ADVERTISEMENT

ಮಂಗಳೂರು | ಸಕಾಲಕ್ಕೆ ಕೈಗೆ ಸಿಗದ ಸಂಬಳ; ಸಹಾಯವಾಣಿ ಸಿಬ್ಬಂದಿಯೇ ಅಸಹಾಯಕರು!

ಆರು ತಿಂಗಳಿನಿಂದ ವೇತನದ ಮೊತ್ತ ಕಡಿತ

ಸಂಧ್ಯಾ ಹೆಗಡೆ
Published 27 ಆಗಸ್ಟ್ 2024, 5:36 IST
Last Updated 27 ಆಗಸ್ಟ್ 2024, 5:36 IST
ನಗದು (ಸಾಂದರ್ಭಿಕ ಚಿತ್ರ)
ನಗದು (ಸಾಂದರ್ಭಿಕ ಚಿತ್ರ)   

ಮಂಗಳೂರು: ನಗರದ ಪಾಂಡೇಶ್ವರ ಪೊಲೀಸ್ ಠಾಣೆ ಆವರಣದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿಯೇ ಅಸಹಾಯಕರಾಗಿದ್ದಾರೆ. ಕಳೆದ ಆರು ತಿಂಗಳುಗಳಿಂದ ಕಡಿತವಾಗಿರುವ ವೇತನದ ಮೊತ್ತ, ಸಕಾಲಕ್ಕೆ ಕೈಗೆ ಸಿಗದ ವೇತನದಿಂದ ಅವರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ ಬರುವ ಹಿರಿಯ ನಾಗರಿಕರ ಸಹಾಯವಾಣಿಯನ್ನು ಮಂಗಳೂರಿನ ವಿಶ್ವಾಸ ಟ್ರಸ್ಟ್ ನಡೆಸುತ್ತಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುವ ಈ ಸಹಾಯವಾಣಿ ಕೇಂದ್ರದಲ್ಲಿ ಮೂವರು ಕೌನ್ಸೆಲರ್‌ಗಳು, ಒಬ್ಬರು ಯೋಜನಾ ಸಂಯೋಜಕರು ಇದ್ದಾರೆ. ಅವರ ಸಂಬಳವನ್ನು ಶೇ 90ರಷ್ಟು ಸರ್ಕಾರ ಭರಿಸಿದರೆ, ವಿಶ್ವಾಸ ಟ್ರಸ್ಟ್ ಶೇ 10ರಷ್ಟು ಪಾಲು ನೀಡುತ್ತದೆ.

‘ಕನಿಷ್ಠ ಸಂಬಳಕ್ಕೆ ಕೆಲಸ ನಿರ್ವಹಿಸುವ ನಮಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ಸಂಬಳದ ಮೊತ್ತ ಕೈಗೆ ಸಿಗುತ್ತದೆ. ಕುಟುಂಬ ನಿರ್ವಹಣೆ, ಮನೆಯಿಂದ ಕಚೇರಿ ಪ್ರಯಾಣ, ಮಧ್ಯಾಹ್ನದ ಊಟ ಹೀಗೆ ದೈನಂದಿನ ವೆಚ್ಚ ಭರಿಸುವುದು ಕೂಡ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಸಿಬ್ಬಂದಿಯೊಬ್ಬರು.

ADVERTISEMENT

‘ಸಿಬ್ಬಂದಿ ವೇತನ, ಕಚೇರಿ ವೆಚ್ಚ, ತುರ್ತು ಔಷಧ, ಸಹಾಯವಾಣಿಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತರ ಭೇಟಿಗೆ ಹೋಗುವ ಪ್ರಯಾಣ ವೆಚ್ಚ ಸೇರಿ ಮೂರು ತಿಂಗಳಿಗೊಮ್ಮೆ ಸರ್ಕಾರದಿಂದ ₹1.54 ಲಕ್ಷ ಮೊತ್ತ ಪಾವತಿಯಾಗುತ್ತಿತ್ತು. ಆರು ತಿಂಗಳುಗಳಿಂದ ಈ ಮೊತ್ತ ಕಡಿತಗೊಂಡಿದ್ದು, ₹1.24 ಲಕ್ಷ ಮಾತ್ರ ಬರುತ್ತಿದೆ. ಕಳೆದ ತಿಂಗಳು (ಜೂನ್‌) ಹಿಂದಿನ ಮೂರು ತಿಂಗಳುಗಳ ಮೊತ್ತ ಸೇರಿ ₹1.39 ಲಕ್ಷ ಮಂಜೂರು ಆಗಿದೆ. ಒಟ್ಟು ಮೊತ್ತದಲ್ಲಿ ಕಡಿತವಾಗಿರುವ ಕಾರಣ ನಮ್ಮ ಸಂಬಳಕ್ಕೂ ಕತ್ತರಿ ಹಾಕಲಾಗಿದೆ’ ಎಂದು ಇನ್ನೊಬ್ಬರು ಸಿಬ್ಬಂದಿ ಬೇಸರಿಸಿದರು.

‘ಸರ್ಕಾರದಿಂದ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆಯಾಗುತ್ತದೆ. ಅಲ್ಲಿಂದ ವಿಳಂಬ ಇಲ್ಲದೆ, ಹಣ ವರ್ಗಾವಣೆಯಾಗುತ್ತದೆ. ಆದರೆ, ಸರ್ಕಾರದಿಂದ ಹಣ ಬಿಡುಗಡೆಯಾಗುವುದೇ ವ್ಯವಸ್ಥಿತವಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಸಹಾಯವಾಣಿ ನಿರ್ವಹಿಸುವ ಸಂಸ್ಥೆ ಸಿಬ್ಬಂದಿಗೆ ಪ್ರತಿ ತಿಂಗಳ ವೇತನ ಪಾವತಿಸಿ, ಸರ್ಕಾರದಿಂದ ಅನುದಾನ ಬಂದ ಮೇಲೆ ಅದನ್ನು ಸರಿದೂಗಿಸಿಕೊಳ್ಳುತ್ತದೆ. ಇಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಕೇಂದ್ರದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಮಹಿಳೆಯೊಬ್ಬರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.