ಮಂಗಳೂರು: ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿರುವ ಶ್ರಮಿಕರ ಸಂಘಟನೆ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಸರ್ಕಾರಿ ಶಾಲೆಗಳ ಶೌಚಾಲಯ ನಿರ್ಮಲಗೊಳಿಸುವ ‘ಸ್ವಚ್ಛಾಲಯ’ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಆರೋಗ್ಯ, ನೈರ್ಮಲ್ಯ, ಹಕ್ಕು ಸಂರಕ್ಷಣೆಯ ಉದ್ದೇಶದಿಂದ ಎಲ್ಲ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
‘ಸುಮಾರು 1,000 ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಜೊತೆಗೆ, ನವೀಕರಣ ಅಗತ್ಯವಿದ್ದಲ್ಲಿ, ಸ್ವಂತ ವೆಚ್ಚದಲ್ಲಿ ಅದನ್ನು ದುರಸ್ತಿಗೊಳಿಸಲಾಗುತ್ತದೆ. ಸಂಘಟನೆಯ ಸದಸ್ಯರೇ ಸೇರಿ ಈ ಕಾರ್ಯವನ್ನು ನಿರ್ವಹಿಸಲಿದ್ದೇವೆ. ಪ್ರಸ್ತುತ ಹೊಯ್ಗೆ ಬಜಾರ್, ಸೂಟರ್ ಪೇಟೆ ಮತ್ತು ಕಾವೂರು ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸಲಾಗಿದೆ. 10ಕ್ಕೂ ಹೆಚ್ಚು ಜನರು ತಮ್ಮ ವೃತ್ತಿಯನ್ನು ಬದಿಗಿಟ್ಟು, ಈ ಕೆಲಸ ನಿರ್ವಹಿಸಿದ್ದಾರೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೊಲ್ಯ ತಿಳಿಸಿದರು.
‘ಸಂಸ್ಥಾಪಕ ಅಧ್ಯಕ್ಷ ದೀಪಕ್ ಜಿ. ಬೆಳ್ತಂಗಡಿ ನೇತೃತ್ವದಲ್ಲಿ ಸಂಘಟನೆ ಈಗ ವಿವಿಧೆಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಘಟನೆಯಲ್ಲಿ ಇರುವವರಲ್ಲಿ ಬಹುತೇಕರು ದಿನಗೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ಕಾರು ಚಾಲಕರು, ಮೇಸ್ತ್ರಿಗಳು, ಪೇಂಟರ್‌ಗಳು, ಕಲಾವಿದರು. ವಾರಕ್ಕೊಮ್ಮೆ ಶಾಲೆಗೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಲಿದ್ದೇವೆ. ಆಯಾ ತಾಲ್ಲೂಕಿನಲ್ಲಿ ಅಲ್ಲಿನ ಸ್ವಯಂ ಸೇವಕರು ಈ ಕಾರ್ಯ ನಿರ್ವಹಿಸುತ್ತಾರೆ’ ಎಂದು ವೃತ್ತಿಯಲ್ಲಿ ಕಾರು ಚಾಲಕರಾಗಿರುವ ಸಂತೋಷ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಉದ್ಘಾಟನೆ: ಪ್ರಸ್ತುತ ನವೀಕರಣಗೊಂಡಿರುವ ಮೂರು ಕಾಮಗಾರಿಗಳ ಉದ್ಘಾಟನೆ ಅ.21ರಂದು ನಡೆಯಲಿದೆ. 9 ಗಂಟೆಗೆ ಹೊಯ್ಗೆಬಜಾರ್, 10ಕ್ಕೆ ಸೂಟರ್‌ಪೇಟೆ, 11 ಗಂಟೆಗೆ ಕಾವೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು: ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ಶ್ರಮಿಕರ ಸಂಘಟನೆ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಸರ್ಕಾರಿ ಶಾಲೆಗಳ ಶೌಚಾಲಯ ನಿರ್ಮಲಗೊಳಿಸುವ ‘ಸ್ವಚ್ಛಾಲಯ’ ಅಭಿಯಾನವನ್ನು ಕೈಗೆತ್ತಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.