ಉಳ್ಳಾಲ: ಉಚ್ಚಿಲದ ಬೆಟ್ಟಂಪಾಡಿ, ಪೆರಿಬೈಲು, ಸೀರೋಡ್, ಮುಕ್ಕಚ್ಚೇರಿ ಸೋಮೇಶ್ವರ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಮುಂದುವರಿದಿದ್ದು, ಉಚ್ಚಿಲ, ಉಳ್ಳಾಲದ ರಸ್ತೆ ಅಂಚಿಗೆ ಅಲೆಗಳು ಅಪ್ಪಳಿಸುತ್ತಿವೆ. ಕಿನಾರೆಯ ವಿದ್ಯುತ್ ಕಂಬಗಳು, ಗಾಳಿ ಮರಗಳನ್ನು ತೆರವುಗೊಳಿಸಲಾಗಿದೆ.
‘ಜಿಲ್ಲಾಡಳಿತದ ಸೂಚನೆಯಲ್ಲಿ ಕರಾವಳಿಯಲ್ಲಿ ರೆಡ್ ಅಲರ್ಟ್ ಇದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ 1.7 ಮೀ ಎತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಎರಡು ಹಿಟಾಚಿಗಳನ್ನು ಸ್ಥಳದಲ್ಲೇ ಕಾರ್ಯಾಚರಣೆಗೆ ಇರಿಸಲಾಗಿದೆ. ಮನೆಗಳಿರುವ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಒಂದು ಹಂತದ ಕಾಮಗಾರಿ ಮುಗಿದ ತಕ್ಷಣವೇ ರಸ್ತೆಯ ಭಾಗದಲ್ಲಿಯೂ ಕಲ್ಲುಗಳನ್ನು ಹಾಕುವ ಕೆಲಸ ಮಾಡಲಾಗುವುದು. ಎಂಜಿನಿಯರ್‌ಗಳ ಸಲಹೆಯಂತೆ ಕಲ್ಲುಗಳನ್ನು ಹಾಕುವ ಕಾರ್ಯ ಮುಂದುವರಿದಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಕಂದಾಯ ಇಲಾಖೆಯ ಪ್ರೊಬೆಷನರಿ ಸಹಾಯಕ ಆಯುಕ್ತ ಸಂತೋಷ್ ತಿಳಿಸಿದ್ದಾರೆ.
ಮರ ತೆರವಿಗೆ ಗೊಂದಲ : ಗಾಳಿ ಮರಗಳಿಂದಾಗಿ ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ಇತ್ತೀಚೆಗೆ ಓಖಿ ಚಂಡಾಮಾರುತದ ಸಂದರ್ಭ ಉಚ್ಚಿಲ ಪೆರಿಬೈಲಿನ ಸಮುದ್ರ ತೀರದಲ್ಲಿ 11 ವಿದ್ಯುತ್ ಕಂಬಗಳು ನೆಲಕ್ಕುರುಳಿತ್ತು. ಮತ್ತೆ ಹೊಸ ಕಂಬಗಳನ್ನು ಸ್ಥಳದಲ್ಲಿ ಹಾಕಲಾಗಿತ್ತು. ಆದರೆ ಇದೀಗ ಸಮುದ್ರದ ಅಲೆಗಳು ಹೊಸತಾಗಿ ಹಾಕಿದ ಕಂಬಗಳಿಗೆ ಬಡಿಯಲು ಆರಂಭಿಸಿದೆ. ಅದನ್ನು ಮೆಸ್ಕಾಂ ಇಲಾಖೆಯ ಎ ಡಬ್ಲ್ಯು ದಯಾನಂದ್ ಇವರು ಸ್ಥಳದಲ್ಲಿ ನಿಂತು ಸುಮಾರು 4 ನಾಲ್ಕು ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸಿದರು. ಸಮುದ್ರ ತೀರದಲ್ಲಿರುವ ವಿದ್ಯುತ್ ಕಂಬಗಳಿಂದ ಸುಮಾರು 500 ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಆದರೆ ಗಾಳಿಮರಗಳಿಂದ ಕಂಬಗಳು ಮುರಿದುಬೀಳುತ್ತಿದ್ದರೂ, ಖಾಸಗಿಯವರ ಜಾಗದಲ್ಲಿರುವ ಗಾಳಿ ಮರಗಳನ್ನು ತೆರವುಗೊಳಿಸಲು ಜಾಗದ ಮಾಲೀಕರು ಬಿಡುತ್ತಿರಲಿಲ್ಲ. ಈ ಕುರಿತು ಗ್ರಾಮಕರಣಿಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದರು. ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಖಾಸಗಿ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವುದು ಅನಿವಾರ್ಯ ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡವಾಗಿದ್ದ ಮರಗಳನ್ನು ತೆರವುಗೊಳಿಸಿದ ನಂತರವೇ ವಿದ್ಯುತ್ ಕಂಬಗಳನ್ನು ಹಾಕಲಾಯಿತು.
ಮನೆಗಳಿಗೆ ಅಪಾಯ: ಮುಕ್ಕಚ್ಚೇರಿ ಸಮೀಪ ಒಖಿ ಸಂದರ್ಭ ಹಾನಿಗೊಳಗಾದ ಆಲಿಯಬ್ಬ ಎಂಬವರ ಮನೆ ಸಮುದ್ರದ ರಭಸಕ್ಕೆ ಸಂಪೂರ್ಣ ನಾಶವಾಗಿದೆ. ಈ ಹಿಂದೆ ಪರಿಹಾರ ಮೊತ್ತವನ್ನು ವಿತರಿಸಿರುವುದರಿಂದ ಮನೆಯ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ಸುಮಾರು 50 ಕ್ಕೂ ಅಧಿಕ ಮನೆಗಳಿಗೆ ಸಮುದ್ರದ ಅಲೆಗಳು ಮಧ್ಯಾಹ್ನ ಮತ್ತು ರಾತ್ರಿ ವೇಳೆ ಅಪ್ಪಳಿಸುತ್ತಿವೆ ಎಂದು ಉಳ್ಳಾಲ ನಗರಸಭೆ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ತಿಳಿಸಿದ್ದಾರೆ.
ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಮೆಸ್ಕಾಂ ಎಡಬ್ಲೂ ದಯಾನಂದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಚ್ಮೀ ಗಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ರವಿಶಂಕರ್, ಉಳ್ಳಾಲ ಮತ್ತು ಸೋಮೇಶ್ವರ ಪಂಚಾಯಿತಿನ ಗ್ರಾಮಕರಣಿಕರು ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.