ಪುತ್ತೂರು (ದಕ್ಷಿಣ ಕನ್ನಡ): ಇಲ್ಲಿನ ಪಂಚವಟಿ ಸಮೀಪ ಬುಧವಾರ ನಡೆದ ವಿಶ್ವಹಿಂದೂ ಪರಿಷತ್‌ನ (ವಿಎಚ್‌ಪಿ) ನೂತನ ಕಾರ್ಯಾಲಯದ ಕಟ್ಟಡದ ಭೂಮಿ ಪೂಜೆ ವೇಳೆ ಪುತ್ತಿಲ ಪರಿವಾರ ಮತ್ತು ಸಂಘ ಪರಿವಾರದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ.
ಭೂಮಿಪೂಜೆ ಕಾರ್ಯಕ್ರಮಕ್ಕೆ ಬಂದ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗರನ್ನು ಸಂಘ ಪರಿವಾರದ ಕಾರ್ಯಕರ್ತರು ತಡೆದು ವಿರೋಧಿಸಿದರು. ‘ನೀವ್ಯಾಕೆ ಇಲ್ಲಿಗೆ ಬಂದದ್ದು, ನಿಮ್ಮನ್ಯಾರು ಕರೆದದ್ದು' ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಪರಸ್ಪರ ಮಾತಿನ ಚಕಮುಕಿ, ತಳ್ಳಾಟ ನಡೆಯಿತು. ಮಧ್ಯೆ ಪ್ರವೇಶಿಸಿದ ಸಂಘ ಪರಿವಾರದ ಮುಖಂಡರು ವಿವಾದವನ್ನು ತಣ್ಣಗಾಗಿಸಿದರು.
ಕಾರ್ಯಕ್ರಮದ ನಡುವೆ ಪುತ್ತಿಲ ಹಾಗೂ ಬೆಂಬಲಿಗರು ಎದ್ದು ಹೊರಟಾಗ ಮತ್ತೆ ಆಕ್ಷೇಪ ವ್ಯಕ್ತವಾಯಿತು. ವಾದ–ಪ್ರತಿವಾದ ಬೆಳೆದು ಸಂಘ ಪರಿವಾರ ಮತ್ತು ಪುತ್ತಿಲ ಪರಿವಾರ ಕಾರ್ಯಕರ್ತರ ನಡುವೆ ಹೊಡೆದಾಟ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಸಂಘ ಪರಿವಾರದ ಮುಖಂಡರ ವಿರುದ್ಧ ಹೇಳಿಕೆ ನೀಡಿದ್ದರು. ವಿಎಚ್‌ಪಿ ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಅವರನ್ನು ತಡೆಯಲು ಇದೇ ಕಾರಣ ಎಂದು ಅಲ್ಲಿದ್ದವರೊಬ್ಬರು ತಿಳಿಸಿದರು.
ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾಗಿರುವ ವಿಎಚ್‌ಪಿ ಮುಖಂಡ ಯು.ಪೂವಪ್ಪ ಅವರು ಕಾರ್ಯಕ್ರಮಕ್ಕೆ ಅರುಣ್ ಪುತ್ತಿಲ ಅವರಿಗೆ ಆಹ್ವಾನ ನೀಡಿದ್ದರು. ಪುತ್ತಿಲ ಪರಿವಾರವನ್ನು ತಡೆದ ಬಗ್ಗೆ ಪ್ರಾಸ್ತಾವಿಕ ಮಾತುಗಳಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿಎಚ್‌ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು
ವಿಎಚ್‌ಪಿ ಕಾರ್ಯಾಲಯದ ಭೂಮಿಪೂಜೆಗೆ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ (ಇಬ್ಬರೂ ಕಾಂಗ್ರೆಸ್ ಮುಖಂಡರು) ಭಾಗವಹಿಸಿದರು. ಅವರಿಬ್ಬರನ್ನೂ ವೇದಿಕೆಗೆ ಕರೆದು ಗೌರವಿಸಲಾಯಿತು. ವಿಎಚ್‌ಪಿಯ ಕೇಂದ್ರೀಯ ಕಾರ್ಯದರ್ಶಿ ಅಯೋಧ್ಯಾ ರಾಮಮಂದಿರ ನಿರ್ಮಾಣದ ಉಸ್ತುವಾರಿಯಾಗಿದ್ದ ಗೋಪಾಲ್‌ಜಿ ‘ನಮಗೆ ಕಾಂಗ್ರೆಸ್ ಕುರಿತು ಯಾವ ವಿರೋಧವೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.