ADVERTISEMENT

ಮಂಗಳೂರು: ಸಂವಿಧಾನ ರಚಿಸಿದ್ದು ಅಂಬೇಡ್ಕರ್‌ ಅಲ್ಲವೆಂದು ಅಪಪ್ರಚಾರ

ಪರಿಶಿಷ್ಟ ಸಮುದಾಯ–ಪಂಗಡದವರ ಅಹವಾಲು ಸಭೆಯಲ್ಲಿ ದಲಿತ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 6:05 IST
Last Updated 29 ಫೆಬ್ರುವರಿ 2024, 6:05 IST
<div class="paragraphs"><p>ಪರಿಶಿಷ್ಟರ ಅಹವಾಲು ಆಲಿಸುವ ಸಭೆಯಲ್ಲಿ ದಲಿತ ಮುಖಂಡ ಚಂದ್ರಕುಮಾರ್‌ ಮಾತನಾಡಿದರು.</p></div>

ಪರಿಶಿಷ್ಟರ ಅಹವಾಲು ಆಲಿಸುವ ಸಭೆಯಲ್ಲಿ ದಲಿತ ಮುಖಂಡ ಚಂದ್ರಕುಮಾರ್‌ ಮಾತನಾಡಿದರು.

   

– ಪ್ರಜಾವಾಣಿ ಚಿತ್ರ 

ಮಂಗಳೂರು: ‘ಸಂವಿಧಾನ ರಚಿಸಿದ್ದು ಅಂಬೇಡ್ಕರ್‌ ಎಂದು ಪಠ್ಯಪುಸ್ತಕದಲ್ಲಿ ಇದೆ. ಆದರೆ, ಅಂಬೇಡ್ಕರ್‌ ಸಂವಿಧಾನ ರಚಿಸಿಲ್ಲ. ಅದನ್ನು ರಚಿಸಿದ್ದು ಬೆನಗಲ್‌ ನರಸಿಂಗ ರಾವ್‌. ಇದನ್ನು ಹೆಮ್ಮೆಯಿಂದ ಹೇಳುತ್ತೇನೆ. ಸಣ್ಣ ಮಕ್ಕಳಿಗೂ ಇದನ್ನೇ ಹೇಳಿಕೊಡಬೇಕು‘ ಎಂದು ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪಪ್ರಚಾರ ಮಾಡುತ್ತಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ದಲಿತ ಮುಖಂಡರು ಒತ್ತಾಯಿಸಿದರು.

ADVERTISEMENT

ಪರಿಶಿಷ್ಟ ಸಮುದಾಯದವರ ಅಹವಾಲು ಆಲಿಸಲು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದ ಶೀನ ಮಾಸ್ತಿಕಟ್ಟೆ, ‘ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಈ ವಿಡಿಯೊ ಹರಿದಾಡುತ್ತಿದೆ. ಅಂಬೇಡ್ಕರ್‌ ವಿರುದ್ಧ ನಡೆಯುತ್ತಿರುವ ಈ ವ್ಯವಸ್ಥಿತ ಅಪಪ್ರಚಾರ ಪರಿಶಿಷ್ಟರಿಗೆ ಮಾಡುವ ಅಪಮಾನ. ಈ ವಿಡಿಯೊದಲ್ಲಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಪರಿಶಿಷ್ಟ ಸಮುದಾಯಗಳ ಇತರ ಮುಖಂಡರೂ ಇದಕ್ಕೆ ದನಿಗೂಡಿಸಿದರು.

ಯಾವ ಮೂಲದಿಂದ ಈ ವಿಡಿಯೊ ಸಿಕ್ಕಿದೆ ಎಂಬ ಮಾಹಿತಿ ನೀಡಿದರೆ, ಸೈಬರ್‌ ಅಪರಾಧ ತಡೆ ಕಾನೂನಿನಡಿ ಕ್ರಮವಹಿಸುತ್ತೇವೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್‌ ತಿಳಿಸಿದರು.

