ಪುತ್ತೂರು: ತುಳುವರಿಗೆ ಹಬ್ಬಗಳ ಕೊರತೆಯಿಲ್ಲ. ಅದರಲ್ಲೂ ಗ್ರಾಮೀಣ ಭಾಗದ ರೈತ ವರ್ಗ ತಮ್ಮ ಭೂಮಿ ತಾಯಿಯನ್ನು ಸ್ತುತಿಸುವ ಕಾರ್ಯಗಳನ್ನು ಯಾವತ್ತೂ ಮರೆತಿಲ್ಲ. ಸೋಣ (ಶ್ರಾವಣ) ತಿಂಗಳ ಆರಂಭದಲ್ಲಿಯೇ ವ್ರತಾಚರಣೆಯ ‘ಸೋಣ ಶನಿವಾರ’ ಹಳ್ಳಿ ಮಂದಿಯ ಸಂಭ್ರಮದ ಹಬ್ಬ. ಈ ಹಿನ್ನೆಲೆಯಲ್ಲಿ ರೈತವರ್ಗ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ.
ಬೆಳಿಗ್ಗೆ ಯಾವುದೇ ಆಹಾರ ತೆಗೆದು ಕೊಳ್ಳದೆ ವ್ರತಾಚರಣೆ ಮಾಡುವ ‘ಸೋಣ ಶನಿವಾರ’ ಆರೋಗ್ಯದ ದೃಷ್ಟಿ ಯಿಂದಲೂ ಅತ್ಯಂತ ಹಿತಕಾರಿ. ಒಂದು ಹೊತ್ತು ಉಪವಾಸ ಮಾಡುವ ಮೂಲಕ ತಮ್ಮ ದೇಹದ ಕೆಲ ಸಮಸ್ಯೆ ಪರಿಹಾರ ಕಂಡುಕೊಳ್ಳುವುದು ತುಳುವ ಜನತೆಗೆ ಹಿರಿಯರು ಕಲಿಸಿದ ಸಂಪ್ರದಾಯ ಪಾಠ. ಈ ಹಿನ್ನೆಲೆಯಲ್ಲಿ ಶನಿವಾರ ಹಳ್ಳಿ ಮಂದಿ ಈ ವ್ರತಾಚರಣೆ ನಡೆಸುತ್ತಾರೆ.
ಮಧ್ಯಾಹ್ನ ಹಳ್ಳಿ ಸೊಗಡಿನ ಊಟ ಈ ಹಬ್ಬದ ವಿಶೇಷತೆ. ಮುಳ್ಳು ಸೌತೆಯ ಚಲ್ಲಿ, ಕೆಸುವಿನ ಬೇರು ಮತ್ತು ಹಲಸಿನ ಬೀಜದ ಪಲ್ಯ, ಕೆಸುವಿ ದಂಡಿನ ಸಾರು ಹೀಗೆ ಪಕ್ಕಾ ಹಳ್ಳಿ ಪದ್ಧತಿಯ ಆಹಾರ ಸೇವನೆ ರೂಢಿಯಲ್ಲಿದೆ. ಕೆಲವು ಮಂದಿ ದೇವಳಗಳಲ್ಲಿ ನಡೆಯುವ ಸಾರ್ವಜನಿಕ ‘ಸೋಣ ಶನಿವಾರ’ ಆಚರಣೆಯಲ್ಲಿ ನಡೆಯುವ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ದೇವಳಗಳಲ್ಲಿ ‘ಸೋಣ ಶನಿವಾರ’ ಆಚರಣೆ ನಡೆಯುತ್ತಿಲ್ಲ.
