ADVERTISEMENT

ಎಸ್‌ಕೆಡಿಆರ್‌ಡಿಪಿ ಗ್ರಾಮಾಭಿವೃದ್ಧಿಯ ಪ್ರಯೋಗ ಶಾಲೆ: ನಿರ್ಮಲಾ ಸೀತಾರಾಮನ್‌

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭಾಂಶ ವಿತರಣೆ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 5:59 IST
Last Updated 15 ನವೆಂಬರ್ 2024, 5:59 IST
ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್‌ ಮಾತನಾಡಿದರು. ಪ್ರತಾಪಸಿಂಹ ನಾಯಕ್‌, ಕ್ಯಾ.ಬ್ರಿಜೇಶ್‌ ಚೌಟ, ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಶಾಜಿ ಕೆ.ವಿ. ಹಾಗೂ ಹರೀಶ್ ಪೂಂಜ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್‌ ಮಾತನಾಡಿದರು. ಪ್ರತಾಪಸಿಂಹ ನಾಯಕ್‌, ಕ್ಯಾ.ಬ್ರಿಜೇಶ್‌ ಚೌಟ, ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಶಾಜಿ ಕೆ.ವಿ. ಹಾಗೂ ಹರೀಶ್ ಪೂಂಜ ಭಾಗವಹಿಸಿದ್ದರು   

ಉಜಿರೆ: ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು (ಎಸ್‌ಕೆಡಿಆರ್‌ಡಿಪಿ)  ಸರ್ಕಾರದ ಗ್ರಾಮಾಭಿವೃದ್ಧಿ ಯೋಜನೆಗಳ ಪ್ರಯೋಗಶಾಲೆ ಇದ್ದಂತೆ. ಇಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನವಾದ ಕಾರ್ಯಕ್ರಮಗಳ ಯಶಸ್ಸನ್ನು ಆಧರಿಸಿ ಅವುಗಳನ್ನು ರಾಷ್ಟ್ರಮಟ್ಟದಲ್ಲಿ ಸರ್ಕಾರದ‌ ನೀತಿಯಾಗಿ ಜಾರಿಗೊಳಿಸಲಾಗುತ್ತಿದೆ' ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಹೇಳಿದರು.

ಎಸ್‌ಕೆಡಿಆರ್‌ಡಿಪಿ– ಬಿ.ಸಿ. ಟ್ರಸ್ಟ್‌ ವತಿಯಿಂದ ಧರ್ಮಸ್ಥಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಿ ಅವರು ಮಾತನಾಡಿದರು.

'ಧರ್ಮಸ್ಥಳದ ಸಮೂಹ ಸಂಸ್ಥೆಗಳು ದಶಕಗಳಿಂದ ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ಸರ್ಕಾರದ ಜೊತೆ ಸಹಕರಿಸುತ್ತಿವೆ. ಗ್ರಾಮಿಣಾಭಿವೃದ್ಧಿಗಾಗಿ ಒಂದಲ್ಲ ಒಂದು ಚಟುವಟಿಕೆ ಹಮ್ಮಿಕೊಳ್ಳುತ್ತಿವೆ. ಸರ್ಕಾರದ ನೀತಿಯೂ ಇದನ್ನು ಗುರುತಿಸಿದೆ’ ಎಂದರು.

ADVERTISEMENT

'ಮಹಿಳೆಯರಲ್ಲಿಯೂ ಸಾಮರ್ಥ್ಯವಿದೆ. ಅವರೂ ಉತ್ಪನ್ನ ತಯಾರಿಸಬಲ್ಲರು, ಮೌಲ್ಯವರ್ಧನೆ ಮಾಡಿ ಲಾಭ ಗಳಿಸಬಲ್ಲರು, ಅವರೂ ಮಾರುಕಟ್ಟೆ ಸೃಷ್ಟಿಸಿ ಘನತೆಯಿಂದ ಬದುಕು ಕಟ್ಟಿಕೊಳ್ಳಬಲ್ಲರು ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ. ಗ್ರಾಮೀಣಾಭಿವೃದ್ಧಿ ಯೋಜನೆ ಪರಿಣಾಮಕಾರಿ‌ ಅನುಷ್ಠಾನದಿಂದಾಗಿಯೇ ‌‌‌ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವುದು ಸಾಧ್ಯವಾಗಿದೆ. ಜನರ ಸಬಲೀಕರಣವೇ ದೇಶದ ಬಡತನ‌ ನಿರ್ಮೂಲನೆಗೆ ಸಾಧನ. ಹಣ ಗಳಿಸುವ, ಸ್ವಂತ ನಿರ್ಧಾರ ತಳೆಯುವ ಅವಕಾಶಗಳನ್ನು ಇದು ಕಲ್ಪಿಸುತ್ತಿದೆ.‌ ಸರ್ಕಾರವು ಜನರ ತೆರಿಗೆ ದುಡ್ಡಿನಲ್ಲಿ ರೂಪಿಸಿರುವ ಡಿಜಿಟಲ್‌ ವೇದಿಕೆಗಳನ್ನು ಸ್ವಸಹಾಯ ಸಂಘಗಳೂ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಬಳಸುತ್ತಿವೆ' ಎಂದರು.

'ವಿದೇಶಿಯರ ಆಳ್ವಿಕೆಯ ಕಾಲದಲ್ಲಿ ಕಳೆದುಕೊಂಡ ವೈಭವವನ್ನು ನಾವು ಸ್ವಸಾಮರ್ಥ್ಯದಿಂದಲೇ ಮರಳಿ ಪಡೆಯಬೇಕಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರ ಹೊಮ್ಮಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸನ್ನು ಈಡೇರಿಸಬೇಕಿದೆ' ಎಂದರು.

ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ., 'ನಬಾರ್ಡ್ ಹಾಗೂ ಎಸ್‌ಕೆಡಿಆರ್‌ಡಿಪಿ ಒಂದೇ ವರ್ಷ ಜನ್ಮತಾಳಿದ ಅವಳಿ ಸಂಸ್ಥೆಗಳು. ಇವು ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ, ಸುಸ್ಥಿರ ಕೃಷಿ ಸಾಮಾಜಿಕ‌ ಸ್ವಾಸ್ಥ್ಯ, ಸಮುದಾಯ ನಿರ್ಮಾಣ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಜೊತೆಯಾಗಿ ಕೆಲಸ ಮಾಡಿವೆ. ಇದರ ಪರಿಣಾಮವಾಗಿ ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇ 53ಕ್ಕೆ‌ ಹೆಚ್ಚಿದೆ. ಜನರ ಜೀವನ‌ಮಟ್ಟ ಸುಧಾರಣೆಯಾಗಿ ತಲಾ ಆದಾಯವೂ ಈ ಭಾಗದಲ್ಲಿ ಹೆಚ್ಚಳವಾಗಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, 'ಪ್ರಧಾನಿ ನರೇಂದ್ರ ಮೋದಿ ಸ್ತ್ರೀ ಶಕ್ತಿಯನ್ನು ಜಾಗೃತಗೊಳಿಸಿದ್ದಾರೆ. ಎಲ್ಲ ಮನೆ ಮನೆಯಲ್ಲಿ ಮಹಿಳೆಯರೇ ನಾಯಕತ್ವ ವಹಿಸಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲೂ 55 ಲಕ್ಷ ಸದಸ್ಯರಲ್ಲಿ 34 ಲಕ್ಷ ಸದಸ್ಯರು ಮಹಿಳೆಯರು. ಅವರ ಪಾಲು ಶೇ 63ರಷ್ಟಿದೆ. ಎಲ್ಲ ಹೆಣ್ಣು ಮಕ್ಕಳೂ ಮನೆಯ ಆರ್ಥಿಕ ಸಚಿವರಾಗಿದ್ದಾರೆ. ನಿಜವಾದ ಅರ್ಥದಲ್ಲೇ ಗೃಹಲಕ್ಷ್ಮೀ ಆಗಿದ್ದಾರೆ' ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಭಾಗವಹಿಸಿದ್ದರು.

ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಸ್ವಾಗತಿಸಿದರು.
ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಧನ್ಯವಾದ ಸಮರ್ಪಿಸಿದರು.

ಎಸ್‌ಕೆಡಿಆರ್‌ಡಿಪಿ: ₹ 24500 ಕೋಟಿ ಸಾಲ ವಿತರಣೆ’  

‘₹24500 ಕೋಟಿ ಸಾಲಕ್ಕೆ ಎಸ್‌ಕೆಡಿಆರ್‌ಡಿಪಿ ಗ್ಯಾರಂಟಿ ನೀಡಿದೆ. ಸ್ವಸಹಾಯ ಸಂಘಗಳ ಸದಸ್ಯರು ಸರಿಯಾಗಿ ಮರುಪಾವತಿ ಮಾಡಿದ್ದರಿಂದ ಬ್ಯಾಂಕ್‌ಗಳು ಮತ್ತೆ  ₹ 1 ಸಾವಿರ ಕೋಟಿ ಸಾಲ ತೆಗದುಕೊಳ್ಳಿ ಎನ್ನುತ್ತಿವೆ. ಎಸ್‌ಕೆಡಿಆರ್‌ಡಿಪಿ ಮೂಲಕ ನೀಡುವ ಹಣ ಸರಿಯಾಗಿ ಬಳಕೆ ಆಗಿ ವಾಪಸ್‌ ಬರುತ್ತದೆ ಎಂಬ ದೈರ್ಯ ಅವರಿಗೆ' ಎಂದು ಅಧ್ಯಕ್ಷತೆ ವಹಿಸಿದ್ದ ವೀರೇಂದ್ರ ಹೆಗ್ಗಡೆ ಹೇಳಿದರು. ‘ಸರಿಯಾದ ವ್ಯವಹಾರ ನಡೆಸಿದರೆ ಮೊಸರನ್ನು ಕಡೆದು ಬೆಣ್ಣೆ ತಗೆವಂತೆ ಲಾಭಾಂಶ ಪಡೆಯಬಹುದು ಎಂಬುದನ್ನು ಸ್ವಸಹಾಯ ಗುಂಪುಗಳ ಮಹಿಳೆಯರು ತೋರಿಸಿ ಕೊಟ್ಟಿದ್ದಾರೆ. ಕೆಲ ಮಹಿಳೆಯರು ₹ 10 ಸಾವಿರದವರೆಗೂ ಲಾಭ ಪಡೆದಿದ್ದಾರೆ’ ಎಂದರು. ‘ಡಿಜಿಟಲೀಕರಣ ಹಳ್ಳಿಗಳಲ್ಲಿ ಸಾಧ್ಯವಿಲ್ಲ ಎನ್ನುತ್ತಿದ್ದರು. ಹಳ್ಳಿಯ ಹೆಣ್ಣು ಮಕ್ಕಳು ಕಂಪ್ಯೂಟರ್ ಕಲಿತಿದ್ದಾರೆ. ಮೊಬೈಲ್ ನಲ್ಲಿ ವಿವರ ಅಪ್ಲೋಡ್ ಮಾಡುತ್ತಾರೆ. ಅಕ್ಷರ ಕಲಿಯದವರೂ ನೋಟುಗಳನ್ನು ಸರಿಯಾಗಿ ಎಣಿಸುತ್ತಾರೆ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.