ADVERTISEMENT

ಸಮುದ್ರ ಮಾಲಿನ್ಯ: ಸಮಿತಿ ರಚನೆ

ಅಧ್ಯಯನಕ್ಕೆ ಎನ್‌ಜಿಟಿ ಆದೇಶ

​ಪ್ರಜಾವಾಣಿ ವಾರ್ತೆ
Published 27 ಮೇ 2022, 5:44 IST
Last Updated 27 ಮೇ 2022, 5:44 IST
ಸುರತ್ಕಲ್‌ ಭಾಗದಲ್ಲಿ ಸಮುದ್ರದಲ್ಲಿ ಕಂಡು ಬಂದಿದ್ದ ಜಿಡ್ಡಿನ ಅಂಶ (ಸಂಗ್ರಹ ಚಿತ್ರ)
ಸುರತ್ಕಲ್‌ ಭಾಗದಲ್ಲಿ ಸಮುದ್ರದಲ್ಲಿ ಕಂಡು ಬಂದಿದ್ದ ಜಿಡ್ಡಿನ ಅಂಶ (ಸಂಗ್ರಹ ಚಿತ್ರ)   

ಮಂಗಳೂರು: ಸುರತ್ಕಲ್ ಸಹಿತ ಹಲವೆಡೆ ಸಮುದ್ರ ಮಾಲಿನ್ಯ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ದ ಪ್ರಧಾನ ಪೀಠವು, ಮಾಲಿನ್ಯದ ಮೂಲ ಪತ್ತೆ ಹಚ್ಚಲು ಜಂಟಿ ಸಮಿತಿಯೊಂದನ್ನು ರಚಿಸಿದೆ.

ಎನ್‌ಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯಲ್, ಸದಸ್ಯರಾದ ಸುಧೀರ್ ಅಗರ್‌ವಾಲ್, ತಜ್ಞ ಸದಸ್ಯ ಎ. ಸೆಂಥಿಲ್‌ವೇಲ್ ಅವರನ್ನು ಒಳಗೊಂಡ ಪೀಠ ಈ ಸಮಿತಿ ರಚಿಸಿದೆ.

ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರದಲ್ಲಿ ಜಿಡ್ಡಾದ ವಸ್ತು ತೇಲಿ ಬಂದಿದ್ದು, ಟಾರಿನ ಉಂಡೆಗಳೂ ದೊರಕಿದ್ದವು. ತಣ್ಣೀರುಬಾವಿಯ ಬಳಿ ಕೆಲವು ಮೀನುಗಾರರು ತಾವು ಫಲ್ಗುಣಿ ನದಿಯಲ್ಲಿ ಬೆಳೆಸಿದ್ದ ಪಂಜರ ಕೃಷಿಯ ಮೀನುಗಳು ಸಾವ್ನಪ್ಪಿರುವ ಬಗ್ಗೆ ದೂರಿದ್ದರು. ಇವೆಲ್ಲವನ್ನೂ ಪರಿಗಣಿಸಿರುವ ಎನ್‌ಜಿಟಿ, ಸಮಿತಿಯನ್ನು ರಚಿಸಿದೆ.

ADVERTISEMENT

ಸಮಿತಿಯು ಎರಡು ವಾರದೊಳಗೆ ಸಭೆ ಸೇರಿ ಸ್ಥಳ ಸಮೀಕ್ಷೆ, ಅಧ್ಯಯನ ನಡೆಸಬೇಕು. ಸ್ಥಳೀಯರೊಂದಿಗೆ ಮಾತುಕತೆ ನಡೆಸಬೇಕು. ಎರಡು ತಿಂಗಳೊಳಗೆ ಎನ್‌ಜಿಟಿಗೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ.

ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಧಿಕಾರಿ, ಕೋಸ್ಟ್‌ಗಾರ್ಡ್‌ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನಾ ಸಂಸ್ಥೆ ಹಾಗೂ ಚೆನ್ನೈನ ಸಾಗರ ಅಭಿವೃದ್ಧಿ ವಿಭಾಗದ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ತನಿಖೆಗೆ ನೋಡಲ್ ಏಜೆನ್ಸಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.