ADVERTISEMENT

ತೆರೆದಿದೆ ಶಾಲೆ ಬನ್ನಿ ಓ ಮಕ್ಕಳೇ...

ಪ್ರಾರಂಭೋತ್ಸವಕ್ಕೆ ಸಿದ್ಧತೆ, ಮಾವಿನ ತೋರಣದಿಂದ ಶಾಲೆಗೆ ಶೃಂಗಾರ

​ಪ್ರಜಾವಾಣಿ ವಾರ್ತೆ
Published 30 ಮೇ 2024, 6:29 IST
Last Updated 30 ಮೇ 2024, 6:29 IST
ಮಂಗಳೂರಿನ ಮಣ್ಣಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ನಡೆಯಿತು – ಪ್ರಜಾವಾಣಿ ಚಿತ್ರ
ಮಂಗಳೂರಿನ ಮಣ್ಣಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ನಡೆಯಿತು – ಪ್ರಜಾವಾಣಿ ಚಿತ್ರ   

ಮಂಗಳೂರು: ಬೇಸಿಗೆ ರಜೆ ಮುಗಿದಿದೆ, ಶಾಲೆಗೆ ಹೊರಡಲು ಪುಟಾಣಿಗಳು ಅಣಿಯಾಗಿದ್ದಾರೆ. ಎರಡು ತಿಂಗಳ ನಂತರ ಮತ್ತೆ ಶಾಲೆಯ ಮೆಟ್ಟಿಲು ಹತ್ತಲಿರುವ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ಶಿಕ್ಷಕರು ಕಾತರರಾಗಿದ್ದಾರೆ.

ಬುಧವಾರದಿಂದ ಶಾಲೆಗಳು ಆರಂಭವಾಗಿವೆ. ತರಗತಿ ಕೊಠಡಿಗಳು ಬಾಗಿಲು ತೆರೆದಿವೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಶಾಲೆಗೆ ಬಂದು ಹೊಸ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ತೊಡಗಿದ್ದಾರೆ. ಹಳೆ ವಿದ್ಯಾರ್ಥಿಗಳು ಶಾಲೆಗಳ ಕೊಠಡಿಗಳ ದೂಳು ಹೊಡೆದು, ಡೆಸ್ಕ್‌– ಬೆಂಚ್‌ಗಳನ್ನು ಸ್ವಚ್ಛಗೊಳಿಸಲು ಶಾಲಾ ಸಹಾಯಕರಿಗೆ ನೆರವಾದರು. ಕೆಲವು ಶಾಲೆಗಳಲ್ಲಿ ಶಿಕ್ಷಕರು– ಪೋಷಕರ ಸಭೆಯೂ ನಡೆದವು.

ಉತ್ತರ ಕರ್ನಾಟಕದಿಂದ ದುಡಿಮೆಗಾಗಿ ಬಂದು ನೆಲೆಸಿರುವ ಕುಟುಂಬಗಳ ಮಕ್ಕಳೇ ಮಂಗಳೂರು ನಗರದ ಹೆಚ್ಚಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಆಸರೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಭಾಗವಾಗಿ ಶಿಕ್ಷಕರು ಮೇ ತಿಂಗಳಿನಲ್ಲಿ ಉತ್ತರ ಕರ್ನಾಟಕ ಭಾಗದ ಜನರು ವಾಸಿಸುವ ಪ್ರದೇಶಗಳನ್ನು ತಲುಪಿ, ತಮ್ಮ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ವಿನಂತಿಸಿದ್ದಾರೆ. ಈ ಪ್ರಯತ್ನ ಫಲ ನೀಡಿದ್ದು, ವಿದ್ಯಾರ್ಥಿಗಳ ದಾಖಲಾತಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿದೆ ಎನ್ನುತ್ತಾರೆ ಶಿಕ್ಷಕರು.