ಕೆಲವು ಕಡೆಗಳಲ್ಲಿ ಊಟಕ್ಕೂ ಮೊದಲು ತಮ್ಮ ಮನೆ ದೇವರಿಗೆ ‘ಮುಡಿಪು’ ತೆಗೆದಿಡುವ ಸಂಪ್ರದಾಯವಿದೆ. ಮನೆ ಮಂದಿ ಎಲ್ಲಾ ಸ್ನಾನ ಮಾಡಿ ಶುಚೀರ್ಭೂತರಾಗಿ ಮನೆಯಲ್ಲಿ ನಂದಾದೀಪದ ಮುಂದೆ ಬಾಳೆ ಎಲೆಯ ಮೇಲೆ ತಮ್ಮ ಹಣವನ್ನು ಇಡುವುದು. ಹಾಗೆ ಇಡುವ ಮೊದಲು ತುಳಸಿ ಎಲೆಯೊಂದಿಗೆ ಚಿಲ್ಲರೆ ಹಣವನ್ನು ಬಾವಿಯಿಂದ ತಂದ ನೀರಲ್ಲಿ ಮುಳುಗಿಸಿ ತಮ್ಮ ತಲೆಯ ಸುತ್ತ ಒಂದು ಸುತ್ತು ತಂದು ‘ಮುಡಿಪು’ ತೆಗೆದಿಡುವುದು ಹಳ್ಳಿಗರಲ್ಲಿ ನಡೆದು ಬಂದ ಕ್ರಮ. ಕೆಲ ಭಾಗದಲ್ಲಿ ಕುಟುಂಬದ ತರವಾಡು ಮನೆಗಳಲ್ಲಿ ಈ ಕ್ರಮ ನಡೆಸಲಾಗುತ್ತದೆ.
ಒಂದೇ ಬರಿಗೆ ಸೇರಿದ ಹಲವಾರು ಮನೆಗಳು ಒಟ್ಟು ಸೇರಿ ತಮ್ಮ ತರವಾಡು ಮನೆಯಲ್ಲಿ ಮುಡಿಪು ತೆಗೆದಿಡುವ ಕಾರ್ಯ ನಡೆಸಲಾಗುತ್ತದೆ. ಇನ್ನು ಕೆಲ ಭಾಗದಲ್ಲಿ ತಮ್ಮ ತಮ್ಮ ಮನೆಗಳಲ್ಲಿಯೇ ಮುಡಿಪು ತೆಗೆದಿಡುವ ಕಾರ್ಯ ಮಾಡಲಾಗುತ್ತದೆ.
ಸಾಮಾನ್ಯವಾಗಿ ‘ಸೋಣ ಶನಿವಾರ’ ರಾತ್ರಿ ಊಟ ಮಾಡುವ ಕ್ರಮ ಇಲ್ಲ. ರಾತ್ರಿ ಊಟದ ಬದಲಿಗೆ ಅಕ್ಕಿಯಿಂದ ಮಾಡಿದ ದೋಸೆ, ರೊಟ್ಟಿ, ಶ್ಯಾವಿಗೆಯಂತಹ ತಿಂಡಿ ಮಾಡಿ ತಿನ್ನುವುದು ಕೆಲ ಭಾಗದಲ್ಲಿದ್ದರೆ, ಇನ್ನು ಕೆಲ ಭಾಗಗಳಲ್ಲಿ ರಾತ್ರಿ ಸೀಯಾಳ, ಬಾಳೆಹಣ್ಣು ಹಾಗೂ ಹಾಲು ಸೇವಿಸುವ ಪದ್ಧತಿಯಿದೆ. ಇನ್ನು ಕೆಲವೊಂದು ಕಡೆಗಳಲ್ಲಿ ಔತಣ ಮಾಡುವ ಕ್ರಮವೂ ಜಾರಿಯಲ್ಲಿದೆ.
ಹಳ್ಳಿಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ‘ಸೋಣ ಶನಿವಾರ’ ಆಚರಣೆ ದೇಹ ಮತ್ತು ಮನಸ್ಸುಗಳಿಗೆ ಮುದ ನೀಡುವ ಆಚರಣೆಯಾಗಿ ಬೆಳೆದಿದೆ. ಆಟಿಯ ಕಷ್ಟದ ದಿನಗಳನ್ನು ಕಳೆದು ಬರುವ ಸೋಣ ತಿಂಗಳಲ್ಲಿ ಭಾವನಾತ್ಮಕವಾಗಿ ತಮ್ಮನ್ನು ಉಳಿಸಿಕೊಳ್ಳುವ ರೈತ ಮಂದಿ ವರ್ಷದ ಶುಭ ಸೂಚಕವಾಗಿ ಸೋಣ ಶನಿವಾರ ಆಚರಣೆ ಮಾಡುತ್ತಾರೆ. ಇದು ಹಳ್ಳಿಪ್ರದೇಶಗಳಲ್ಲಿ ಹಿಂದಿನಿಂದಲೂ ನಡೆದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.