ADVERTISEMENT

ಸೌಜನ್ಯ ಪ್ರಕರಣ | ಸಾಕ್ಷ್ಯ ನಾಶ– ವೈದ್ಯರ, ಪೊಲೀಸ್‌ ಅಧಿಕಾರಿಗಳ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 16:59 IST
Last Updated 20 ಸೆಪ್ಟೆಂಬರ್ 2023, 16:59 IST
<div class="paragraphs"><p>ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೌಜನ್ಯಾ ‌ತಾಯಿ&nbsp;ಕುಸುಮಾವತಿ ಅವರು ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸೌಜನ್ಯಾ ಮಾವ ವಿಠಲ ಗೌಡ ಇದ್ದಾರೆ – ಪ್ರಜಾವಾಣಿ ಚಿತ್ರ</p></div>

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೌಜನ್ಯಾ ‌ತಾಯಿ ಕುಸುಮಾವತಿ ಅವರು ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸೌಜನ್ಯಾ ಮಾವ ವಿಠಲ ಗೌಡ ಇದ್ದಾರೆ – ಪ್ರಜಾವಾಣಿ ಚಿತ್ರ

   

ಮಂಗಳೂರು: ‘ನನ್ನ ಮಗಳು ಸೌಜನ್ಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ನಡೆಸಿದ ಪ್ರಕರಣವನ್ನು ನ್ಯಾಯಾಂಗದ ಸುಪರ್ದಿಯಲ್ಲಿ ಮರು ತನಿಖೆ ನಡೆಸಬೇಕು. ನೈಜ ಆರೋಪಿಗಳ ಪತ್ತೆಗೆ ಅಗತ್ಯ ಕಾನೂನುಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಸೌಜನ್ಯಾಳ ತಾಯಿ ಕುಸುಮಾವತಿ ಅವರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಅವರಿಗೆ ಬುಧವಾರ ಇಲ್ಲಿ ಮನವಿ ಸಲ್ಲಿಸಿದರು.

‘ಈ ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡುವ ಮೂಲಕ ನೈಜ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್‌ ಅಧಿಕಾರಿಗಳು ಹಾಗೂ ವೈದ್ಯರು ಸಹಕರಿಸಿದ್ದಾರೆ. ಅವರ ವಿರುದ್ಧವೂ ತನಿಖೆ ನಡೆಸಬೇಕು. ಆರೋಪಿಗಳ ಹೆಸರನ್ನು ನಮೂದಿಸಿ  ಹಿಂದೆಯೇ ದೂರು ನೀಡಿದ್ದರೂ ಅವರನ್ನು ತನಿಖೆಗೆ ಒಳಪಡಿಸಿಲ್ಲ‘ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಅಗತ್ಯ ಸೌಲಭ್ಯಗಳಿಲ್ಲದ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನೂ ಪ್ರಭಾವಿಗಳ ಒತ್ತಡದ ಮೇರೆಗೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಒತ್ತಡದಿಂದಾಗಿ ಸಾಕ್ಷ್ಯ ನಾಶ ಮಾಡಿದ್ದಾರೆ. ಶವದ ಮೈ ಮೇಲೆಲ್ಲಾ ಕೊಲೆ ಪಾತಕಿಗಳು ಕಚ್ಚಿದ ಗಾಯಗಳಿದ್ದರೂ ವೈದ್ಯರು ಉದ್ದೇಶಪೂರ್ವಕವಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅದನ್ನು ನಮೂದಿಸಿರಲಿಲ್ಲ. ಮೃತದೇಹದ ಗುಪ್ತಾಂಗದಿಂದ ಸಂಗ್ರಹಿಸಿರುವ ದ್ರವ ಅತ್ಯಾಚಾರ ನಡೆಸಿದ ಆರೋಪಿಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಲು ಅತೀ ಅಗತ್ಯವಿದ್ದರೂ ವೈದ್ಯರು ಉದ್ದೇಶ ಪೂರ್ವಕವಾಗಿ ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸದಂತೆ ನೋಡಿಕೊಂಡು ನೈಜ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿರುತ್ತಾರೆ’ ಎಂದೂ ಅವರು ಆರೋಪಿಸಿದ್ದಾರೆ.

ಕಿರುಕುಳ ಆರೋಪ: ‘ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆ ಹಚ್ಚುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದಿವೆ. ಹೊರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ಹೆಸರಿಸಿ ಉಜಿರೆಯ ವ್ಯಕ್ತಿಯೊಬ್ಬರು ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಬಂಟ್ವಾಳದ ಈಗಿನ ಡಿವೈಎಸ್‌ಪಿ ಅವರು ಹೋರಾಟಗಾರರನ್ನು ಅನಗತ್ಯವಾಗಿ ಠಾಣೆಗೆ ಕರೆಯಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಕುಸುಮಾವತಿ ಆರೋಪಿಸಿದ್ದಾರೆ.

’ಈ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಪೊಲೀಸ್‌ ಇಲಾಖೆಯಿಂದ ಯಾವುದೇ ಕಿರುಕುಳ ಆಗದಂತೆ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಇನ್ನೊಂದು ಮನವಿ ಸಲ್ಲಿಸಿದ್ದಾರೆ.

‘ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರೊಂದಿಗೆ ಮಾತನಾಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.