ಬೆಳ್ತಂಗಡಿ: ‘ಸೌಜನ್ಯಾ ಪ್ರಕರಣದ ಬಗ್ಗೆ ಹೈಕೋರ್ಟ್ ತನ್ನ ತೀರ್ಪು ನೀಡಿದ್ದು, ಸಂತೋಷ್ ರಾವ್ ನಿರಪರಾಧಿ ಎಂದು ಹೋರಾಟಗಾರರು ಹೇಳುತ್ತಾ ಬಂದಿದ್ದನ್ನು ಮತ್ತೆ ಕೋರ್ಟ್ ಎತ್ತಿ ಹಿಡಿದಿದೆ. ಇದು ಸಂತೋಷಕರವಾದ ತೀರ್ಪು. ಪ್ರಕರಣದ ಮರು ತನಿಖೆ ಆಗಬೇಕೆಂದು ಸೌಜನ್ಯಾ ತಂದೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿರುವುದು ನಿರಾಶಾದಾಯಕ ಹಾಗೂ ದುಃಖದಾಯಕವಾಗಿದೆ’ ಎಂದು ಸಿಪಿಎಂ ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.
‘ತಪ್ಪು ತನಿಖೆಯ ಮೂಲಕ, ಸಾಕ್ಷ್ಯ ನಾಶದ ಮೂಲಕ ನೀಡಿದ ತನಿಖಾ ವರದಿಯ ಆಧಾರದಲ್ಲಿ ನಿರಪರಾಧಿಯೊಬ್ಬನನ್ನು ಅಪರಾಧಿ ಎಂದು ಪರಿಗಣಿಸಲು ನ್ಯಾಯಾಂಗ ವ್ಯವಸ್ಥೆ ಬಿಡುವುದಿಲ್ಲ ಎಂಬುದು ನ್ಯಾಯಾಂಗದ ಗೆಲುವು. ನಾವು ಆರಂಭದಲ್ಲಿ ಹೇಳಿದ್ದಕ್ಕೆ ಈಗಲೂ ಬದ್ದರಾಗಿದ್ದೇವೆ. ಎಸ್‌ಐಟಿ ಮೂಲಕ ಮರು ತನಿಖೆ ಮಾಡಿಸಲು ಸಾಧ್ಯವಾಗಬೇಕು. ಇದೊಂದೇ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಇರುವ ಏಕೈಕ ದಾರಿ. ಮರು ತನಿಖೆಗೆ ಸರ್ಕಾರ ಮನಸ್ಸು ಮಾಡಿದ್ದರೆ ನ್ಯಾಯ ಸಿಗುತ್ತಿತ್ತು. ಸರಿಯಾದ ತನಿಖೆಗೆ ಸಿದ್ಧವಿಲ್ಲದ ಶಾಸಕಾಂಗ ಮತ್ತು ಕಾರ್ಯಾಂಗದ ನಿರ್ಲಕ್ಷ್ಯವೇ ನ್ಯಾಯ ಸಿಗದಿರುವುದಕ್ಕೆ ಕಾರಣವಾಗಿರುವಾಗ ನ್ಯಾಯಾಲಯವನ್ನು ನಾವು ದೂಷಿಸಲು ಸಾಧ್ಯವಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.