ADVERTISEMENT

‘ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಶಾಲೆಯ ದ್ವಾರವನ್ನು ಮಾವಿನ ತೋರಣದಿಂದ ಸಿಂಗರಿಸಿ, ಮಕ್ಕಳಿಗೆ ಹೂ ನೀಡಿ ಸ್ವಾಗತಿಸುತ್ತೇವೆ. ಮೊದಲ ದಿನ ಬಿಸಿಯೂಟದ ಜೊತೆಗೆ ಸಿಹಿ ಇರುತ್ತದೆ, ಜೊತೆಗೆ, ನಾವು ಶಿಕ್ಷಕರೆಲ್ಲ ಸೇರಿ ಮಕ್ಕಳಿಗೆ ವಿಶೇಷ ತಿನಿಸು ನೀಡುತ್ತೇವೆ. ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಮೇ ತಿಂಗಳಲ್ಲಿ 15 ದಿನ ಶಿಕ್ಷಕರೊಡಗೂಡಿ ಮಕ್ಕಳ ಮನೆ ಭೇಟಿ ಕಾರ್ಯಕ್ರಮ ನಡೆಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಉಚಿತ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಪಾಲಕರಿಗೆ ತಿಳಿವಳಿಕೆ ಹೇಳಲಾಗಿದೆ’ ಎಂದು ಕದ್ರಿ ಮಲ್ಲಿಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಡೋರತಿ ಡಾಯಸ್ ತಿಳಿಸಿದರು.

‘ಮಕ್ಕಳಿಲ್ಲದೆ ಸಪ್ಪೆಯಾಗಿದ್ದ ಶಾಲೆ ಆವರಣ ಇನ್ನು ನಂದನವನವಾಗಲಿದೆ. ಶಾಲೆ ಆವರಣ ಸ್ವಚ್ಛಗೊಳಿಸಿ, ಕುಡಿಯುವ ನೀರು, ಶೌಚಾಲಯ ಎಲ್ಲವನ್ನೂ ಸುವ್ಯವಸ್ಥಿತಗೊಳಿಸಲಾಗಿದೆ. ಪ್ರಾರಂಭೋತ್ಸವದ ದಿನ ಹಿರಿಯ ಮಕ್ಕಳು ಪುಸ್ತಕ ತೇರಿನೊಂದಿಗೆ ಕಿರಿಯ ಮಕ್ಕಳನ್ನು ಸ್ವಾಗತಿಸಲಿದ್ದಾರೆ. ತಳಿರು–ತೋರಣ, ಬಲೂನಿನಿಂದ ಶಾಲೆಯನ್ನು ಶೃಂಗರಿಸಲಾಗುತ್ತಿದೆ. ಅದ್ಧೂರಿ ಸ್ವಾಗತಕ್ಕೆ ಶಿಕ್ಷಕರು ಸಿದ್ಧತೆ ನಡೆಸಿದ್ದಾರೆ’ ಎಂದು ಮಣ್ಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಕುಮಾರ್ ಪ್ರತಿಕ್ರಿಯಿಸಿದರು.

ವೇಳಾಪಟ್ಟಿ ಸಿದ್ಧತೆ: ಮಕ್ಕಳು ಶಾಲೆಗೆ ಬರುವ ಪೂರ್ವದಲ್ಲಿ ಮೊದಲ ಎರಡು ದಿನ ಶಿಕ್ಷಕರು ಶಾಲಾ ವಾರ್ಷಿಕ ಕಾರ್ಯಯೋಜನೆ, ಶಿಕ್ಷಕರ ವೇಳಾಪಟ್ಟಿ, ತರಗತಿ ವೇಳಾಪಟ್ಟಿ ಹಾಗೂ ಕ್ರೋಡೀಕೃತ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳುತ್ತಾರೆ. ಇಡೀ ವರ್ಷದ ಯೋಜನೆ ರೂಪಿಸುವ ಶೈಕ್ಷಣಿಕ ಮಾರ್ಗದರ್ಶಿ ಸಿದ್ಧಪಡಿಕೊಳ್ಳುತ್ತಾರೆ. ನಲಿ–ಕಲಿ ಹೊರತುಪಡಿಸಿ, ಉಳಿದ ವಿದ್ಯಾರ್ಥಿಗಳಿಗೆ 15 ದಿನ ಸೇತುಬಂಧ ಕಾರ್ಯಕ್ರಮ ನಡೆಯುತ್ತದೆ. ನಂತರ ಸಾಫಲ್ಯ ಪರೀಕ್ಷೆ, ಅಗತ್ಯವುಳ್ಳ ಮಕ್ಕಳಿಗೆ ಪರಿಹಾರ ಬೋಧನೆ ಪೂರ್ಣಗೊಂಡ ನಂತರ ಪಠ್ಯಪುಸ್ತಕದ ಪಾಠಗಳ ಬೋಧನೆ ಆರಂಭವಾಗುತ್ತದೆ.

