ADVERTISEMENT

ವರ್ಷದಿಂದ ಹುದ್ದೆಯಲ್ಲಿಲ್ಲದ ಸಂಜೀವ ಪೂಜಾರಿ ಕಾಣಿಯೂರು

ವರ್ಷದಿಂದ ಸಂಬಳವೂ ಪಾವತಿಯಾಗಿಲ್ಲ: ಡಿಸಿಎಫ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:53 IST
Last Updated 20 ಅಕ್ಟೋಬರ್ 2024, 7:53 IST

ಮಂಗಳೂರು: ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಹೊತ್ತಿರುವ ಅರಣ್ಯ ಇಲಾಖೆ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವರ್ಷದಿಂದ ಅರಣ್ಯ ಇಲಾಖೆಯ ಯಾವುದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರಿಗೆ ವೇತನವೂ ಪಾವತಿಯಾಗುತ್ತಿಲ್ಲ.

ಸಂಜೀವ ಈ ಹಿಂದೆ ಕೊಯಿಲ ಉಪವಲಯ ಅರಣ್ಯಾಧಿಕಾರಿಯಾಗಿದ್ದರು. ಆ ವೇಳೆ, ಅವರು ಭಜನೆ ಮತ್ತು ಭಜಕರ ಹಾಗೂ ಹಿಂದೂ ಧರ್ಮದ ಕುರಿತು ನಿಂದನೆಯ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆಯವರು ಅವರ ವಿರುದ್ಧ 2022ರ ಡಿ.29ರಂದು ಪ್ರತಿಭಟನೆ ನಡೆಸಿದ್ದರು. 2023ರ ಜ.13ರಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಅಮಾನತು ಆದೇಶ ನೀಡಿದ್ದರು.

ಇದನ್ನು ಪ್ರಶ್ನಿಸಿ ಸಂಜೀವ ಕೆಎಟಿ ಮೊರೆ ಹೋಗಿದ್ದರು. ಅವರ ಮೇಲೆ ಯಾವುದಾದರೂ ಆಪಾದನೆ ಇದ್ದರೆ ತನಿಖಾಧಿಕಾರಿಯನ್ನು ನೇಮಿಸಿ ವಿಚಾರಣೆ ನಡೆಸಿ ವರದಿ ನೀಡುವಂತೆ ಕೆಎಟಿ ಆದೇಶದಲ್ಲಿ ತಿಳಿಸಿತ್ತು. ಆ ಬಳಿಕವೂ ಅವರನ್ನು ಮತ್ತೆ ಅಮಾನತು ಮಾಡಲಾಗಿತ್ತು.

ADVERTISEMENT

‘ಈ ಹಿಂದೆ ಅಮಾನತಾದ ಬಳಿಕ ಸಂಜೀವ ಅವರನ್ನು 2023ರ ಅಕ್ಟೋಬರ್‌ನಲ್ಲಿ ಬೆಳ್ತಂಗಡಿ ತಾಲ್ಲೂಕಿನ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆ ಆದೇಶ ಮಾಡಿತ್ತು.  ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಅರಣ್ಯ ಇಲಾಖೆಯ ‘ವರ್ಗಾವಣೆ ಮತ್ತು ಸಮಾಲೋಚನೆ ನಿರ್ವಹಣಾ ವ್ಯವಸ್ಥೆ’ (ಟಿಸಿಎಂಎಸ್‌) ಮೂಲಕ  ಕರಾವಳಿ ಮತ್ತು ಸಾಗರ ಪರಿಸರ ವ್ಯವಸ್ಥೆ ಕೋಶದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ 2024ರ ಮಾರ್ಚ್‌ನಲ್ಲಿ ಇಲಾಖೆ ಸೂಚಿಸಿತ್ತು. ಆಗಲೂ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ವರ್ಷದಿಂದ ಅವರಿಗೆ ಇಲಾಖೆಯಿಂದ ವೇತನ ಪಾವತಿ ಆಗುತ್ತಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ತಿಳಿಸಿದರು.

ಪ್ರತಿಕ್ರಿಯೆಗೆ ಸಂಜೀವ ಲಭ್ಯರಾಗಲಿಲ್ಲ. 

‘ನಿರ್ದಿಷ್ಟ ಸಮುದಾಯದ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪ ಹೊತ್ತಿರುವ ಸಂಜೀವ ಅವರ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅವರಿ‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.