ಮಂಗಳೂರು: ಮಂಗಳಾದೇವಿ ನಾಡಿನಾದ್ಯಂತ ಈಗ ನವರಾತ್ರಿಯ ಸಡಗರ. ನವರಾತ್ರಿಯ ಪರ್ವ ಕಾಲದಲ್ಲಿ ನಡೆಯುವ ಶಾರದಾ ದೇವಿ ಆರಾಧನೆ ಈ ಹಬ್ಬಕ್ಕೆ ವಿಶೇಷ ಮೆರುಗು ತುಂಬತ್ತದೆ. ಇಲ್ಲಿನ ನಡೆಯುವ ಕೆಲವು ಶಾರದೋತ್ಸವಗಳಿಗೆ ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಧಾರ್ಮಿಕ ಭಕ್ತಿಯ ಜೊತೆಗೆ ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಟ್ಟಿರುವ ಶಾರದೋತ್ಸವಗಳ ಚುಟುಕು ನೋಟ ಇಲ್ಲಿದೆ.
ಜಿಲ್ಲೆಯಲ್ಲೇ ಅತ್ಯಂತ ಪುರಾತನ ಶಾರದೋತ್ಸವ ನಡೆಯುವುದು ನಗರದ ರಥಬೀದಿಯ ಶ್ರೀವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದಲ್ಲಿ. ಈ ಶಾರದೋತ್ಸವಕ್ಕೆ ಈವರ್ಷ 102ನೇ ವರ್ಷದ ಸಂಭ್ರಮ. ಅಡಿಗೆ ದಾಮೋದರ ಶೆನೈ, ಮೂಲ್ಕಿ ಮರತಪ್ಪ ಪ್ರಭು, ಪಿ.ಜಿ.ಕಾಮತ್, ಬೆಂಕಿನ ಕಡ್ಡಿ ಸದಾಶಿವ ಕಾಮತ್ ಮೊದಲಾದವರು ಸೇರಿ ಆರಂಭಿಸಿದ್ದರು. ಶ್ರೀಶಾರದೋತ್ಸವ ಟ್ರಸ್ಟ್ ಹಾಗೂ ಶ್ರೀ ಶಾರದಾ ಮಹೋತ್ಸವ ಸಮಿತಿಗಳು ಈ ಉತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿವೆ.
ಪ್ರತಿ ವರ್ಷ ಮೂಲಾ ನಕ್ಷತ್ರದಲ್ಲಿ ಇಲ್ಲಿನ ಶಾರದೆಯ ಪ್ರತಿಷ್ಠೆ ನಡೆಯುತ್ತಿದೆ. ಈ ವರ್ಷ ಇದೇ 9ರಂದು ಬೆಳಿಗ್ಗೆ 7ಕ್ಕೆ ಶಾರದೆಯ ಪ್ರತಿಷ್ಠೆ ನಡೆಯಲಿದೆ. ಶ್ರೀದೇವಿಯ ವಿಸರ್ಜನಾಪೂಜೆ ಇದೇ 12ರಂದು ಏಕಾದಶಿಗೆ ಶೋಭಾಯಾತ್ರೆ ಇದೇ 14ರಂದು ನಡೆಯಲಿದೆ. ನಿತ್ಯವು ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಕ್ತರು ಹರಕೆ ಹೊತ್ತು ಹುಲಿವೇಷ ಸೇವೆ ಒಪ್ಪಿಸುವುದು ಇಲ್ಲಿನ ವಿಶೇಷ. ಇಲ್ಲಿ 13 ತಂಡಗಳು ಇಲ್ಲಿ ಹುಲಿವೇಷಕ್ಕೆ ಮಾತ್ರ ಇಲ್ಲಿ ಅನುಮತಿ. 90 ವರ್ಷಗಳಿಂದ ಹರಕೆ ಒಪ್ಪಿಸುವ ಹುಲಿವೇಷಧಾರಿಗಳೂ ಇದ್ದಾರೆ ಎಂದು ಸತೀಶ ಪ್ರಭು ತಿಳಿಸಿದರು.
