ಮೂಡುಬಿದಿರೆ: ‘ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸದ ಧರ್ಮ ಯಾಕೆ ಎಂಬುದು ‘ಘಾಂದ್ರುಕ್’ ಕೃತಿಯ ಒಳನೋಟವೂ ಹೌದು’ ಎಂದು ಕಾದಂಬರಿಕಾರ ಸತೀಶ್ ಚಪ್ಪರಿಕೆ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಮ್ಮ ‘ಘಾಂದ್ರುಕ್’ ಕಾದಂಬರಿ ಅವಲೋಕನ - ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರತಿಕ್ರಿಯಿಸಿದರು.
‘ಧರ್ಮ ಇಂದು ವ್ಯಾಪಾರಿ ಸರಕಾಗುತ್ತಿದೆ. ಮನುಕುಲದ ಉದ್ಧಾರಕ್ಕಾಗಿ ಬಳಕೆಯಾಗುತ್ತಿಲ್ಲ. ಒಕ್ಕಲೆಬ್ಬಿಸುವುದೂ ಹಿಂಸೆ. ಜಾಗತಿಕ ಮಟ್ಟದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಿ‘ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೃತಿಕಾರನ ಬದುಕು ಆತನ ಬರಹದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಿಂಬಿತವಾಗಿರುತ್ತದೆ. ‘ಇಲ್ಲ’ ಎನ್ನುವುದಾದದರೆ, ಆತ ಸುಳ್ಳು ಹೇಳುತ್ತಿರಬಹುದು ಅಥವಾ ಬರಹ ಕದ್ದಿರಬಹುದು ಎಂದರು.
‘ಪುಸ್ತಕದಷ್ಟು ದೊಡ್ಡ ಆಸ್ತಿ ಬೇರೆ ಇಲ್ಲ. ಪುಸ್ತಕ ಓದಿ. ಬರಹ ತೃಪ್ತಿ ನೀಡುತ್ತದೆ. ಅನುಭವ, ಓದು, ಜೀವನ ನೋಡುವ ರೀತಿಯೇ ನಿಮ್ಮ ಸೃಜನಶೀಲತೆಯನ್ನು ರೂಪಿಸುತ್ತದೆ. ಕನಸು ದೊಡ್ಡದಾಗಿ ಇರಲಿ. ಸಾಕಷ್ಟು ಅವಕಾಶಗಳಿವೆ. ಅದಕ್ಕೆ ತಕ್ಕಂತೆ ಜ್ಞಾನ ಮತ್ತು ತಂತ್ರಜ್ಞಾನ ವೃದ್ಧಿಸಿಕೊಳ್ಳಿ’ ಎಂದರು.
ಕೃತಿ ಪರಿಚಯ ಮಾಡಿದ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ ರಾಜಶೇಖರ ಹಳೆಮನೆ, ಬದುಕಿನ ಹಪಾಹಪಿಗಳನ್ನೆಲ್ಲ ಕಳೆದುಕೊಂಡು ಸ್ವಚ್ಛ ನದಿಯಂತೆ ಇರುವ ಹಳ್ಳಿ ‘ಘಾಂದ್ರುಕ್’. ಇದುವೇ ಕೃತಿಯ ಹೆಸರು. ಇದು ಹೊಸ ಕಥನ ಮಾದರಿ. ಕಾದಂಬರಿಯಲ್ಲಿ ನಾಲ್ಕು ಭಾಗಗಳಿವೆ. ನಾಯಕ ಸಿದ್ಧಾರ್ಥನ ಹಳ್ಳಿಯ ಬಾಲ್ಯ, ಕಾರ್ಪೊರೇಟ್ ಜಗತ್ತಿನ ವ್ಯವಹಾರ, ಅಂತರರಾಷ್ಟ್ರೀಯ ರಕ್ತಸಿಕ್ತ ಅಧ್ಯಾಯ, ಕೊನೆಗೆ ಸಿಗಬಹುದಾದ ಸಂತೃಪ್ತಿಗಳಿವೆ ಎಂದು ವಿವರಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಇದ್ದರು. ವಿದ್ಯಾರ್ಥಿನಿ ಕವನಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.