‘ಅಂಬೇಡ್ಕರ್‌ ಅವರಿಗೆ ಬೇರೆ ಬೇರೆ ರೀತಿಯಲ್ಲಿ ಅವಮಾನಿಸಲಾಗುತ್ತಿದೆ. ನಗರದ ಅಂಬೇಡ್ಕರ್‌ ವೃತ್ತದ ಅಭಿವೃದ್ಧಿಯನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ. ಈ ಕಾಮಗಾರಿಗೆ ₹ 98 ಲಕ್ಷ ಮಂಜೂರಾಗಿ ಒಂದೂವರೆ ವರ್ಷ ಆಗಿದೆ. ಆ ಹಣ ಎಲ್ಲಿಗೆ ಹೋಯಿತು ತಿಳಿದಿಲ್ಲ’ ಎಂದು ಎಸ್‌.ಪಿ.ಆನಂದ ಆರೋಪಿಸಿದರು.

‘ಅಂಬೇಡ್ಕರ್ ವೃತ್ತದ ಹೆಸರನ್ನು ಈಗಲೂ ಜ್ಯೋತಿ ವೃತ್ತ ಎಂದೇ ಕರೆಯಲಾಗುತ್ತಿದೆ. ಬಸ್‌ಗಳ ಮಾರ್ಗಸೂಚಿ ಫಲಕಗಳಲ್ಲೂ ಅಂಬೇಡ್ಕರ್ ವೃತ್ತ ಎಂದು ಬರೆಯುತ್ತಿಲ್ಲ. ಈ ವೃತ್ತದ ಅಭಿವೃದ್ಧಿಗೆ ತಿಂಗಳ ಒಳಗೆ ಕ್ರಮ ವಹಿಸದೇ ಇದ್ದರೆ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಅಣ್ಣಪ್ಪ ಬಿ.ಕೆ ಎಚ್ಚರಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಸುಳ್ಯ, ಬೆಳ್ಳಾರೆ ಮತ್ತು ವಿಟ್ಲದಲ್ಲಿ ಅಂಬೇಡ್ಕರ್‌ ಭವನ ಕಾಮಗಾರಿ ನನೆಗುದಿಗೆ ಬಿದ್ದಿವೆ. ಪುತ್ತೂರಿನಲ್ಲಿ ಅಂಬೇಡ್ಕರ್‌ ಭವನಕ್ಕೆ 75 ಸೆಂಟ್ಸ್ ಜಾಗ ಮೀಸಲಿಡಲಾಗಿದೆ. ಅಲ್ಲಿ ಭವನ ನಿರ್ಮಿಸಲು ಅಧಿಕಾರಿಗಳು ಕ್ರಮವಹಿಸುತ್ತಿಲ್ಲ’ ಎಂದು ಅವರು ದೂರಿದರು.

‘ಲೈಂಗಿಕ ದೌರ್ಜ್ಯನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅಡಿ ದಾಖಲಾದ ಕೆಲ ಪ್ರಕರಣಗಳಲ್ಲಿ ಆರೋಪಿಗಳ ಸುಳಿವಿದ್ದರೂ ಬಂಧಿಸಲು 10 ದಿನ ತೆಗೆದುಕೊಂಡರು’ ಎಂದು ಬೆಳ್ತಂಗಡಿಯ ಈಶ್ವರಿ ದೂರಿದರು.

‘ಬಳ್ನಾಡು ಗ್ರಾಮ‌ದಲ್ಲಿ ಕಸ ವಿಲೇವಾರಿ ವಾಹನದ ಪರಿಶಿಷ್ಟ ಸಮುದಾಯದ ಮಹಿಳೆಯೊಬ್ಬರನ್ನು ಕಾರಣವಿಲ್ಲದೇ ಕೆಲಸದಿಂದ ಕಿತ್ತು ಹಾಕಿದ್ದಾರೆ. ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ತಿಂಗಳು ಕಳೆದರೂ ಕ್ರಮವಾಗಿಲ್ಲ. ಪದವೀಧರೆಯಾಗಿರುವ ಈ ಮಹಿಳೆಗೆ ಇಬ್ಬರು ಮಕ್ಕಳು ಇದ್ದಾರೆ‌’ ಎಂದು ಎಸ್‌.ಪಿ.ಆನಂದ ಗಮನ ಸೆಳೆದರು.

