ಉಪ್ಪಿನಂಗಡಿ: ಅವಘಡಗಳ ಮಾಹಿತಿ ದೊರೆತಾಗ ಆಪತ್ಬಾಂಧವರಂತೆ ನೆರವಿಗೆ ಬರುವ ಎಸ್‌ಕೆಎಸ್‌ಎಸ್‌ಎಫ್ ತಂಡವು ನೆರೆ ಭೀತಿಯಲ್ಲಿದ್ದ ಇಲ್ಲಿನ ಹಲವು ಕುಟುಂಬಗಳನ್ನು ಸ್ಥಳಾಂತರಿಸಲು ನೆರವಾಗಿದೆ.
ಉಪ್ಪಿನಂಗಡಿ ವಲಯದಲ್ಲಿ ಸುಮಾರು 200 ರಷ್ಟು ಕಾರ್ಯಕರ್ತರನ್ನು ಹೊಂದಿರುವ ಎಸ್‌ಕೆಎಸ್‌ಎಸ್‌ಎಫ್‌ನ ಸುಮಾರು 100 ಕಾರ್ಯಕರ್ತರು ಹಳೆಗೇಟು ಪರಿಸರದ ಮನೆಗಳು ಜಲಾವೃತಗೊಂಡಾಗ ಮಂಗಳವಾರ ನೆರವಿಗೆ ಧಾವಿಸಿದರು. ಅಲ್ಲಿನ ಮನೆಗಳ ಸಾಮಾನು- ಸರಂಜಾಮುಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿದರು.
ಮನೆಗಳು ಜಲಾವೃತಗೊಂಡರೂ ಕೆಲವರು ಸುರಕ್ಷಿತ ಜಾಗಕ್ಕೆ ತೆರಳಿರಲಿಲ್ಲ. ರಾತ್ರಿ 7 ಗಂಟೆ ಸುಮಾರಿಗೆ ನೆರೆ ನೀರು ಜಾಸ್ತಿಯಾಗತೊಡಗಿದಾಗ ಮಠ, ಹಳೆಗೇಟು ಪ್ರದೇಶಕ್ಕೆ ದೋಣಿಯ ಮೂಲಕ ತೆರಳಿ ಅಲ್ಲಿದ್ದ ಸುಮಾರು 25 ಮಂದಿಯನ್ನು ಮನೆಯಿಂದ ಹೊರಗೆ ಕರೆ ತಂದಿದ್ದರು.
ಕೂಟೇಲುವಿನ ರಾಯಲ್ ಕಾಂಪ್ಲೆಕ್ಸ್ ಬಳಿಯ ಅಂಗಡಿಗಳಲ್ಲಿನ ಸಾಮಾನು- ಸರಂಜಾಮುಗಳನ್ನು ಸುರಕ್ಷಿತ ಜಾಗಕ್ಕೆ ತಲುಪಿಸಲು ನೆರವಾದರು. ಈ ತಂಡದಲ್ಲಿ ಒಂದು ಫೈಬರ್ ದೋಣಿ, ಜಾಕೆಟ್, ಟ್ಯೂಬ್, ಹಗ್ಗ, ರೋಪ್, ಮರ ಕಟ್ಟಿಂಗ್ ಮೆಷಿನ್ ಇದ್ದು, 10 ಜನ ನುರಿತ ಈಜುಗಾರರಿದ್ದಾರೆ. ಈ ತಂಡದ ಕಾರ್ಯವು ಮೆಚ್ಚುಗೆಗೆ ಪಾತ್ರವಾಗಿದೆ.
‘ಅಪಘಾತ, ಸಂಚಾರ ದಟ್ಟಣೆ, ಸ್ವಚ್ಛತಾ ಕಾರ್ಯ, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅಥವಾ ಯಾರಾದರೂ ನೀರಿಗೆ ಬಿದ್ದಾಗ ತಂಡದ ಕಾರ್ಯಕರ್ತರು ರಕ್ಷಣೆಗೆ ಧಾವಿಸುತ್ತಾರೆ. ತುರ್ತು ಸಂದರ್ಭದಲ್ಲಿ ಜನರು ನಮ್ಮನ್ನು ( 9591594401 / 9448461244) ಸಂಪರ್ಕಿಸಬಹುದು’ ಎಂದು ತಂಡದ ಕಾರ್ಯಾಧ್ಯಕ್ಷ ಇಸ್ಮಾಯಿಲ್ ತಂಙಳ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.