ಮಂಗಳೂರು: ‘ವಕ್ಫ್ ಮಂಡಳಿಗೆ ಸೇರಿರುವ 29ಸಾವಿರ ಎಕರೆಗಳಷ್ಟು ಆಸ್ತಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾಗಿದ್ದಾಗ ನಾನು ಸಲ್ಲಿಸಿದ್ದ ವರದಿಯ ಆಧಾರದಲ್ಲಿ, ತನಿಖೆ ನಡೆಸಿ, ಪ್ರಭಾವಿಗಳು ಕಬಳಿಕೆ ಮಾಡಿರುವ ಆಸ್ತಿಗಳನ್ನು ಮರಳಿ ವಶಕ್ಕೆ ಪಡೆದದ್ದೇ ಆದರೆ, ಸರ್ಕಾರ ವಕ್ಫ್ ಜಮೀನಿಗೆ ಸಂಬಂಧಿಸಿದ ರೈತರಿಗೆ ನೋಟಿಸ್ ನೀಡುವ ಪ್ರಮೇಯವೇ ಉದ್ಭವಿಸದು’ ಎಂದು ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದರು.
ಇಲ್ಲಿ ಆರ್ಯಸಮಾಜದಲ್ಲಿ ಬುಧವಾರ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜೊತೆ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ವಕ್ಫ್ ಮಂಡಳಿಯ ನೋಂದಾಯಿತ ಅಸ್ತಿಯೇ 54 ಸಾವಿರ ಎಕರೆ ಇರುವಾಗ, ಈಗ ರೈತರ ಜಮೀನುಗಳಿಗೆ ನೋಟಿಸ್ ನೀಡುವ ಅಗತ್ಯವಾದರೂ ಏನು. ನನ್ನ ವರದಿಯ ಆಧಾರದಲ್ಲಿ ಹಳೆಯ ಗಜೆಟ್ ಅಧಿಸೂಚನೆಗಳ ಆಧಾರದಲ್ಲಿ ತನಿಖೆ ನಡೆದರೆ, ವಕ್ಫ್ ಮಂಡಳಿಯ ನಿಜವಾದ ಆಸ್ತಿ ಎಷ್ಟು?– ಕಬಳಿಕೆ ಆಗಿದ್ದೆಷ್ಟು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಆಗ ಹಾಲು ಯಾವುದು, ನೀರು ಯಾವುದು ಎಂಬುದು ಸ್ಪಷ್ಟವಾಗಲಿದೆ. ಎರಡು ಧರ್ಮಗಳ ನಡುವೆ ದ್ವೇಷ ಹುಟ್ಟಿಸುವಂತಹ ಬೆಳವಣಿಗೆಗೆ ಅವಕಾಶವೇ ಇರುವುದಿಲ್ಲ’ ಎಂದರು.
‘ರಾಜ್ಯದಲ್ಲಿ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ಆಸ್ತಿಯ ಪ್ರಮಾಣ 54 ಸಾವಿರ ಎಕರೆಗಳಷ್ಟಿದೆ. ಅವುಗಳಲ್ಲಿ ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿರುವ ಆಸ್ತಿಯ ಮೌಲ್ಯ 2012ರಲ್ಲಿ ₹ 2.30 ಲಕ್ಷ ಕೋಟಿಗಳಷ್ಟಿತ್ತು. ಈ ಜಮೀನುಗಳಲ್ಲಿ ಪ್ರಭಾವಿಗಳು, ರಾಜಕೀಯ ಮುಖಂಡರು ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನೆಲ್ಲ ನಿರ್ಮಿಸಿದ್ದಾರೆ. ಸರಿಯಾದ ತನಿಖೆ ನಡೆದಿದ್ದೇ ಆದಲ್ಲಿ, ಅನೇಕರು ಜೈಲು ಸೇರಲಿದ್ದಾರೆ’ ಎಂದರು.
‘ತನ್ನನ್ನು ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ಮುಸ್ಲಿಮರ ಪರ ಕಾಳಜಿ ಇದ್ದರೆ, ನಾನು ದಾಖಲೆ ಸಮೇತ ನೀಡಿರುವ ವರದಿಯನ್ನು ಆಧರಿಸಿ ಸಮಗ್ರ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.
‘ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್ ಆಸ್ತಿ ಸಂರಕ್ಷಣೆ ಕುರಿತ ನಿಮ್ಮ ವರದಿಯನ್ನು ಏಕೆ ಅನುಷ್ಠಾನ ಮಾಡಲಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ವಕ್ಫ್ ಆಸ್ತಿ ಕಬಳಿಕೆ ಮಾಡಿರುವ ಪ್ರಭಾವಿಗಳನ್ನು ಶಿಕ್ಷಿಸುವ ಮೂಲಕ ಅಲ್ಪಸಂಖ್ಯಾತರಿಗೆ ನೆರವಾಗುವ ಉತ್ತಮ ಅವಕಾಶವನ್ನು ಬಿಜೆಪಿ ಕಳೆದುಕೊಂಡಿದೆ’ ಎಂದರು.
ವಕ್ಫ್ ಸಂಬಂಧಿ ಕಾನೂನುಗಳಿಗೆ ಕೇಂದ್ರ ಸರ್ಕಾರವು ತರಲು ಉದ್ದೇಶಿಸಿರುವ 44 ತಿದ್ದುಪಡಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದಕ್ಕೆ ಬಹುತೇಕ ಒಪ್ಪಿಗೆ ಇದೆ. ಆದರೆ ಕೆಲವೊಂದು ತಿದ್ದುಪಡಿಗಳನ್ನು ಒಪ್ಪಲಾಗದು’ ಎಂದರು.
‘ನನ್ನ ವರದಿಯ ಆಧಾರದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ. ನನ್ನ ವರದಿಯ ವಿಚಾರವು ಪ್ರಧಾನಿ ನರೇಂದ್ರ ಮೋದಿ ಅವರ ಗಮನದಲ್ಲೂ ಇದೆ. ವಕ್ಫ್ ಕಾಯ್ದೆ ತಿದ್ದುಪಡಿಯ ಪ್ರಸ್ತಾವನ್ನೂ ಮುನ್ನ ಕಿರಣ್ ರಿಜಿಜು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನನ್ನನ್ನು ನವದೆಹಲಿಗೆ ಕರೆಸಿಕೊಂಡು ಈ ಬಗ್ಗೆ ಚರ್ಚಿಸಿದ್ದರು’ ಎಂದರು.
ಪ್ರಮೋದ್ ಮುತಾಲಿಕ್, ‘ಅನ್ವರ್ ಮಾಣಿಪ್ಪಾಡಿ ವರದಿ ಜಾರಿಯಾದರೆ ಹಿಂದೂಗಳಿಗೆ ಹಾಗೂ ಮುಸ್ಲಿಮರಿಗೂ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಇದೆ. ಬಹಳಷ್ಟು ಅಧ್ಯಯನ ನಡೆಸಿ ಈ ವರದಿ ತಯಾರಿಸಿದ್ದರು. ವಕ್ಫ್ ಆಸ್ತಿ ಕಬಳಿಸಿರುವ ಪ್ರಭಾವಿಗಳನ್ನು ಸರ್ಕಾರ ಶಿಕ್ಷೆಗೆ ಗುರಿಪಡಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.