ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ (ಎಸ್‍ಸಿಡಿಸಿಸಿ) 110ನೇ ಶಾಖೆಯ ಉದ್ಘಾಟನೆ ಹಾಗೂ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಏ.4ರಂದು ಬೆಳಿಗ್ಗೆ 10.30ಕ್ಕೆ ಬೈಂದೂರು ತಾಲ್ಲೂಕಿನ ಉಪ್ಪುಂದದಲ್ಲಿ ನಡೆಯಲಿದೆ.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸುವರು.
ಗ್ರಾಮೀಣ ಪ್ರದೇಶದಲ್ಲಿ ಬಡಜನರ ಆರ್ಥಿಕ ಶಕ್ತಿಯಾಗಿ ಮೂಡಿಬಂದಿರುವ ನವೋದಯ ಸ್ವಸಹಾಯ ಸಂಘಗಳು ಆರ್ಥಿಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆಯನ್ನು ಇಡುತ್ತಿವೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ನಡೆಯಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಸಮಾವೇಶ ಉದ್ಘಾಟಿಸುವರು.
ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ಕೃಷಿ ಸಚಿವ ಬಿ.ಸಿ. ಪಾಟೀಲ್ ಹೊಸ ಸ್ವಸಹಾಯ ಗುಂಪುಗಳ ಉದ್ಘಾಟನೆ, ಮೀನುಗಾರಿಕೆ ಸಚಿವ ಎಸ್. ಅಂಗಾರ ಪ್ರಥಮ ಠೇವಣಿ ಪತ್ರ ಬಿಡುಗಡೆ ನೆರವೇರಿಸುವರು. ಸಂಸದ ಬಿ.ವೈ. ರಾಘವೇಂದ್ರ ಸಾಲ ವಿತರಣೆ ನೆರವೇರಿಸುವರು. ಶಾಸಕ ಜಿ.ಟಿ. ದೇವೇಗೌಡ ಚೈತನ್ಯ ವಿಮಾ ಚೆಕ್ ವಿತರಿಸುವರು.
ನೂತನ ಶಾಖೆಯ ಗಣಕೀಕರಣದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಭದ್ರತಾ ಕೋಶದ ಉದ್ಘಾಟನೆಯನ್ನು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ವಾಹನ ಸಾಲ ಪತ್ರ ವಿತರಣೆಯನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಲಾಕರ್ ಕೀ ಹಸ್ತಾಂತರವನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ನೆರವೇರಿಸುವರು.
3ರಂದು ಹೊರೆಕಾಣಿಕೆ ಸಮರ್ಪಣೆ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ, ರಥೋತ್ಸವ ಹಾಗೂ ನಾಗಮಂಡಲೋತ್ಸವದ ಪ್ರಯುಕ್ತ ಎಸ್‍ಸಿಡಿಸಿಸಿ ಬ್ಯಾಂಕ್, ಸ್ವಸಹಾಯ ಸಂಘಗಳ ಒಕ್ಕೂಟ, ಬೆಳಪು, ಪಣಿಯೂರು, ಎಲ್ಲೂರು, ಉಚ್ಚಿಲ ಹಾಗೂ ಬೆಳಪು ಸೇವಾ ಸಹಕಾರಿ ಸಂಘದ ವತಿಯಿಂದ ಹೊರೆಕಾಣಿಕೆ ಸಮರ್ಪಣೆಯನ್ನು ಏ.3ರಂದು ನಡೆಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.