ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದಲ್ಲಿ 50 ವರ್ಷಗಳಿಂದ ಈಚೆಗೆ ಲಘು ಭೂಕಂಪನಗಳ ಪ್ರಮಾಣ ಶೇ 10ರಷ್ಟು ಹೆಚ್ಚಳ ಆಗಿರುವುದು ವೈಜ್ಞಾನಿಕ ಅಧ್ಯಯನದಿಂದ ಕಂಡು ಬಂದಿದೆ.
‘ಮಂಗಳೂರು ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಭೂಕಂಪನ ಸಾಧ್ಯತೆ’ ಕುರಿತು ಭೂಕಂಪನ ವಿಜ್ಞಾನಿ ಡಾ. ಶ್ರೇಯಸ್ವಿ ಚಂದ್ರಶೇಖರ್ ಅಧ್ಯಯನ ನಡೆಸಿದ್ದರು. ಅದರ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200 ವರ್ಷಗಳಲ್ಲಿ ರಿಕ್ಟರ್ ಮಾಪನದಲ್ಲಿ 2ರಿಂದ 4ರಷ್ಟು ಪ್ರಮಾಣದ 150ಕ್ಕೂ ಅಧಿಕ ಭೂಕಂಪಗಳು ಸಂಭವಿಸಿವೆ. ನೆಲದಡಿಯಲ್ಲಿ ಹಾದುಹೋಗುವ ಕಲ್ಲುಹಾಸಿನ ಮಟ್ಟದಿಂದ ನೆಲದ ಮೇಲ್ಮೈ ನಡುವಿನ ವಿವಿಧ ಹಂತಗಳಲ್ಲಿ ಕಂಪನ ವರ್ಧನೆಯನ್ನು (ಪಿಜಿಎ) ಆಧರಿಸಿ ಭೂಕಂಪನದ ಅಪಾಯದ ಅಂದಾಜು ಮಾಡಲಾಗಿದೆ. ಈಚಿನ 50 ವರ್ಷಗಳಲ್ಲಿ ಲಘು ಭೂಕಂಪನಗಳ ಪ್ರಮಾಣ ಗಣನೀಯವಾಗಿ ಹೆಚ್ಚಿರುವುದನ್ನು ನಕ್ಷೆಗಳು ತೊರಿಸುತ್ತಿವೆ.
ಕಂಪನಗಳು ಸಂಭವಿಸಿದ ಸ್ಥಳಗಳಲ್ಲಿ ಹೆಚ್ಚಿನವು ಕರಾವಳಿ ತೀರ ಪ್ರದೇಶದಲ್ಲಿವೆ. ಇಂತಹ ಲಘು ಭೂಕಂಪನಗಳು ಆಗಾಗ್ಗೆ ಸಂಭವಿಸುವುದಕ್ಕೆ ಮುಖ್ಯ ಕಾರಣ ಭೂಖಂಡಗಳ ಚಲನೆಯಿಂದ ಸಮುದ್ರದ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿರುವುದು. ಇದರಿಂದಾಗಿ ತೀರ ಪ್ರದೇಶದ ಭೂಮಿ ಸಂಕ್ಷೇಪನಕ್ಕೊಳಗಾಗಿ ಒತ್ತಡ ಸೃಷ್ಟಿಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪ್ರದೇಶದಿಂದ ಪೂರ್ವ ಕರಾವಳಿಯ ಪುಲಿಕಟ್ ಸರೋವರದವರೆಗೆ ಅಲ್ಲಲ್ಲಿ ಚಾಚಿಕೊಂಡಿರುವ ಪರ್ವತ ಶ್ರೇಣಿಯುದಕ್ಕೂ ಲಘು ಭೂಕಂಪನಗಳು ಪದೇ ಪದೇ ಸಂಭವಿಸುತ್ತಿರುವುದೂ ಈ ಕಾರಣದಿಂದಾಗಿಯೇ ಎಂದು ವಿಶ್ಲೇಷಿಸಲಾಗಿದೆ.