ದಕ್ಷಿನ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಎಂ.ಧರ್ಮಪ್ಪ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಹಾಗೂ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

‘ಕೋಳಿಅಂಕ ಜೂಜು– ಕ್ರಮವೇಕಿಲ್ಲ’

‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೋಳಿ ಅಂಕ ಜೂಜು ಅವ್ಯಾಹತವಾಗಿ ನಡೆಯುತ್ತಿದ್ದು ಬಡವರ ಎಷ್ಟೊ ಸಂಸಾರಗಳು ಸಂಕಷ್ಟದಲ್ಲಿ ಸಿಲುಕುತ್ತಿವೆ. ಈ ಜೂಜಿನ ಸಂತ್ರಸ್ತರಲ್ಲಿ ಹೆಚ್ಚಿನವರು ಪರಿಶಿಷ್ಟ ಸಮುದಾಯದವರೇ ಆಗಿದ್ದಾರೆ. ಕೋಲ ಜಾತ್ರೆ ಇದ್ದಾಗ ಸಂಪ್ರದಾಯಕ್ಕಾಗಿ ಒಂದು ದಿನ ಕೋಳಿಅಂಕ ನಡೆಸಲಿ. ಅದು ಬಿಟ್ಟು ವಾರಗಟ್ಟಲೆ ನಡೆಸಿದರೆ ಹೇಗೆ‘ ಎಂದು ಸದಾಶಿವ ಉರ್ವಸ್ಟೋರ್‌ ಪ್ರಶ್ನಿಸಿದರು.‌

‘ಪ್ರೌಢಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಲೂ  ಕೋಳಿಅಂಕದ ದಾಸರಾಗುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕೊಟ್ಟರೂ  ಕಟ್ಟುನಿಟ್ಟಿನ‌  ಕ್ರಮ ಆಗುತ್ತಿಲ್ಲ’ ಎಂದು ಎಸ್‌.ಪಿ.ಆನಂದ ಬೇಸರ ವ್ಯಕ್ತಪಡಿಸಿದರು.  ‘ಇಂತಹ ನಿರ್ದಿಷ್ಟ ಪ್ರಕರಣಗಳಿದ್ದರೆ ಗಮನಕ್ಕೆ ತನ್ನಿ. ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಡಿಸಿಪಿ (ಅಪರಾಧ) ದಿನೇಶ್‌ ಕುಮಾರ್‌ ತಿಳಿಸಿದರು.

‘ಐಕಳದಲ್ಲಿ ಅಕ್ರಮ ಗಣಿಗಾರಿಕೆ’

‘ಐಕಳ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ದಲಿತ ಕಾಲೊನಿ ಬಳಿ ಕಲ್ಲು ಅಕ್ರಮ‌ ಗಣಿಗಾರಿಕೆ ನಡೆಯುತ್ತಿದೆ. ದಿನಕ್ಕೆ 20 ಲೋಡ್‌ಗೂ ಹೆಚ್ಚು ಕಲ್ಲುಗಳನ್ನು ಸಾಗಿಸಲಾಗುತ್ತದೆ. ಗಣಿಗಾರಿಕೆಗೆ ಐದು ಟಿಪ್ಪರ್‌ ಲಾರಿಗಳು ಸೇರಿ ಏಳು ವಾಹನಗಳನ್ನು  ಬಳಕೆಯಾಗುತ್ತಿದ್ದರೂ ಕೇವಲ ಒಂದು ಹಿಟಾಚಿ ವಾಹನವನ್ನು ಮಾತ್ರ ವಶಕ್ಕೆ ಪಡೆದು ಕ್ರಮವಹಿಸಿದ್ದಾರೆ. ಈ ಬಗ್ಗೆ ದೂರು ನೀಡಿದ ನನಗೇ ಬೆದರಿಕೆ ಹಾಕಲಾಗಿದೆ’ ಎಂದು ರಾಮಚಂದ್ರ ಕಂಗುರಿ ಆರೋಪಿಸಿದರು.

‘ಗಣಿಗಾರಿಕೆಗೆ ಸ್ಫೋಟಕ ಬಳಸಲಾಗುತ್ತಿದ್ದು ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಗಮನ ಸೆಳೆದರೂ ಪಂಚಾಯತಿಯ ಅಧಿಕಾರಿಗಳು ಸ್ಥಳಕ್ಕೆ‌ ಭೇಟಿ ನೀಡಿಲ್ಲ.ಈ ಮನೆಗಳಿಗೆ ಪರಿಹಾರ ಕೊಡಿಸಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.