ಪ್ರತಿವರ್ಷವೂ ಭಾರಿ ಪ್ರಮಾಣದಲ್ಲಿ ಸೀರೆಯನ್ನು, ಆಭರಣಗಳನ್ನು ಹರಕೆ ರೂಪದಲ್ಲಿ ಒಪ್ಪಿಸುತ್ತಾರೆ. ಈ ಶಾರದೋತ್ಸವದ 100ನೇ ವರ್ಷಕ್ಕೆ ಚಿನ್ನದ ಕಿರೀಟವನ್ನು ಹಾಗೂ ಚಿನ್ನದ ನೂಲಿನಿಂದ ನೆಯ್ದ ಸೀರೆಯನ್ನು ಭಕ್ತರು ಅರ್ಪಿಸಿದ್ದರು. ಮೆರವಣಿಗೆಯ ದಿನದ ಶಾರದೆಗೆ ಚಿನ್ನದ ನೂಲಿನಿಂದ ತಯಾರಿಸಿದ ಸೀರೆಯನ್ನು ಉಡಿಸಲಾಗುತ್ತದೆ. ದುರ್ಗಾ ನಮಸ್ಕಾರದ ದಿನ ಅನ್ನ ಸಂತರ್ಪಣೆ ಇರುತ್ತದೆ. ಈ ಸಲ ಇದೇ 10ರಂದು ಗುರ್ಗಾನಮಸ್ಕಾರ ಸೇವೆ ಇದೆ.
‘100ನೇ ವರ್ಷದ ಬಳಿಕ ಪ್ರತಿ ವರ್ಷ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವೈದ್ಯಕೀಯ ಶಿಬಿರ ಹಮ್ಮಿಕೊಂಡು, ಚಿಕಿತ್ಸೆ ವೆಚ್ಚ ಭರಿಸಲಾಗದವರಿಗೆ ಟ್ರಸ್ಟ್ ಆರ್ಥಿಕ ನೆರವು ಒದಗಿಸುತ್ತದೆ’ ಎಂದು ಸತೀಶ ಪ್ರಭುಮಾಹಿತಿ ನೀಡಿದರು.
ಶೋಭಾಯಾತ್ರೆ ಉತ್ಸವಸ್ಥಾನದಿಂದ ಹೊರಟು ಶ್ರೀಮಹಾಮ್ಮಾಯಿ ದೇವಸ್ಥಾನ– ಗದ್ದೆಕೇರಿ– ಕೆನರಾ ಹೈಸ್ಕೂಲ್, ಮಂಜೇಶ್ವರ ಗೋವಿಂದ ಪೈ ವೃತ್ತ– ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ– ನ್ಯೂಚಿತ್ರಾ ಟಾಕೀಸ್– ಬಸವನಗುಡಿ– ಚಾಮರಗಲ್ಲಿ– ರಥಬೀದಿ ಮಾರ್ಗವಾಗಿ ಸಾಗಿ ಮಹಾಮಾಯಿ ತೀರ್ಥದಲ್ಲಿ ಶಾರದಾದೇವಿ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.
ನಗರದ ಕೊಡಿಯಾಲ್‌ಬೈಲ್‌ನ ಅರ್ಕ ಮಹಾಗಣಪತಿ ದೇವಸ್ಥಾನದ ಶಾರದೋತ್ಸವಕ್ಕೆ ಈ ವರ್ಷ ಸ್ವರ್ಣ ಮಹೋತ್ಸವ ಸಂಭ್ರಮ.
ಈ ಶಾರದೆಯನ್ನು 1974ರಿಂದ ಇಲ್ಲಿ ಶಾರದಾ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ನಾವೆಲ್ಲ ಸಣ್ಣವರಿದ್ದಾಗ ಮಕ್ಕಳೇ ಸೇರಿಕೊಂಡು ಶಾರದೋತ್ಸವ ನಡೆಸುತ್ತಿದ್ದೆವು. ನಮ್ಮ ತಂದೆ ದಯಾನಂದ ಭಟ್ ಅವರು ಅರ್ಕ ದೇವಸ್ಥಾನದ ಅರ್ಚಕರಾಗಿದ್ದರು. ಅವರು ಮಕ್ಕಳಾಟ ಬೇಡ ಎಂದು ವಿಧಿಯುಕ್ತವಾಗಿ ಶಾರದಾ ಪ್ರತಿಷ್ಠೆಗೆ ಮಾರ್ಗದರ್ಶನ ಮಾಡಲಾರಂಭಿಸಿದರು. 1999ರಲ್ಲಿ ಇಲ್ಲಿನ ಶಾರದೋತ್ಸವ ಬೆಳ್ಳಿ ಹಬ್ಬವನ್ನು ಆಚರಿಸಲಾಗಿದೆ. ಆಗ 10 ಪವನ್ ತೂಕ ಚಿನ್ನದ ಕಾಸಿನ ಸರವನ್ನು ಶಾರದೆಗೆ ಅರ್ಪಿಸಲಾಗಿದೆ. ಈ ವರ್ಷ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಿದ್ದೇವೆ’ ಎಂದು ದೇವಸ್ಥಾನದ ಅರ್ಚಕರು ಆಗಿರುವ ಕೃಷ್ಣಾನಂದ ಭಟ್ ತಿಳಿಸಿದರು.
