ADVERTISEMENT

ಹರಿಹರದಲ್ಲಿ ರಸಗೊಬ್ಬರ ಕಾರ್ಖಾನೆ: ಸದಾನಂದಗೌಡ

ಎಂ.ಎನ್‌. ರಾಜೇಂದ್ರಕುಮಾರ್ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 18:24 IST
Last Updated 19 ಜನವರಿ 2019, 18:24 IST
ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಎಂ.ಎನ್‌. ರಾಜೇಂದ್ರಕುಮಾರ್ ಅವರಿಗೆ ಸಹಕಾರಿ ಭೂಷಣ ಪ್ರಶಸ್ತಿಯನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರದಾನ ಮಾಡಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಎಂ.ಎನ್‌. ರಾಜೇಂದ್ರಕುಮಾರ್ ಅವರಿಗೆ ಸಹಕಾರಿ ಭೂಷಣ ಪ್ರಶಸ್ತಿಯನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರದಾನ ಮಾಡಿದರು.   

ಮಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯು ₹6 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಎಂ.ಎನ್‌. ರಾಜೇಂದ್ರಕುಮಾರ್‌ ಅವರ ರಜತ ಸಂಭ್ರಮದ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಎಂ.ಎನ್‌. ರಾಜೇಂದ್ರಕುಮಾರ್ ಅವರೇ ರಾಜ್ಯ ಸಹಕಾರ ಮಾರಾಟ ಮಂಡಳಿಯ ಅಧ್ಯಕ್ಷರಾಗಿದ್ದು, 300 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಆರಂಭಿಸಲು ಉತ್ಸುಕತೆ ತೋರಿದ್ದಾರೆ. ಈ ಕಾರ್ಖಾನೆ ಆರಂಭವಾದ ನಂತರ ರಾಜ್ಯಕ್ಕೆ ಬೇಕಿರುವ ರಸಗೊಬ್ಬರವನ್ನು ಇದೇ ಕಾರ್ಖಾನೆಯನ್ನು ಉತ್ಪಾದಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸುಮಾರು ₹16 ಸಾವಿರ ಕೋಟಿ ವೆಚ್ಚದಲ್ಲಿ 5 ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಹೊಸ ಕಾರ್ಖಾನೆ ಸ್ಥಾಪಿಸಲು ಅನುದಾನ ಒದಗಿಸುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ಈ ಹೊಸ ಕಾರ್ಖಾನೆ ಆರಂಭವಾಗಲಿದೆ ಎಂದರು.

ರಾಜ್ಯದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ರೈತರ ಹಿತ ಕಾಪಾಡುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ರಸಗೊಬ್ಬರ ಕಾರ್ಖಾನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಸಹಕಾರ ಮಾರಾಟ ಮಂಡಳಿ ಅಧ್ಯಕ್ಷರೂ ಆದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌, ರಾಜ್ಯ ಸರ್ಕಾರ ಹರಿಹರದಲ್ಲಿ 300–400 ಎಕರೆ ಜಮೀನು ಒದಗಿಸಬೇಕು. ಹರಿಹರದ ಸಕ್ಕರೆ ಕಾರ್ಖಾನೆಗೆ ಸೇರಿದ ಜಾಗವಿದ್ದು, ಅದನ್ನು ಹಸ್ತಾಂತರಿಸಿದಲ್ಲಿ, ತ್ವರಿತಗತಿಯಲ್ಲಿ ಕಾರ್ಖಾನೆಯ ಕೆಲಸ ಆರಂಭಿಸಲಾಗುವುದು ಎಂದು ಹೇಳಿದರು.

ರಾಜೇಂದ್ರಕುಮಾರ್‌ ಅವರಿಗೆ ‘ಸಹಕಾರಿ ಭೂಷಣ’ ಪ್ರಶಸ್ತಿ ಪ್ರದಾನ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಹಕಾರ ರಂಗ ಮಾಡಿರುವ ಸಾಧನೆ, ಇತರ ಜಿಲ್ಲೆಗಳಲ್ಲೂ ಕಾಣಬೇಕು. ಅದಕ್ಕಾಗಿ ತಜ್ಞರ ತಂಡ ಕಳುಹಿಸಿ, ಇಲ್ಲಿನ ಸಾಧನೆಗಳ ಅಧ್ಯಯನ ಕೈಗೊಳ್ಳಬೇಕು ಎಂದು ಸಚಿವ ಕಾಶೆಂಪೂರ ಅವರಿಗೆ ಸಲಹೆ ಮಾಡಿದರು.

ಜನಸಾಗರ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿ ಸತತ 25 ವರ್ಷ ಪೂರೈಸಿದ ಎಂ.ಎನ್‌. ರಾಜೇಂದ್ರಕುಮಾರ್‌ ಅವರ ರಜತ ಸಂಭ್ರಮ ಹಾಗೂ 20 ವರ್ಷ ಪೂರೈಸಿದ ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾರಂಭದಲ್ಲಿ ಸುಮಾರು ಒಂದೂವರೆ ಲಕ್ಷ ಜನರ ಭಾಗವಹಿಸಿದ್ದರು.

ನಗರದ ನೆಹರೂ ಮೈದಾನದಲ್ಲಿ ಹಾಕಿದ್ದ ಬೃಹತ್‌ ಪೆಂಡಾಲ್‌ ಸಂಪೂರ್ಣ ಭರ್ತಿಯಾಗಿತ್ತು. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆಯಿಂದ ನವೋದಯ ಸ್ವಸಹಾಯ ಸಂಘದ ಸದಸ್ಯೆಯರು ಒಂದೇ ರೀತಿಯ ಸೀರೆಯನ್ನುಟ್ಟು ಭಾಗವಹಿಸಿದ್ದು ವಿಶೇಷವಾಗಿತ್ತು.

ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ನೆಹರೂ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ 61 ವಿವಿಧ ಕಲಾ ತಂಡಗಳು,ಸ್ತಬ್ಧಚಿತ್ರಗಳು ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.