ಮಂಗಳೂರು: ಪೂಜೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದಿನವಿಡೀ ಚಟುವಟಿಕೆಯಿಂದ ಕೂಡಿದ್ದ ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪನೆಯ ಸಂಭ್ರಮ ಮನೆಮಾಡಿತು.
ವೆಂಕಟರಮಣ ದೇವಸ್ಥಾನದಲ್ಲಿ ದಸರೆಯ ವೈಭವ ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ಆರಂಭವಾಗುವುದಿಲ್ಲ. ಇಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ ಆಗುವುದು ದಸರಾ ಆರಂಭಗೊಂಡು ನಾಲ್ಕು–ಐದು ದಿನಗಳ ನಂತರ. ಮೂಲಾ ನಕ್ಷತ್ರದಿಂದ ಶ್ರಾವಣ ನಕ್ಷತ್ರದ ವರೆಗೆ ಕಾರ್ಯಕ್ರಮ ವೈವಿಧ್ಯ ಇರುತ್ತದೆ. ಶಾರದಾ ಮಾತೆ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮೆರವಣಿಗೆ ಇದರ ಪ್ರಮುಖ ಘಟ್ಟ. ಶಾರದಾ ಮಹೋತ್ಸವ ಎಂದೇ ಇದಕ್ಕೆ ಹೆಸರು.
ದೇವಸ್ಥಾನದ ರಾಜಾಂಗಣದಿಂದ ಮಂಗಳವಾರ ರಾತ್ರಿ ವಿಗ್ರಹವನ್ನು ತೆಗೆದುಕೊಂಡು ಬರಲಾಯಿತು. ಉಮಾಮಹೇಶ್ವರ ದೇವಸ್ಥಾನ ರಸ್ತೆ, ರಾಮಮಂದಿರ, ನಂದಾದೀಪ ರಸ್ತೆ, ಹೂವಿನ ಮಾರುಕಟ್ಟೆ ಅಡ್ಡರಸ್ತೆ ಮೂಲಕ ಸಾಗಿ ರಥಬೀದಿ ತಲುಪಿದ ಮೆರವಣಿಗೆ ದೇವಸ್ಥಾನಕ್ಕೆ ತಲುಪಿದಾಗ ಭಕ್ತರಿಂದ ಸಂಭ್ರಮದ ಅಲೆ ಎದ್ದಿತು. ಬುಧವಾರ ಬೆಳಿಗ್ಗೆ 7 ಗಂಟೆಗೆ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಭಜನೆ, ಮಹಾಪೂಜೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ಇತ್ತು. ಮುಂಬೈನ ಹಿಂದುಸ್ತಾನಿ ಗಾಯಕಿ ಭಾಗ್ಯಶ್ರೀ ದೇಶಪಾಂಡೆ ಅವರ ಗಾಯನ ಮುದ ನೀಡಿತು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬರತೊಡಗಿದ್ದರು. ಶಾರದಾ ಮಾತೆಗೆ ನಮಿಸಿದ ಅವರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
‘ಈ ಬಾರಿ ನಡೆಯುತ್ತಿರುವುದು 102ನೇ ವರ್ಷದ ಶಾರದಾ ಮಹೋತ್ಸವ. 6 ಅಡಿ ಎತ್ತರದ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದೇಶದಾದ್ಯಂತ ಸರಸ್ವತಿಯನ್ನು ಪುಸ್ತಕ ರೂಪದಲ್ಲಿ ಪೂಜಿಸುತ್ತಿದ್ದರೆ ಆಚಾರ್ಯ ಮಠದ ಆವರಣದಲ್ಲಿ ಮೂರ್ತಿ ರೂಪದಲ್ಲಿ ಪೂಜಿಸುವುದು ವಿಶೇಷ. ಇಲ್ಲಿನ ಹಳೆಯ ಕಪಾಟಿನಲ್ಲಿ ಧರ್ಮಗ್ರಂಥಗಳನ್ನು ಇರಿಸಿದ್ದು ಅದಕ್ಕೆ ಪ್ರತಿ ವರ್ಷ ಪೂಜೆ ಮಾಡಲಾಗುತ್ತದೆ. ಏಕಾದಶಿಯ 14ನೇ ತಾರೀಕಿನ ವರೆಗೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಶ್ರೀ ಶಾರದಾ ಮಹೋತ್ಸವ ಸಮಿತಿಯ ಗಣೇಶ ಬಾಳಿಗ ‘ಪ್ರಜಾವಾಣಿ’ಗೆ ತಿಳಿಸಿದರು.
