ಮಂಗಳೂರು: 2023-24ನೇ ಆರ್ಥಿಕ ವರ್ಷದಲ್ಲಿ ಭಾರತವು ₹60,523 ಕೋಟಿ ಮೌಲ್ಯದ ಒಟ್ಟು 17.81ಲಕ್ಷ ಟನ್ ಸಾಗರೋತ್ಪನ್ನಗಳನ್ನು ರಫ್ತು ಮಾಡಿದ್ದು, ದಾಖಲೆಯಾಗಿದೆ.
ಶೀತಲೀಕರಿಸಿದ ಸಿಗಡಿಗಳು, ಮೀನು ಪ್ರಮುಖ ರಫ್ತು ಉತ್ಪನ್ನವಾಗಿ ಮುಂದುವರಿದಿವೆ. ಯುಎಸ್‍ಎ ಮತ್ತು ಚೀನಾ ಸಾಗರೋತ್ಪನ್ನಗಳ ಪ್ರಮುಖ ಆಮದು ದೇಶಗಳಾಗಿವೆ.
2023-24ನೇ ಸಾಲಿನಲ್ಲಿ ಭಾರತದ ರಫ್ತು ಪ್ರಮಾಣ ಶೇ 2.67ರಷ್ಟು ವೃದ್ಧಿಸಿದೆ. 2022-23ನೇ ಸಾಲಿನಲ್ಲಿ ₹63,969 ಕೋಟಿ ಮೌಲ್ಯದ ಒಟ್ಟು 17.35 ಲಕ್ಷ ಟನ್ ಸಾಗರೋತ್ಪನ್ನಗಳನ್ನು ರಫ್ತು ಮಾಡಲಾಗಿತ್ತು ಎಂದು ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ವಿ. ಸ್ವಾಮಿ ತಿಳಿಸಿದ್ದಾರೆ.
ಭಾರತವು ₹40,013 ಕೋಟಿ ವಿದೇಶಿ ವಿನಿಮಯ ಗಳಿಸಿ, ಶೀತಲೀಕರಿಸಿದ ಸಿಗಡಿ ರಫ್ತು ವಹಿವಾಟಿನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ರಫ್ತು ಪ್ರಮಾಣದಲ್ಲಿ ಶೇ 40.19 ಮತ್ತು ಒಟ್ಟು ಡಾಲರ್ ಗಳಿಕೆಯಲ್ಲಿ ಶೇ 66.12ರಷ್ಟು ಪಾಲು ಹೊಂದಿದ್ದು, 2023-24ರಲ್ಲಿ ಸಿಗಡಿ ರಫ್ತು ಪ್ರಮಾಣವು ಶೇ 0.69ರಷ್ಟು ಹೆಚ್ಚಾಗಿದೆ.
ಶೀತಲೀಕರಿಸಿದ ಸಿಗಡಿ ಉತ್ಪನ್ನಗಳ ಒಟ್ಟು ರಫ್ತು 7.16 ಲಕ್ಷ ಟನ್ ಆಗಿದೆ. ಟೈಗರ್ ಸಿಗಡಿಗಳ ರಫ್ತು ಪ್ರಮಾಣ ಶೇ 24.91ರಷ್ಟು ಏರಿಕೆ ಕಂಡಿದೆ. ₹2,855 ಕೋಟಿ ಮೌಲ್ಯದ 38,987 ಟನ್ ಟೈಗರ್ ಸಿಗಡಿ ರಫ್ತು ಮಾಡಲಾಗಿದೆ. ವನ್ನಾಮಿ ಸಿಗಡಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಶೇ 0.33ರಷ್ಟು ಬೆಳವಣಿಗೆ ಸಾಧಿಸಿದ್ದರೂ, ರಫ್ತಿನ ಮೌಲ್ಯದಲ್ಲಿ ಶೇ 11.56ರಷ್ಟು ಕುಸಿತವಾಗಿದೆ ಎಂದಿದ್ದಾರೆ.
ಶೀತಲೀಕರಿಸಿದ ಮೀನುಗಳ ರಫ್ತಿನಲ್ಲಿ ₹ 5,509 ಕೋಟಿ ವಿದೇಶಿ ವಿನಿಮಯ ಗಳಿಸಿದೆ. ಫಿಶ್ ಮೀಲ್ ಮತ್ತು ಫೀಡ್, ಒಣಗಿಸಿದ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ₹3684.79 ಕೋಟಿ ಆದಾಯ ದೊರೆತಿದೆ.
ಶೀತಲೀಕರಿಸಿದ ಬೊಂಡಾಸ್ ₹3,061 ಕೋಟಿ ವಿದೇಶಿ ವಿನಿಮಯ ದಾಖಲಿಸಿದೆ. ಸುರಿಮಿ ಮತ್ತು ಸುರಿಮಿ ಆಧಾರಿತ ಉತ್ಪನ್ನಗಳ ರಫ್ತಿನಲ್ಲಿ ಶೇ 4.12ರಷ್ಟು ಬೆಳವಣಿಗೆ, ಕಪ್ಪೆ ಬೊಂಡಾಸ್ ಉತ್ಪನ್ನಗಳ ರಫ್ತಿನಲ್ಲಿ ₹2,252 ಕೋಟಿ ಆದಾಯ ದೊರೆತಿದೆ. ಚಿಲ್ಡ್ ಮೀನು, ಅಕ್ಟೋಪಸ್, ಮೀನಿನ ಎಣ್ಣೆ, ಜೀವಂತ ಮೀನುಗಳ ರಫ್ತು, ಕೊಂಬು ಸಿಗಡಿ, ಫಿಶ್ ಮಾವ್ಸ್‌ಗಳ ರಫ್ತಿನಲ್ಲೂ ಆದಾಯ ವೃದ್ಧಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.