ಭೂಕಂಪನ ಸ್ತರರೇಖೆಗಳಿಂದಾಗಿ (ಫಾಲ್ಟ್ಸ್) ಮಂಗಳೂರು ಆಸುಪಾಸಿನಲ್ಲೂ ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ಭೂಕಂಪ
ನಗಳು ಉಂಟಾಗುವ ಸಾಧ್ಯತೆ ಜಾಸ್ತಿ. ಅಲ್ಲದೇ; ಐಎಸ್ 1893: 2016ರ ಮಾನದಂಡಗಳ ಪ್ರಕಾರ ನೆಲದಡಿಯ ಭೂಕಂಪನ ಪ್ರತಿರೋಧ ವಿನ್ಯಾಸದ ರಚನೆಗಳ ಆಧಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಭೂಕಂಪನ ವಲಯ–3ರಲ್ಲಿ ಗುರುತಿಸಲಾಗಿದೆ. ಹಾಗಾಗಿ ಈ ಪ್ರದೇಶವು ರಿಕ್ಟರ್ ಮಾಪಕದಲ್ಲಿ 5 ಪ್ರಮಾಣದಷ್ಟು ಭೂಕಂಪನಗಳನ್ನು ಎದುರಿಸುವ ಸಾಧ್ಯತೆಗಳಿವೆ.
‘ರಿಕ್ಟರ್ ಮಾಪಕದಲ್ಲಿ 3ಕ್ಕಿಂತ ಕಡಿಮೆ ಪ್ರಮಾಣದ ಭೂಕಂಪಗಳು ಜನರ ಅನುಭವಕ್ಕೇ ಬರುವುದಿಲ್ಲ. ಸಿಸ್ಮೋಮೀಟರ್‌ಗಳ ನೆರವಿನಿಂದ ಮಾತ್ರ ಇವುಗಳನ್ನು ಕಂಡುಹಿಡಿಯಬಹುದು. ಭೂಕಂಪದ ಪ್ರಮಾಣ 3 ಕ್ಕಿಂತ ಹೆಚ್ಚು ಇದ್ದರೆ ಜನರಿಗೆ ಭೂಮಿ ಸಣ್ಣಗೆ ಅಲುಗಿದ ಅನುಭವ ಆಗುತ್ತದೆ. ಇಂತಹ ಲಘು ಭೂಕಂಪನಗಳಿಂದ ಯಾವುದೇ ಕೇಡು ಉಂಟಾಗದು’ ಎಂದು ಶ್ರೇಯಸ್ವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಶ್ರೇಯಸ್ವಿ ಅವರು ಎನ್‌ಐಟಿಕೆಯ ಪ್ರಾಧ್ಯಾಪಕ ಕಟ್ಟಾ ವೆಂಕಟರಮಣ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡಿದ್ದು, ಈ ಕುರಿತ ವೈಜ್ಞಾನಿಕ ಪ್ರಬಂಧ ಸಿದ್ಧಪಡಿಸಿದ್ದರು. ಈ ಪ್ರಬಂಧಕ್ಕೆ ಶ್ರೇಯಸ್ವಿನಿ ಅವರಿಗೆ ಎನ್‌ಐಟಿಕೆ 2019ರಲ್ಲಿ ಪಿಎಚ್.ಡಿ ಪದವಿ ನೀಡಿದೆ. ಅವರು ಗೋವಾ, ಉತ್ತರ ಕೇರಳ ಹಾಗೂ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಸಂಭವಿಸಿದ್ದ ಭೂಕಂಪನಗಳನ್ನು ಆಧರಿಸಿ ಮಂಗಳೂರು ಕೇಂದ್ರಿತವಾಗಿ ಈ ಅಧ್ಯಯನ ಕೈಗೊಂಡಿದ್ದರು.
