ಮಂಗಳೂರು: ಅಧ್ಯಾಪಕರು, ವೈದ್ಯರು, ಸಿಬ್ಬಂದಿ ಸೇರಿದಂತೆ ಸಂಸ್ಥೆಯ ಶ್ರೇಯಸ್ಸಿಗಾಗಿ ಶ್ರಮಿಸಿದವರಿಗೆ ಸನ್ಮಾನ; ಹೊಸ ವೆಬ್‌ಸೈಟ್‌ಗೆ ಚಾಲನೆ, ಕಾಲೇಜು ಮ್ಯಾಗಝಿನ್, ಸಾಧನೆಗಳನ್ನು ಬಿಂಬಿಸುವ ಪುಸ್ತಕ ಬಿಡುಗಡೆ...
ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಬೆಳ್ಳಿಹಬ್ಬದ ಮುಕ್ತಾಯ ಸಮಾರಂಭದಲ್ಲಿ ಕಾಲೇಜು ಆರಂಭವಾದ ದಿನಗಳು ಮತ್ತು ಬೆಳೆದು ಬಂದ ಪರಿಯ ಬಣ್ಣನೆಯ ವೇಳೆ ನೆನಪಿನ ಅಲೆಗಳು ಎದ್ದರೆ, ಸನ್ಮಾನ, ಗೌರವದ ಸಂದರ್ಭದಲ್ಲಿ ಸಂಭ್ರಮದ ಹೊಳೆ ಹರಿಯಿತು.
ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ, 25 ವರ್ಷಕ್ಕಿಂತ ಹೆಚ್ಚು ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಅಧ್ಯಾಪಕರು, ನಿರ್ದೇಶಕರು, ಸಿಬ್ಬಂದಿಯನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸತ್ಯ ಸ್ವರೂಪ್ ದೇವಾ ಎಂಬ ಹಾಡಿಗೆ ಕಾಲೇಜು ವಿದ್ಯಾರ್ಥಿನಿಯರ ತಂಡ ಹೆಜ್ಜೆ ಹಾಕುವ ಮೂಲಕ ಆರಂಭಗೊಂಡ ಕಾರ್ಯಕ್ರಮ ಸಂಗೀತದ ರೋಮಾಂಚನದೊಂದಿಗೆ ಮುಕ್ತಾಯಗೊಂಡಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮಪ್ರಾಂತದ ಬಿಷಪ್ ಪೀಟರ್ ಪೌಲ್ ಸಲ್ಡಾನ ಮಾತನಾಡಿ ಬೆಳ್ಳಿಹಬ್ಬದ ಸಂಭ್ರಮದೊಂದಿಗೆ ಒಂದು ಹಂತ ಮುಗಿದಿದ್ದರೂ ಮುಂದಿನ ಹಾದಿಯಲ್ಲಿ ಯಶಸ್ಸು ಕಾಣುವ ಪ್ರಯತ್ನ ಈಗಲೇ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಫಾದರ್ ಮುಲ್ಲರ್ ಪರಿಗಣಿತ ವಿಶ್ವವಿದ್ಯಾಲಯ ಆಗಬೇಕೆಂಬುದು ದೊಡ್ಡ ಆಸೆ. ಅದರೊಂದಿಗೆ ದಂತ ವೈದ್ಯಕೀಯ ಕಾಲೇಜಿನ ಕಸನು ನನಸಾಗಬೇಕಾಗಿದೆ ಎಂದ ಅವರು ಸೇವಾ ಮನೋಭಾವ, ಪ್ರೀತಿಯ ಸ್ಪರ್ಶ, ನೈತಿಕ ಮೌಲ್ಯಗಳು, ಅರ್ಪಣಾ ಮನೋಭಾವದ ಸಿಬ್ಬಂದಿ ಮುಂತಾದವರು ಫಾದರ್ ಮುಲ್ಲರ್ ಸಂಸ್ಥೆಗಳ ವೈಶಿಷ್ಟ್ಯವಾಗಿದ್ದು ಒಟ್ಟಾರೆ ಅಧ್ಯಾತ್ಮದ ವಾತಾವರಣ ಇಲ್ಲಿದೆ ಎಂದರು.
ನಿವೃತ್ತ ಬಿಷಪ್ ಅಲೋಶಿಯಸ್ ಪೌಲ್ ಡಿಸೋಜ ಮಾತನಾಡಿ ಸಮಾಜಕ್ಕೆ, ವಿಶೇಷವಾಗಿ ಬಡವರಿಗಾಗಿ ಸೇವೆ ಸಲ್ಲಿಸುವುದೊಂದೇ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆರಂಭಗೊಳ್ಳುವಾಗ ಇದ್ದ ಗುರಿ ಎಂದರು.
ಕಾಲೇಜಿನ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಯುಕ್ತ ನಿರ್ದೇಶಕ ಪೌಸ್ತಿನ್ ಲೋಬೊ, ಅಸ್ಪತ್ರೆಯ ಆಡಳಿತಾಧಿಕಾರಿ ಫಾ. ಜೀವನ್, ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್ ಬಿ.ಮಿನೇಜಸ್, ಡೀನ್ ಆ್ಯಂಟನಿ ಸಿಲ್ವನ್ ಡಿ‘ಸೋಜ, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಕುಮಾರ್, ಫಾ. ಲೂಕಸ್ ಲೋಬೊ ಹಾಗೂ ಅಜಿತ್ ಮೆನೇಜಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.