‘ಮೊದಲ ದಿನ ಶಾಲೆಯ ಆವರಣ, ಅಡುಗೆ ಕೋಣೆ, ನೀರಿನ ಟ್ಯಾಂಕ್, ಫಿಲ್ಟರ್ ಎಲ್ಲವನ್ನೂ ಸ್ವಚ್ಛಗೊಳಿಸಲಾಯಿತು. ಸರ್ಕಾರದ ಯೋಜನೆಯಂತೆ ಮಕ್ಕಳಿಗೆ ಹಾಲು ನೀಡಲು ಬಳಸುವ ಪಾತ್ರೆಗಳೆಲ್ಲವನ್ನೂ ತೊಳೆದು ಸ್ವಚ್ಛಗೊಳಿಸಲಾಗಿದೆ. ಪ್ರಾರಂಭೋತ್ಸವದ ದಿನದಿಂದಲೇ ಮಕ್ಕಳಿಗೆ ಮೊಟ್ಟೆ, ಹಾಲು ನೀಡಲಾಗುತ್ತದೆ. ಇಸ್ಕಾನ್ ಅಕ್ಷಯಪಾತ್ರೆ ಪೂರೈಸುವ ಬಿಸಿಯೂಟದೊಂದಿಗೆ ಪಾಯಸದ ಸಿಹಿ ಇರಲಿದೆ. ಮಕ್ಕಳ ನಡುವೆ ಸೌಹಾರ್ದ ಬೆಳೆಸುವ ಉದ್ದೇಶದಿಂದ ಮೊದಲ ದಿನ ಆಟದೊಂದಿಗೆ ಪಾಠ ಇರಲಿದೆ’ ಎಂದು ಮಲ್ಲಿಕಟ್ಟೆಯ ನೇತಾಜಿ ಸುಭಾಷ್‌ಚಂದ್ರ ಭೋಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಮಂತ್ ವಿ.ಎಂ ‘ಪ್ರಜಾವಾಣಿ’ಗೆ ತಿಳಿಸಿದರು.

ಶಕ್ತಿನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳನ್ನು ಹೂ ನೀಡಿಲು ಸ್ವಾಗತಿಸಲು ಶಿಕ್ಷಕರು ತಯಾರಿ ನಡೆಸಿದ್ದಾರೆ. ಮಕ್ಕಳಿಗೆ ವಿತರಿಸಲು ಸಮವಸ್ತ್ರ, ಪಠ್ಯಪುಸ್ತಕ ಪೂರೈಕೆಯಾಗಿದೆ. ಮಕ್ಕಳಿಗೆ ಅವನ್ನು ವಿತರಿಸಲಾಗುತ್ತದೆ ಎಂದು ಮುಖ್ಯ ಶಿಕ್ಷಕಿ ಶರ್ಮಿಳಾ ತಿಳಿಸಿದರು.

ಗಾಂಧಿನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಬ್ಬಂದಿ ನೀರಿನ ಫಿಲ್ಟರ್ ಶಾಲಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದರು – ಪ್ರಜಾವಾಣಿ ಚಿತ್ರ
ಗಾಂಧಿನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಬ್ಬಂದಿ ತರಗತಿ ಕೊಠಡಿ ಸ್ವಚ್ಛಗೊಳಿಸಿದರು – ಪ್ರಜಾವಾಣಿ ಚಿತ್ರ

ನೀತಿ ಸಂಹಿತೆ ಅಡ್ಡಿ

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಮಕ್ಕಳ ಜಾಥಾ ನಡೆಸಲು ಅವಕಾಶವಿಲ್ಲ. ಜನಪ್ರತಿನಿಧಿಗಳು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಿ ದೊಡ್ಡ ಕಾರ್ಯಕ್ರಮ ನಡೆಸಲು ಸಾಧ್ಯವಾಗದು. ಮಕ್ಕಳೇ ಮಕ್ಕಳನ್ನು ಸ್ವಾಗತಿಸುವ ಮೂಲಕ ಸರಳವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.