ಭೂಕಂಪನದ ಮೂಲಕ್ಕೆ ಸಂಬಂಧಿಸಿದ ಮಾದರಿಗಳನ್ನು ರೂಪಿಸುವಾಗ ಒಳಗೊಳ್ಳುವ ಅನಿಶ್ಚಿತತೆ ಹಾಗೂ ನೆಲದಡಿಯ ಚಲನೆಗಳ ಮುನ್ಸೂಚನೆ ಮಾದರಿಗಳನ್ನೂ ಅಧ್ಯಯನ ವರದಿಯಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ. ಭೂಕಂಪನದ ತರಂಗಗಳು ತಳದಿಂದ ನೆಲದ ಮೇಲ್ಮೈವರೆಗೆ ತಲುಪುವಾಗ ಕಂಪನದ ತೀವ್ರತೆಹೆಚ್ಚಳವಾಗುವುದಕ್ಕೆ ಸಂಬಂಧಿಸಿ ಅಧ್ಯಯನವನ್ನೂ (ಸೈಟ್ ಆಂಪ್ಲಿಫಿಕೇಷನ್ ಸ್ಟಡಿ) ಕೈಗೊಳ್ಳಲಾಗಿತ್ತು. ಅಧ್ಯಯನಕ್ಕೆ ಆಯ್ದುಕೊಂಡ ಪ್ರದೇಶದಲ್ಲಿ ಕಂಪನದ ತೀವ್ರತೆಯು ಮೂಲದಿಂದ ಶೇ 60ರಿಂದ ಶೇ 80ರಷ್ಟು ಹೆಚ್ಚಳವಾಗಿರುವುದೂ ಕಂಡುಬಂದಿತ್ತು.
‘ಮಾರ್ಗಸೂಚಿ ಪಾಲಿಸಿ’
‘ಲಘು ಭೂಕಂಪನಗಳಿಂದ ಕಟ್ಟಡಗಳಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಳ್ಳಬಹುದೇ ಹೊರತು ಕಟ್ಟಡ ಪೂರ್ತಿ ಕುಸಿದು ಬೀಳುವಂತಹ ಪ್ರಮೇಯ ಕಡಿಮೆ. ಕಟ್ಟಡ ನಿರ್ಮಿಸುವಾಗ ಅವು, ಇಂತಹ ಪುಟ್ಟ ಭೂಕಂಪನಗಳನ್ನೂ ತಾಳಿಕೊಳ್ಳುವಂತಹ ವಿನ್ಯಾಸವನ್ನು ಅಳವಡಿಸಿಕೊಳ್ಳಬೇಕು. ಭೂಕಂಪನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಕಟ್ಟಡಗಳ ವಿನ್ಯಾಸ ರೂಪಿಸಬೇಕು’ ಎಂದು ಶ್ರೇಯಸ್ವಿ ಸಲಹೆ ನೀಡಿದರು.
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಲೂ ಭೂಕಂಪನಗಳು ಉಂಟಾಗುವ ಸಾಧ್ಯತೆ ಇದೆ. ಭೂಕಂಪನಗಳಿಂದ ಭೂಕುಸಿತ ಉಂಟಾಗುವುದೇನೋ ನಿಜ. ಆದರೆ, ಎಲ್ಲ ಭೂ ಕುಸಿತಗಳಿಗೂ ಭೂಕಂಪನಗಳೇ ಕಾರಣ ಎನ್ನಲಾಗದು‘ ಎಂದರು.
*
ಪಶ್ಚಿಮ ಘಟ್ಟ ಮತ್ತು ಆಸುಪಾಸಿನ ಪ್ರದೇಶದಲ್ಲಿ ಇತ್ತೀಚೆಗೆ ಪದೇ ಪದೇ ಉಂಟಾಗುತ್ತಿರುವ ಭೂಕಂಪನಗಳನ್ನು ಇನ್ನಷ್ಟು ವಿವರವಾಗಿ ಅಧ್ಯಯನ ಮಾಡುವ ಅಗತ್ಯ ಇದೆ.
-ಡಾ.ಶ್ರೇಯಸ್ವಿ ಚಂದ್ರಶೇಖರ್, ಭೂಕಂಪನ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.