ADVERTISEMENT

ಮಂಗಳೂರು: ₹15 ಸಾವಿರ ಕೋಟಿ ವ್ಯವಹಾರ; ₹79 ಕೋಟಿ ಲಾಭ

ಎಸ್‌ಸಿಡಿಸಿಸಿ ಬ್ಯಾಂಕ್‌: ಮುಂದಿನ ವರ್ಷ 10 ಹೊಸ ಶಾಖೆ ಆರಂಭ; ಅಧ್ಯಕ್ಷ ರಾಜೇಂದ್ರ ಕುಮಾರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 6:28 IST
Last Updated 5 ಏಪ್ರಿಲ್ 2024, 6:28 IST
ರಾಜೇಂದ್ರ ಕುಮಾರ್ –ಪ್ರಜಾವಾಣಿ ಚಿತ್ರ 
ರಾಜೇಂದ್ರ ಕುಮಾರ್ –ಪ್ರಜಾವಾಣಿ ಚಿತ್ರ    

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2023–24 ಆರ್ಥಿಕ ವರ್ಷದಲ್ಲಿ ₹15,540.80 ಕೋಟಿ ಮೊತ್ತದ ವ್ಯವಹಾರ ನಡೆಸಿದ್ದು ₹ 79.09 ಕೋಟಿ ಲಾಭ ಗಳಿಸಿದೆ. 110 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬ್ಯಾಂಕ್‌ ಲಾಭ ಗಳಿಕೆಯಲ್ಲಿ ಈ ಬಾರಿ ಸಾರ್ವಕಾಲಿಕ ದಾಖಲೆ ಮಾಡಿದೆ ಎಂದು ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ ಠೇವಣಿ ಸಂಗ್ರಹದಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಪೈಕಿ ಮುಂಚೂಣಿಯಲ್ಲಿದೆ. ಠೇವಣಿ ಸಂಗ್ರಹದಲ್ಲಿ ಕಳೆದ ಬಾರಿಗಿಂತ ಶೇಕಡ 13.33 ಏರಿಕೆ ಕಂಡಿದೆ ಎಂದರು.

ಸ್ಪರ್ಧಾತ್ಮಕ ಸೇವೆಯ ನಡುವೆ ಬ್ಯಾಂಕ್ ₹ 6,485.12 ಕೋಟಿ ಮುಂಗಡ ನೀಡಿದ್ದು ₹ 2,032.28 ಕೋಟಿ ಮೊತ್ತವನ್ನು ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ನೀಡಿದೆ. ಮಧ್ಯಮಾವಧಿ ಸಾಲದ ರೂಪದಲ್ಲಿ ₹ 136.99 ಕೋಟಿ ನೀಡಿದ್ದು ಕೃಷಿಯೇತರ ಕ್ಷೇತ್ರಕ್ಕೆ ₹ 4,315.85 ಕೋಟಿ ಸಾಲ ನೀಡಿದೆ. ಕೃಷಿ ಸಾಲ ಮರುಪಾವತಿಯಲ್ಲಿ ಸತತ 29 ವರ್ಷಗಳಿಂದ ಶೇಕಡ 100ರ ಸಾಧನೆ ಆಗಿದೆ.

ADVERTISEMENT

ಬ್ಯಾಂಕ್‌ಗೆ ಒಟ್ಟು 1072 ಸದಸ್ಯ ಸಂಘಗಳು ಇದ್ದು ಇವುಗಳ ಪಾಲು ಬಂಡವಾಳ ₹ 403.59 ಕೋಟಿ, ದುಡಿಯುವ ಬಂಡವಾಳ ₹ 11,379.23 ಕೋಟಿ. ₹ 261 ಕೋಟಿ ಮೊತ್ತದ ವಿವಿಧ ನಿಧಿಗಳು ಇವೆ. 1,37,010 ರುಪೇ ಕಿಸಾನ್ ಕಾರ್ಡ್‌ ಮತ್ತು 80,668 ರುಪೇ ಡೆಬಿಟ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಬ್ಯಾಂಕ್‌, ಕೇಂದ್ರ ಸರ್ಕಾರದ ‘ಅಟಲ್ ಪಿಂಚಣಿ ಯೋಜನೆ’ ಸಮರ್ಪಕವಾಗಿ ಜಾರಿಗೆ ತಂದಿದ್ದು ದಾಖಲೆ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿದೆ. 34,474 ಸ್ವಸಹಾಯ ಗುಂಪುಗಳನ್ನು ಹೊಂದಿದ್ದು ನವೋದಯ ಸ್ವಸಹಾಯ ಸಂಘಗಳ ಸದಸ್ಯೆಯರಿಗೆ ಸಮವಸ್ತ್ರ ವಿತರಿಸಲಾಗಿದೆ. 1,56,063 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ವಿತರಿಸಲಾಗಿದೆ. 89,138 ಕಿಸಾನ್ ಕ್ರೆಡಿಟ್ ಕಾರ್ಡ್‌ದಾರರಿಗೆ ಅಪಘಾತ ವಿಮೆ ಸೌಲಭ್ಯ ಒದಗಿಸಲಾಗಿದೆ. ಮೊಬೈಲ್ ಬ್ಯಾಂಕಿಂಗ್‌ ಸೇವೆ ಸಮರ್ಪಕವಾಗಿದೆ ಎಂದು ರಾಜೇಂದ್ರ ಕುಮಾರ್ ವಿವರಿಸಿದರು. 