ಯಾವಾಗಲೂ ಮೂಲಾ ನಕ್ಷತ್ರದಲ್ಲಿ ಶಾರದೆಯ ಪ್ರತಿಷ್ಠೆ ಮಾಡಿ ವಿಜಯದಶಮಿವರೆಗೆ ಉತ್ಸವ ಆಚರಿಸಲಾಗುತ್ತಿತ್ತು. ಸಉವರ್ಣ ಮಹೋತ್ಸವದ ಅಂಗವಾಗಿ ಈ ವರ್ಷ ಇದೇ 4ರಂದು ಶುಕ್ರವಾರವೇ ಶಾರದಾ ಪ್ರತಿಷ್ಠಾಪನೆ ಮಾಡಲಾಗಿದೆ. ಶನಿವಾರ ದುರ್ಗಾನಮಸ್ಕಾರ ಪೂಜೆ, ಭಾನುವಾರ ಲಕ್ಷ ಕುಂಕುಮಾರ್ಚನೆ ಹಾಗೂ ರಂಗ ಪೂಜೆಗಳು ನಡೆಇದಿವೆ. ಇದೇ 7ರಂದು ಸೋಮವಾರ ಲಕ್ಷ್ಮೀನಾರಾಯಣ ಹೃದಯ ಹೋಮ, ಇದೇ 8ರಂದು ಮಂಗಳವಾರ ಪಂಚದುರ್ಗಾ ಹೋಮ, ಇದೇ 9ರಂದು ಸರಸ್ವತಿ ಹವನ ಹಾಗೂ ಇದೇ10ರಂದು ಚಂಡಿಕಾ ಹವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದೇ 12ರಂದು ವಿಜಯ ದಶಮಿ ದಿವಸ ಇಲ್ಲಿ ಕಾಡಿನ ವಾತಾವರಣವನ್ನು ನಿರ್ಮಿಸುವ ಮೂಲಕ ಶಾರದೆಗೆ ವನದ ಅಲಂಕಾರ ಮಾಡಲಾಗುತ್ತದೆ. ಇದೇ 13ರಂದು ಶಾರದೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.ಶಾರದೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ ಎಂದು ಕೃಷ್ಣ ಭಟ್ ಮಾಹಿತಿ ನೀಡಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಶಾರದೋತ್ಸವ ಈಗ ‘ಮಂಗಳೂರು ದಸರಾ’ ಎಂದೇ ಪ್ರಖ್ಯಾತವಾದುದು. ಇಲ್ಲಿ ಹಿಂದಿನಿಂದಲೂ ನವರಾತ್ರಿ ಸಂದರ್ಭದಲ್ಲಿ ಶಾರದೋತ್ಸವ ನಡೆಯುತ್ತಿತ್ತು. ಆದರೆ 34 ವರ್ಷಗಳಿಂದೀಚೆಗೆ ಇಲ್ಲಿನ ನವರಾತ್ರಿ ಉತ್ಸವದ ವೈಭವವೇ ಬದಲಾಗಿದೆ. ಶಾರದಾದೇವಿಯ ಜೊತೆಗೆ ಇಲ್ಲಿ ಗಣಪತಿ, ನವದುರ್ಗೆಯರು ಹಾಗೂ ಆದಿಶಕ್ತಿಯ ವಿಗ್ರಹಗಳನ್ನು ನವರಾತ್ರಿಯ ಮೊದಲ ದಿನದಿಂದೇ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ ಇದೇ 3ರಂದು ಆರಂಭವಾದ ನವರಾತ್ರಿ ಮಹೋತ್ಸವ ಇದೇ 14ರವರೆಗೆ ನಡೆಯಲಿದೆ. ಅಷ್ಟೂ ದಿನಗಳು ಈ ವಿಗ್ರಹಗಳ ಸೊಬಗು ನೋಡಲು ಭಕ್ತರು ದಾಂಗುಡಿ ಇಡುತ್ತಾರೆ. ಇದೇ 14ರಂದು ನಡೆಯುವ ಶಾರದೆ ಹಾಗೂ ನವದುರ್ಗೆಯರ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ನವರಾತ್ರಿಯ ಎಲ್ಲ ದಿನಗಳೂ ವಿಶೇಷ ಪೂಜೆ, ಹೋಮ ಹವನಗಳು ಇಲ್ಲಿನ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.