ADVERTISEMENT

ಕೆಎಸ್‌ಆರ್‌ಟಿಸಿ: ಗುಂಡ್ಯ, ಸಂಪಾಜೆಯಲ್ಲಿ 'ಹಾಲ್ಟ್'

ಶಿರಾಡಿ ಘಾಟ್‌: ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಂಚಾರಕ್ಕೆ ಅನುವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 6:31 IST
Last Updated 20 ಜುಲೈ 2024, 6:31 IST
ಶಿರಾಡಿ ಘಾಟ್ ರಸ್ತೆ
ಶಿರಾಡಿ ಘಾಟ್ ರಸ್ತೆ   

ಮಂಗಳೂರು: ಗುಡ್ಡ ಕುಸಿತದಿಂದ ರಾತ್ರಿ ವೇಳೆಯ ಸಂಚಾರಕ್ಕೆ ಅಡ್ಡಿಯಾಗಿರುವ ಮಂಗಳೂರು–ಬೆಂಗಳೂರು ನಡುವಿನ ಗುಂಡ್ಯ ಮತ್ತು ಮಂಗಳೂರು–ಮೈಸೂರು ನಡುವಿನ ಸಂಪಾಜೆಯಲ್ಲಿ ‘ಹಾಲ್ಟ್‌’ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಮುಂದಾಗಿದೆ. ಬೆಂಗಳೂರಿನಿಂದ ಬರುವ ವಾಹನಗಳಿಗೆ ಸಕಲೇಶಪುರದಲ್ಲೂ ಮೈಸೂರಿನಿಂದ ಬರುವ ವಾಹನಗಳಿಗೆ ಮಡಿಕೇರಿ ಬಳಿಯೂ ಈ ವ್ಯವಸ್ಥೆ ಇರಲಿದೆ.

ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮ ಪಂಚಾಯಿತಿಯ ಕರ್ತೋಜಿಯಲ್ಲಿ ಗುಡ್ಡವೊಂದು ಕುಸಿಯುವ ಹಂತ ತಲುಪಿರುವುದರಿಂದ ಮಂಗಳೂರು–ಮೈಸೂರು ನಡುವೆ ಸಂಚರಿಸುವ ವಾಹನಗಳಿಗೆ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆಯ ವರೆಗೆ ಮಾತ್ರ ಅವಕಾಶ ನೀಡಿ ಕೊಡುಗು ಜಿಲ್ಲಾಧಿಕಾರಿ ವೆಂಕಟರಾಜ್ ಗುರುವಾರ ಆದೇಶ ಹೊರಡಿಸಿದ್ದರು.

ದೋಣಿಗಲ್‌ನಲ್ಲಿ ಗುಡ್ಡ ಕುಸಿದ ಕಾರಣ ಶಿರಾಡಿ ಘಾಟ್ ಮೂಲಕ ಸಾಗುವ ಎಲ್ಲ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಾಗುವಂತೆ ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಹೊರಡಿಸಿದ್ದರು. ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಿರುವ ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ ಎಂ.ಕೆ, ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಕೆಎಸ್‌ಆರ್‌ಟಿಸಿಯ ರಾಜಹಂಸ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳು ಈಗ ಚಾರ್ಮಾಡಿ ಘಾಟ್ ಕಡೆಯಿಂದ ಸಾಗುತ್ತಿವೆ. ವೋಲ್ವೊದಂಥ ಬಸ್‌ಗಳಿಗೆ ಕಡಿದಾದ ಈ ಹಾದಿಯಲ್ಲಿ ಸಾಗಲು ಕಷ್ಟವಾಗುತ್ತದೆ. ಮಂಗಳೂರಿನಿಂದ ರಾತ್ರಿ 10 ಗಂಟೆಯ ನಂತರ ಹೊರಟು ಶಿರಾಡಿ ಘಾಟ್ ಮೂಲಕ ಸಾಗುವ ಬಸ್‌ಗಳು ರಾತ್ರಿ 2 ಅಥವಾ 3 ಗಂಟೆಯ ಹೊತ್ತಿಗೆ ಗುಂಡ್ಯ ತಲುಪಲಿದ್ದು ಅಲ್ಲಿ ಮುಂಜಾನೆ 6 ಗಂಟೆಯ ವರೆಗೆ ಉಳಿದು ಪ್ರಯಾಣ ಮುಂದುವರಿಸಲಿವೆ. ಟಿಕೆಟ್ ಬುಕ್ ಮಾಡಿದ್ದು ಈ ವ್ಯವಸ್ಥೆಗೆ ಒಪ್ಪಿಕೊಳ್ಳುವವರು ಪ್ರಯಾಣಕ್ಕೆ ಸಿದ್ಧರಾಗಬಹುದು. ಬೇಡದೇ ಇದ್ದವರಿಗೆ ಹಣವನ್ನು ವಾಪಸ್ ನೀಡಲಾಗುವುದು ಎಂದು ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಪಾಜೆ ಮೂಲಕ ಸಾಗುವ ಬಸ್‌ಗಳನ್ನು ತಡರಾತ್ರಿ ಸಂಜಾಜೆಯಲ್ಲಿ ನಿಲ್ಲಿಸಿ ಮುಂಜಾನೆ ಮುಂದುವರಿಯಲಾಗುವುದು. ಆ ಮಾರ್ಗದಲ್ಲೂ ಈ ವ್ಯವಸ್ಥೆಗೆ ಒಪ್ಪಿಗೆ ಇರುವವರು ಪ್ರಯಾಣಕ್ಕೆ ಸಿದ್ಧರಾಗಬಹುದು ಎಂದು ಅವರು ತಿಳಿಸಿದರು.

ಸಂಪಾಜೆ ಮೂಲಕ ಸಾಗುವ ವಾಹನಗಳ ರಾತ್ರಿ ಸಂಚಾರವನ್ನು ಇದೇ 22ರ ವರೆಗೆ ಮಾತ್ರ ನಿಷೇಧಿಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಕುಸಿದಿರುವ ಮಣ್ಣು ತೆಗೆಯುವ ಕಾರ್ಯ ಪ್ರಗತಿಯಲ್ಲಿದ್ದು ಒಂದೆರಡು ದಿನಗಳಲ್ಲಿ ರಸ್ತೆಯಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಸಂಪಾಜೆ ಘಾಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.