ADVERTISEMENT

ಮಂಜು ಮುಸುಕಿದ ಚಾರ್ಮಾಡಿ ಘಾಟಿ: ಸೌಂದರ್ಯ ಆಸ್ವಾದಿಸಿದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 24 ಮೇ 2024, 15:15 IST
Last Updated 24 ಮೇ 2024, 15:15 IST
ಚಾರ್ಮಾಡಿ ಘಾಟಿ ಪ್ರದೇಶ ಮಂಜಿನಿಂದ ಆವೃತವಾಗಿರುವುದು
ಚಾರ್ಮಾಡಿ ಘಾಟಿ ಪ್ರದೇಶ ಮಂಜಿನಿಂದ ಆವೃತವಾಗಿರುವುದು   

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ ಇಡೀ ದಿನ ಮಂಜಿನ ವಾತಾವರಣ ಕಂಡುಬಂತು. ಇದರಿಂದ ತಂಪು ಆವರಿಸಿತ್ತಾದರೂ ಪ್ರಯಾಣಕ್ಕೆ ತೊಂದರೆಯಾಯಿತು.

ಘಾಟಿಯ 25 ಕಿಲೊಮೀಟರ್‌ ಪೂರ್ತಿ ಮಂಜು ಮುಸುಕಿತ್ತು. ಹೀಗಾಗಿ ಹೆಡ್‌ಲೈಟ್ ಬೆಳಗಿಸಿ ವಾಹನ ಚಲಾಯಿಸುವುದು ಅನಿವಾರ್ಯವಾಯಿತು. ಬೆಳಿಗ್ಗಿನಿಂದಲೇ ಭಾರಿ ಮಂಜು ಇತ್ತು. ಸಮಯ ಕಳೆದಂತೆ ಹೆಚ್ಚುತ್ತಾ ಹೋಗಿ ಸಂಜೆ ರಸ್ತೆ ಕಾಣದಷ್ಟು ದಟ್ಟವಾಯಿತು.

ಒಂದು ವಾರದಿಂದ ಘಾಟಿ ಪರಿಸರದಲ್ಲಿ ಭಾರಿ ಮಳೆಯಾಗುತ್ತಿದ್ದು ಶುಕ್ರವಾರ ಕೂಡ ತುಂತುರು ಮಳೆಯಾಗಿದೆ. ಮಂಜಿನ ವಾತಾವರಣ ಕಂಡುಬಂದ ಕಾರಣ ಕಲ್ಲು, ಬಂಡೆ, ಕಣಿವೆ ಪ್ರದೇಶಗಳು ಮುದ ನೀಡಿದವು. ಕೆಲವು ತೊರೆಗಳಲ್ಲಿ ನೀರಿನ ಹರಿವು ಆರಂಭವಾಗಿದೆ. ಪ್ರಯಾಣಿಕರು ವಾಹನ ನಿಲ್ಲಿಸಿ ಘಾಟಿಯ ಸೌಂದರ್ಯ ಆಸ್ವಾದಿಸಿದರು.

ADVERTISEMENT

ಪರದಾಡಿದ ವಾಹನ ಸವಾರರು

ಹೆಡ್‌ಲೈಟ್ ಬೆಳಗಿಸಿ ವಾಹನ ಓಡಿಸಿದರು ಘಾಟಿ ರಸ್ತೆಯ ಇಕ್ಕೆಲಗಳು ಕಾಣದಷ್ಟು ಮಂಜು ದಟ್ಟವಾಗಿತ್ತು. ಚಿಕ್ಕಮಗಳೂರು ವಿಭಾಗದಲ್ಲಿ ಘಾಟಿಯ ತಡೆಗೋಡೆ ಕಟ್ಟುವ ಕಾಮಗಾರಿ ಪೂರ್ಣಗೊಳ್ಳದೆ ಕೆಲವು ಅಪಾಯಕಾರಿ ಜಾಗಗಳಿವೆ. ಈ ಪರಿಸರದಲ್ಲಿ ಅತಿಹೆಚ್ಚಿನ ಮಂಜು ಕವಿದಿತ್ತು. ಇಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಕಂಡುಬಂತು. ದಕ್ಷಿಣ ಕನ್ನಡದ ಘಾಟಿ ವಿಭಾಗದ ವ್ಯಾಪ್ತಿಯಲ್ಲಿ ಮಳೆಗಾಲದ ನಿರ್ವಹಣೆ ಕಾಮಗಾರಿ ಆರಂಭವಾಗಿದ್ದು ಚರಂಡಿ ಹೂಳೆತ್ತುವ ಕೆಲಸ ನಡೆಯುತ್ತಿದೆ.

Quote - ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ. ಸಂಪರ್ಕ ರಸ್ತೆ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿ ಅಗೆದು ಹಾಕಿದ ಜಾಗಗಳಲ್ಲಿ ತಕ್ಷಣ ಡಾಮರೀಕರಣ ನಡೆಯಲಿದೆ. –ಶಿವಪ್ರಸಾದ ಅಜಿಲ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.