ADVERTISEMENT

ಸಹಾಯವಾಣಿಯಲ್ಲಿ ನೆರವಿಗೆ ಮೊರೆಯಿಡುವ ಹಿರಿಯ ನಾಗರಿಕರು

ಹಿರಿಯರಿಗೆ ಕೌಟುಂಬಿಕ ಕಿರಿಕಿರಿಗಳೇ ಅಧಿಕ

ಸಂಧ್ಯಾ ಹೆಗಡೆ
Published 21 ಸೆಪ್ಟೆಂಬರ್ 2024, 6:34 IST
Last Updated 21 ಸೆಪ್ಟೆಂಬರ್ 2024, 6:34 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಂಗಳೂರು: 85 ವರ್ಷದ ಅಜ್ಜಿಗೆ ನಾಲ್ವರು ಮಕ್ಕಳು, ಯಾರಿಗೂ ತಾಯಿಯ ಪೋಷಣೆ ಇಷ್ಟವಿಲ್ಲ. ತಾತ್ಕಾಲಿಕವಾಗಿ ಕಿರಿಯ ಮಗಳ ಮನೆಯಲ್ಲಿದ್ದ ಅಜ್ಜಿಯನ್ನು, ಮಗಳು ಉಪಾಯದಿಂದ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ತರುತ್ತಾಳೆ. ಕೆಲ ಸಮಯದ ನಂತರ ತಾಯಿಯನ್ನು ಅಲ್ಲಿಯೇ ಕುಳ್ಳಿರಿಸಿ ಮಗಳು ಉಪಾಯದಿಂದ ಅಲ್ಲಿಂದ ಪಾರಾಗುತ್ತಾಳೆ. ದಿಕ್ಕು ತೋಚದಾದ ಅಜ್ಜಿ ಅಲ್ಲಿಯೇ ಕಾಲ ಕಳೆಯುತ್ತಾರೆ. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಪೊಲೀಸ್ ವಿಚಾರಣೆಯಲ್ಲಿ, ಎಲ್ಲ ಮಕ್ಕಳೂ ನಿರ್ದಿಷ್ಟ ಅವಧಿಗೆ ತಾಯಿಯನ್ನು ನೋಡಿಕೊಳ್ಳಬೇಕೆಂಬ ಆದೇಶದೊಂದಿಗೆ ಇತ್ಯರ್ಥ ಕಾಣುತ್ತದೆ...

ಇಂತಹ ಹಲವಾರು ಪ್ರಕರಣಗಳು ನಗರದ ಪಾಂಡೇಶ್ವರದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿಗೆ ನೆರವು ಯಾಚಿಸಿ ಬರುತ್ತವೆ. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಸ್ತುವಾರಿಯಲ್ಲಿ ಮಂಗಳೂರಿನ ವಿಶ್ವಾಸ ಟ್ರಸ್ಟ್ ಹಿರಿಯ ನಾಗರಿಕರ ಸಹಾಯವಾಣಿಯನ್ನು ಮುನ್ನಡೆಸುತ್ತಿದೆ.

ADVERTISEMENT

ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ಪೂರ್ವಕ್ಕೆ ಹೋಲಿಸಿದರೆ, ಈಗ ಬರುವ ಕರೆಗಳ ಸಂಖ್ಯೆ ಇಳಿಮುಖವಾಗಿದೆ. ಕೋವಿಡ್ ವೇಳೆ ಬರುವ ಕರೆಗಳ ಸ್ವರೂಪ ಬದಲಾಗಿತ್ತು. ಆದರೆ, ಈಗ ಪುನಃ ಕೌಟುಂಬಿಕ ಸಮಸ್ಯೆಗಳು, ಆಸ್ತಿ ಹಂಚಿಕೆಗೆ ಮಕ್ಕಳು ತೊಂದರೆ ನೀಡುತ್ತಿರುವ ಬಗ್ಗೆ ಹಿರಿಯರು ಸಹಾಯವಾಣಿ ಕರೆ ಮಾಡಿ ನೆರವು ಯಾಚಿಸುತ್ತಾರೆ. 2024ರ ಜನವರಿ ತಿಂಗಳಿನಿಂದ ಆಗಸ್ಟ್ ಅಂತ್ಯದವರೆಗೆ 147 ಪ್ರಕರಣಗಳು ಸಹಾಯವಾಣಿಗೆ ಬಂದಿವೆ ಎನ್ನುತ್ತಾರೆ ಸಹಾಯವಾಣಿ ಸಿಬ್ಬಂದಿ. 

