತಲೆಮರೆಸಿಕೊಂಡಿರುವುದರಿಂದ ಬಂಧನ ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಬಂಧಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಮಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಮರಿಯಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.