ADVERTISEMENT

ನೇತ್ರಾವತಿ ಸೇತುವೆ ಬಳಿ ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ದಾರ್ಥ್‌ ಕಾಣೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 3:00 IST
Last Updated 30 ಜುಲೈ 2019, 3:00 IST
   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ನಲ್ಲಿ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿರುವ ನೇತ್ರಾವತಿ ಸೇತುವೆ ಬಳಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್‌ ಅವರು ಸೋಮವಾರ ರಾತ್ರಿ ನಾಪತ್ತೆಯಾಗಿದ್ದಾರೆ. ಪೊಲೀಸರಿಂದತೀವ್ರ ಶೋಧ ನಡೆಸಲಾಗುತ್ತಿದೆ.

ಬೆಂಗಳೂರು ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದ ಸಿದ್ದಾರ್ಥ್‌ ನೇತ್ರಾವತಿ ಸೇತುವೆ ಮೇಲೆ ತೆರಳುತ್ತಿದ್ದಾಗಕಡೆಕಾರು ರಸ್ತೆಯಲ್ಲಿ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ, ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನಿಂದ ಇಳಿದು ಮುಂದಕ್ಕೆ ಹೋಗಿದ್ದಾರೆ. ಆ ಬಳಿಕ ನಾಪತ್ತೆ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾರಿನಿಂದ ಇಳಿದ ಸಿದ್ದಾರ್ಥ್‌ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿರಬಹುದು ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಸಿದ್ದಾರ್ಥ್‌ ಅವರು ಎಸ್‌.ಎಂ ಕೃಷ್ಣ ಅವರ ಪುತ್ರಿಯ ಪತಿ. ‘ಕಾಫಿ ಡೇ’ ಮಾಲೀಕರಾದ ಸಿದ್ದಾರ್ಥ್‌ ಉದ್ಯಮಿಯೂ ಹೌದು.

ADVERTISEMENT

ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ದೋಣಿಗಳ ಮೂಲಕ ಹುಡುಕಾಟ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್‌ ಪಾಟೀಲ್‌, ಸಿದ್ದಾರ್ಥ್‌ಸಕಲೇಶಪುರಕ್ಕೆ ತೆರಳುತ್ತಿರುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದರು. ಮಂಗಳೂರಿಗೆ ಬಂದಿರುವ ಅವರು, ನೇತ್ರಾವತಿ ನದಿ ಸೇತುವೆಯ ಬಳಿ ಕಾಣೆಯಾಗಿದ್ದಾರೆ. ಅವರ ಶೋಧಕ್ಕಾಗಿ ಶ್ವಾನದಳ ನೆರವು ಪಡೆಯಲಾಯಿತು. ಸೇತುವೆಯ ಮಧ್ಯಭಾಗದಲ್ಲಿ ಶ್ವಾನದಳ ಬಂದು ನಿಂತಿತು. ದೋಣಿ ಮತ್ತು ಸ್ಥಳೀಯ ಈಜುಗಾರರ ನೆರವನ್ನೂ ಪಡೆಯಲಾಗಿದೆ.ಸಿದ್ದಾರ್ಥ್‌ಕಡೆಯದಾಗಿ ಯಾರೊಂದಿಗೆ ಮಾತನಾಡಿದರು, ಯಾರನ್ನು ಸಂಪರ್ಕಿಸಿದ್ದರು ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.