‘ಇಳಿವಯಸ್ಸಿನಲ್ಲಿ ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅನೇಕರು ಕರೆ ಮಾಡಿ, ಗದ್ಗದಿತರಾಗುತ್ತಾರೆ. ಆಸ್ತಿಯಲ್ಲಿ ಪಾಲು ಪಡೆದು, ಪಾಲಕರನ್ನು ದೂರ ಮಾಡಿರುವ ಮಕ್ಕಳಿಗೆ ಬುದ್ಧವಾದ ಹೇಳಿ, ಕೌಟುಂಬಿಕ ಕಲಹ ಸರಿಪಡಿಸಿಕೊಡುವಂತೆ ಕೆಲವು ಅಜ್ಜಿಯರು ಮೊರೆಯಿಡುತ್ತಾರೆ. ಮಹಿಳೆಯರಿಂದಲೇ ಹೆಚ್ಚು ಕರೆಗಳು ಬರುತ್ತವೆ. ಅರ್ಜಿ ಭರ್ತಿ ಮಾಡಲು ನೆರವು ಕೇಳುವವರೂ ಇದ್ದಾರೆ’ ಎನ್ನುತ್ತಾರೆ ಸಹಾಯವಾಣಿಯಲ್ಲಿ ಕೆಲಸ ಮಾಡುವ ಯುವತಿಯೊಬ್ಬರು. 

‘ಪತಿಯನ್ನು ಕಳೆದುಕೊಂಡು ಒಂಟಿಯಾಗಿರುವವರು ಬದುಕಿನ ಸಂಜೆಯಲ್ಲಿ ಸಹಾಯವಾಣಿ ಮೂಲಕ ನೆರವು ಸಿಗಬಹುದೆಂಬ ಭರವಸೆಯಲ್ಲಿ ಕರೆ ಮಾಡುತ್ತಾರೆ. ವರ್ಷದಿಂದೀಚೆಗೆ ಕೌಟುಂಬಿಕ ಕಿರಿಕಿರಿಯಿಂದ ಬೇಸತ್ತು ಕರೆ ಮಾಡುವವರ ಸಂಖ್ಯೆ ಹೆಚ್ಚಿದೆ. ನಮ್ಮಿಂದ ಸಾಧ್ಯವಾದ ಸಹಾಯ ಮಾಡುತ್ತೇವೆ. ಜಿಲ್ಲಾ ಪಂಚಾಯಿತಿ, ಉಪವಿಭಾಗಾಧಿಕಾರಿ ನ್ಯಾಯಾಲಯ, ಜಿಲ್ಲಾಧಿಕಾರಿ ನ್ಯಾಯಾಲಯದಿಂದ ಬಂದ ದೂರುಗಳು ಸೇರಿದಂತೆ ತಿಂಗಳಿಗೆ ಸರಾಸರಿ 20 ಪ್ರಕರಣಗಳು ಸಹಾಯವಾಣಿಯೆದರು ಬರುತ್ತವೆ’ ಎಂದು ವಿಶ್ವಾಸ ಟ್ರಸ್ಟ್‌ ಮ್ಯಾನೇಜಿಂಗ್ ಟ್ರಸ್ಟಿ ಸಂತೋಷ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.