ADVERTISEMENT

ಸ್ವಸಹಾಯ ಸಂಘಗಳಿಗೆ ₹ 607 ಕೋಟಿ ಲಾಭಾಂಶ

ಎಸ್‌ಕೆಡಿಆರ್‌ಡಿಪಿ– ಬಿ.ಸಿ.ಟ್ರಸ್ಟ್‌ ಕಾರ್ಯಕ್ರಮದಲ್ಲಿ ಚೆಕ್‌ ವಿತರಿಸಿದ ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 5:58 IST
Last Updated 15 ನವೆಂಬರ್ 2024, 5:58 IST
<div class="paragraphs"><p>ಶ್ರೀಕ್ಷೇತ್ರ&nbsp;ಧರ್ಮಸ್ಥಳ&nbsp;ಗ್ರಾಮೀಣಾಭಿವೃದ್ಧಿ&nbsp;ಯೋಜನೆಯ ಸ್ವಸಹಾಯ ಸಂಘದ ಸದಸ್ಯರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲಾಭಾಂಶವನ್ನು ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿದರು. ವಿ</p></div>

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲಾಭಾಂಶವನ್ನು ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿದರು. ವಿ

   

ಉಜಿರೆ (ದಕ್ಷಿಣ ಕನ್ನಡ): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಬಿ.ಸಿ. ಟ್ರಸ್ಟ್‌ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು ₹ 607.71 ಕೋಟಿ ಲಾಭಾಂಶವನ್ನು ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಕೇಂದ್ರ‌ ಹಣಕಾಸು ಸಚಿವೆ ನಿರ್ಮಲಾ‌ ಸೀತಾರಾಮನ್ ಅವರು ಸಾಂಕೇತಿಕವಾಗಿ ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶ್ರೀಶಂಕರ ಸಂಘ, ಆನೇಕಲ್‌ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ, ಹಾಸನದ ರೌಷನ್ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಿದರು.

ADVERTISEMENT

ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್‌, ‘ಹಿಂದೆ ಗ್ರಾಮೀಣಾಭಿವೃದ್ಧಿಯು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತವಾಗಿತ್ತು. ಸರ್ಕಾರದ ಹಣಕಾಸಿನ ನೆರವನ್ನು ಸ್ವಸಹಾಯ ಗುಂಪುಗಳ ಸದಸ್ಯರು ಸಣ್ಣ ಪುಟ್ಟ ಉದ್ದೇಶಗಳಿಗೆ ಬಳಸುತ್ತಿದ್ದರು. ಆದರೆ‌, ಈಗ ಗ್ರಾಮೀಣಾಭಿವೃದ್ಧಿಯು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳಂತಹ ಉತ್ತೇಜನಾ ಸಂಸ್ಥೆಗಳೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ನೆರವಾಗುತ್ತಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ಯಾರೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಯೋಚನೆ‌ ಮಾಡಿಲ್ಲ.‌ ₹600 ಕೋಟಿಗೂ ಹೆಚ್ಚು ಲಾಭಾಂಶ ವಿತರಿಸಿ ನಾವು ಅದನ್ನು ಸಾಧಿಸಿ ತೋರಿಸಿದ್ದೇವೆ. ಈ ಮಾದರಿಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕು’ ಎಂದರು.

‘51.80 ಲಕ್ಷ ಸದಸ್ಯರಿಗೆ ಲಾಭಾಂಶ’

‘ಬ್ಯಾಂಕ್‌ ಆಫ್‌ ಬರೋಡಾದ ಮೂಲಕ 12 ಜಿಲ್ಲೆಗಳ 161823 ಸ್ವಸಹಾಯ ಗುಂಪುಗಳ 1351877 ಸದಸ್ಯರಿಗೆ ₹ 168.80 ಕೋಟಿ ಬ್ಯಾಂಕ್ ಆಫ್‌ ಮಹಾರಾಷ್ಟ್ರದ ಮೂಲಕ ಒಂದು ಜಿಲ್ಲೆಯ 56022 ಸ್ವಸಹಾಯ ಗುಂಪುಗಳ 439479 ಸದಸ್ಯರಿಗೆ  ₹ 17.04 ಕೋಟಿ ಐಡಿಬಿಐ ಬ್ಯಾಂಕ್‌ ಮೂಲಕ ಎಂಟು ಜಿಲ್ಲೆಗಳ 95660 ಸ್ವಸಹಾಯ ಗುಂಪುಗಳ 785927 ಸದಸ್ಯರಿಗೆ ₹ 123.24 ಕೋಟಿ ಕರ್ಣಾಟಕ ಬ್ಯಾಂಕ್‌ ಮೂಲಕ  ಒಂದು ಜಿಲ್ಲೆಯ 26255 ಸ್ವಸಹಾಯ ಗುಂಪುಗಳ 208208 ಸದಸ್ಯರಿಗೆ ₹ 14.72 ಕೋಟಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೂಲಕ 7 ಜಿಲ್ಲೆಗಳ 99853 ಸ್ವಸಹಾಯ ಸಂಘಗಳ 798952 ಸದಸ್ಯರಿಗೆ ₹ 81.10 ಕೋಟಿ ಹಾಗೂ ಭಾರತೀಯ ಸ್ಟೇಟ್‌ ಬ್ಯಾಂಕಿನ ಮೂಲಕ 12 ಜಿಲ್ಲೆಗಳ 195507 ಸ್ವಸಹಾಯ ಸಂಘಗಳ 1595821 ಸದಸ್ಯರಿಗೆ 202.79 ಕೋಟಿ ಲಾಭಾಂಶವನ್ನು ವಿತರಿಸಲಾಗಿದೆ.  ಪ್ರತಿ ಮೂರು ವರ್ಷಗಳಿಗೊಮ್ಮೆ ಲಾಭಾಂಶ ವಿತರಿಸಲಾಗುತ್ತದೆ’ ಎಂದು ಎಸ್‌ಕೆಡಿಆರ್‌ಡಿಪಿ– ಬಿ.ಸಿ ಟ್ರಸ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.