ಮುಂದಿನ ಯೋಜನೆಗಳು

ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ (ಐಬಿಪಿಎಸ್‌) ಯೋಜನೆ ಜಾರಿಗೆ ತರುವ ಚಿಂತನೆ ಇದ್ದು ಇದರಿಂದ ಗ್ರಾಹಕರು ಮೊಬೈಲ್ ಫೋನ್ ಮೂಲಕವೇ ಖಾತೆಯಿಂದ ಇತರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಬಹುದು. ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ಜಾರಿಗೆ ಬರಲಿದ್ದು ವಿದ್ಯುತ್ ಬಿಲ್, ನೀರಿನ ಬಿಲ್, ಡಿಟಿಎಚ್ ರೀಚಾರ್ಜ್ ಇತ್ಯಾದಿಗಳನ್ನು ಬ್ಯಾಂಕ್‌ ಶಾಖೆಗಳ ಮೂಲಕ ನಿರ್ವಹಿಸಬಹುದು. ಮುಂದಿನ ಆರ್ಥಿಕ ವರ್ಷದಲ್ಲಿ 10 ಹೊಸ ಶಾಖೆ ತೆರೆಯುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ಎಲ್ಲ ಶಾಖೆಗಳು ಸಂಪೂರ್ಣ ಗಣಕೀಕರಣಗೊಂಡಿದ್ದು ಏಕ ಗವಾಕ್ಷಿ, ಆರ್‌ಟಿಜಿಎಸ್, ನೆಫ್ಟ್ ಹಾಗೂ ಕೋರ್ ಬ್ಯಾಂಕಿಂಗ್‌ನಂಥ ಉತ್ಕೃಷ್ಟ ಸೇವೆ ನೀಡುತ್ತಿದೆ. ಕೇಂದ್ರ ಕಚೇರಿಯಲ್ಲಿರುವ ಕೊಡಿಯಾಲ್‍ಬೈಲ್ ಶಾಖೆ, ಪುತ್ತೂರು, ಉಪ್ಪಿನಂಗಡಿ, ಸವಣೂರು, ಬೆಳ್ತಂಗಡಿ ಹಾಗೂ ಸಿದ್ದಾಪುರ ಶಾಖೆಗಳಿಗೆ ಸ್ವಂತ ಕಟ್ಟಡ ಇದೆ. ವ್ಯವಹಾರ ಸರಳ ಮಾಡುವುದಕ್ಕಾಗಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ. 14 ಶಾಖೆಗಳಲ್ಲಿ ಎಟಿಎಂ ಇದೆ. 21 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19 ಬಾರಿ ನಬಾರ್ಡ್ ಪ್ರಶಸ್ತಿ, ತಲಾ 2 ಬಾರಿ ‘ಎಫ್‍ಸಿಬಿಎ’ ಮತ್ತು ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ ಲಭಿಸಿದೆ ಎಂದು ಅವರು ತಿಳಿಸಿದರು.

ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್‌, ಭಾಸ್ಕರ ಎಸ್.ಕೋಟ್ಯಾನ್‌, ಎಂ.ವಾದಿರಾಜ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಎಸ್‌.ರಾಜು ಪೂಜಾರಿ, ಶಶಿಕುಮಾರ್ ರೈ ಬಿ, ಎಸ್‌.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಕೆ.ಜೈರಾಜ್ ಬಿ.ರೈ, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಕುಶಾಲಪ್ಪ ಗೌಡ ಪಿ, ಎಸ್‌.ಎನ್‌.ಮನ್ಮಥ, ಸದಾಶಿವ ಉಳ್ಳಾಲ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ ಇದ್ದರು.

₹ 61.29 ಕೋಟಿ

ಕಳೆದ ವರ್ಷ ಗಳಿಸಿದ ಲಾಭ

ಶೇ 29.04

ಲಾಭಾಂಶದಲ್ಲಿ ಈ ವರ್ಷದ ಏರಿಕೆ

₹ 13514.51 ಕೋಟಿ

ಕಳೆದ ವರ್ಷದ ಒಟ್ಟು ವ್ಯವಹಾರ

ಶೇ 14.99

ವ್ಯವಹಾರದಲ್ಲಿ ಈ ವರ್ಷದ ಏರಿಕೆ

₹ 7221.37 ಕೋಟಿ

ಬ್ಯಾಂಕ್ ಸಂಗ್ರಹಿಸಿರುವ ಒಟ್ಟು ಠೇವಣಿ

₹ 18 ಸಾವಿರ ಕೋಟಿ

ಮುಂದಿನ ಆರ್ಥಿಕ ವರ್ಷದ ವ್ಯವಹಾರದ ಗುರಿ

₹ 2169.27 ಕೋಟಿ

ಕೃಷಿ ಕ್ಷೇತ್ರಕ್ಕೆ ನೀಡಿರುವ ಸಾಲದ ಒಟ್ಟು ಮೊತ್ತ

₹ 8319.43 ಕೋಟಿ

ಕೃಷಿ, ಕೃಷಿಯೇತರ ಸಾಲಗಳ ಹೊರಬಾಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.