‘10ನೇ ತಾರೀಕು ಗುರುವಾರ ದುರ್ಗಾ ನಮಸ್ಕಾರ, 13ರಂದು ಸಂಜೆ ವಿಶೇಷ ದೀಪಾಲಂಕಾರ ಇರಲಿದೆ. ದೀಪಾಲಂಕಾರ 16 ವರ್ಷಗಳಿಂದ ನಡೆಯುತ್ತಿದೆ. ಸರಸ್ವತಿಗೆ ನಿತ್ಯ ಒಂದೊಂದು ಬಗೆಯ ಅಲಂಕಾರ ಮಾಡಲಾಗುತ್ತದೆ. ಯಾವ ಬಗೆಯ ಅಲಂಕಾರ ಎಂಬುದನ್ನು ಹಿಂದಿನ ರಾತ್ರಿ ನಿರ್ಧರಿಸಲಾಗುತ್ತದೆ. ಎಲ್ಲ ಸಾಹಿತ್ಯಗಳು ಸಿದ್ಧ ಇರುತ್ತವೆ. ಆದರೆ ಪಂಡಿತರು ಹೇಳಿದ ಅಲಂಕಾರವನ್ನು ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.
ಜಿಲ್ಲೆಯ ಪ್ರಮುಖ ದೇವಿ ದೇವಾಲಯಗಳಲ್ಲಿ ಬುಧವಾರವೂ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಹಾಪೂಜೆ, ಚಂಡಿಕಾ ಯಾಗ ಪೂರ್ಣಾಹುತಿ, ರಂಗಪೂಜೆ, ನವರಾತ್ರಿ ಪೂಜೆ ನಡೆಯಿತು. ಪೊಳಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ವೀರಬಬ್ರುವಾಹನ–ಅಗ್ರಪೂಜೆ ಬಯಲಾಟ ನಡೆಯಿತು. ಶಿವರಂಜಿನಿ ಕಲಾಕೇಂದ್ರದಿಂದ ‘ಕಲಾಸಂಗಮ’ ಗಮನ ಸೆಳೆಯಿತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನವಿಡೀ ಭಜನೆ, ಸಂಜೆ ಭಾರತಿ ಸುರೇಶ್ ಹೊಸಬೆಟ್ಟು ಅವರಿಂದ ಭರತನಾಟ್ಯ, ನಂತರ ಪರಶುರಾಮಾವತಾರ ಯಕ್ಷಗಾನ ನೆರವೇರಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಾಮೂಹಿಕ ಚಂಡಿಕಾ ಹೋಮದ ನಂತರ ಕುಮಾರಿ ದುರ್ಗಾ ಪೂಜೆ, ಪುಷ್ಪಾಲಂಕಾರ ಮಹಾಪೂಜೆ, ಭಜನೆ ಇತ್ಯಾದಿ ನಡೆಯಿತು.
ಶಾರದೆಗೆ ಈ ಬಾರಿ ಕಾಳಿಯ ಅಲಂಕಾರ ಇರುವುದು ವಿಶೇಷ. ಈ ಅವಕಾಶ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಸಿಗುತ್ತದೆ. ಈ ವರ್ಷ 13ನೇ ತಾರೀಕಿನಂದು ಕಾಳಿಯ ಅಲಂಕಾರದಲ್ಲಿ ಶಾರದೆ ವಿಜೃಂಭಿಸಲಿದ್ದಾಳೆ.ಗಣೇಶ ಬಾಳಿಗ ಶ್ರೀ ಶಾರದಾ ಮಹೋತ್ಸವ ಸಮಿತಿ ಪದಾಧಿಕಾರಿ
ಮಂಗಳಾದೇವಿ ದೇವಸ್ಥಾನದ ಸಮೀಪ ಇರುವ ಬೋಳಾರ ಮಾರಿಯಮ್ಮ ದೇವಸ್ಥಾನದಲ್ಲಿ ಹಿಂದೆ ಇದ್ದ ಯಕ್ಷಗಾನ ಮೇಳದ ನೆನಪಿಗಾಗಿ ವಿವಿಧ ಪರಿಕರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಮರದಿಂದ ಸಿದ್ಧಪಡಿಸಿದ ಕಿರೀಟ ತೋಳು ಕುದುರೆಯ ಮುಖ ಇತ್ಯಾದಿ ಗಮನ ಸೆಳೆಯುತ್ತಿವೆ. ‘1940ಕ್ಕೂ ಮೊದಲು ಇಲ್ಲಿ ಯಕ್ಷಗಾನ ಮೇಳ ಇತ್ತು. ಅಂದು ಬಳಸುತ್ತಿದ್ದ ಪರಿಕರಗಳು ಈಚೆಗೆ ಅಟ್ಟದ ಮೇಲೆ ಸಿಕ್ಕಿದ್ದವು. ಅದನ್ನು ತೆಗೆದು ಪ್ರದರ್ಶನ ಮಾಡಲಾಗಿದೆ.
ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬರುವವರಿಗೆ ಇದೊಂದು ಹೊಸ ಅನುಭವ’ ಎಂದು ಕಾರ್ಯಕರ್ತ ಭುಜಂಗ ಕೊಟ್ಟಾರಿ ತಿಳಿಸಿದರು. ‘ಕಳೆದ ಬಾರಿ ಇಲ್ಲಿ ಯಕ್ಷಗಾನ ಮೇಳವನ್ನು ಪುನರಾರಂಭಿಸಲಾಗಿದೆ. ಬಂಡಿದೇವಿ ಪಿಲಿಚಂಡಿ ಬೋಳಾರ ಕ್ಷೇತ್ರ ಮಹಾತ್ಮೆ ಮತ್ತು ಇತರ ಪೌರಾಣಿಕ ಸಾಮಾಜಿಕ ಪ್ರಸಂಗಗಳನ್ನು 20 ಕಡೆಗಳಲ್ಲಿ ಪ್ರದರ್ಶಿಸಲಾಗಿದೆ. ಸದ್ಯ ಮೇಳದಲ್ಲಿ ಅನುಭವಿಗಳು ಮತ್ತು ಯುವಕರನ್ನು ಒಳಗೊಂಡು 40 ಮಂದಿ ಇದ್ದಾರೆ’ ಎಂದು ಅವರು ವಿವರಿಸಿದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಕುಡ್ಲದ ಪಿಲಿಪರ್ಬದಲ್ಲಿ ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿವೆ. ಉಪಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಸ್ಪರ್ಧೆಯನ್ನು ಬೇಗ ಮುಗಿಸಬೇಕಾಗಿದೆ. ಹೀಗಾಗಿ ಹೆಚ್ಚು ತಂಡಗಳಿಗೆ ಅವಕಾಶ ನೀಡಲಾಗಲಿಲ್ಲ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇದೇ 11ರಂದು ನೆಹರೂ ಮೈದಾನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆಗಳು ನಡೆಯಲಿವೆ. ಮೊದಲ ಬಹುಮಾನ ಗೆದ್ದ ತಂಡಕ್ಕೆ ₹ 5 ಲಕ್ಷ ದ್ವಿತೀಯ ₹ 3 ಲಕ್ಷ ಮತ್ತು ತೃತೀಯ ಬಹುಮಾನವಾಗಿ ₹ 2 ಲಕ್ಷ ನಗದು ನೀಡಲಾಗುವುದು. ತಲಾ ₹ 25 ಸಾವಿರ ಮೊತ್ತದ 10 ವೈಯಕ್ತಿಕ ಬಹುಮಾನಗಳು ಕೂಡ ಇವೆ. ಮೊದಲ ಮೂರು ಬಹುಮಾನ ಗೆಲ್ಲುವ ತಂಡ ಹೊರತುಪಡಿಸಿ ಉಳಿದ ಎಲ್ಲ ತಂಡಗಳಿಗೆ ತಲಾ ₹ 50 ಸಾವಿರ ನೀಡಲಾಗುವುದು’ ಎಂದು ತಿಳಿಸಿದರು.
‘ಮೂರನೇ ಅಂಪೈರ್ ಪದ್ಧತಿಯನ್ನು ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿ ಬಳಸಲಾಗುವುದು. ಒಟ್ಟು 7 ಮಂದಿ ಅಂಪೈರ್‌ಗಳ ಪೈಕಿ ಇಬ್ಬರು ಮೂರನೇ ಅಂಪೈರ್ ಆಗಿರುತ್ತಾರೆ. ಹೊರಗೆ ಇರುವ ಅಂಪೈರ್‌ಗಳು ನೇರವಾಗಿ ತೀರ್ಪು ನೀಡುವುದಿಲ್ಲ. ಮೂರನೇ ಅಂಪೈರ್‌ಗಳು ವಿಡಿಯೊ ಪರಿಶೀಲನೆ ಮಾಡಿ ಸೂಕ್ಷ್ಮ ಅಂಶಗಳನ್ನು ಗಮನಿಸಿದ ನಂತರವೇ ಅಂತಿಮ ತೀರ್ಪು ಪ್ರಕಟಿಸಲಾಗುತ್ತದೆ’ ಎಂದು ಅವರು ವಿವರಿಸಿದರು.
ಅಧ್ಯಕ್ಷ ದಿವಾಕರ ಪಾಂಡೇಶ್ವರ ಪ್ರಮುಖರಾದ ಲಲಿತ್ ಅಶ್ವಿನ್ ಕೊಟ್ಟಾರಿ ಜಗದೀಶ್ ಕದ್ರಿ ಶಾನ್ ಮತ್ತು ನರೇಶ್ ಶೆಣೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.