ADVERTISEMENT

ಅಷ್ಟದಿಕ್ಕಿನಲಿ ಶ್ರೀಕೃಷ್ಣ ಲೀಲಾವಳಿ

ಮೊಸರು ಕುಡಿಕೆ ಪ್ರಧಾನ ಆಕರ್ಷಣೆ: ಹುಲಿ ವೇಷ, ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗಿನಲ್ಲಿ ಅಷ್ಟಮಿ ಸಂಭ್ರಮ

ವಿಕ್ರಂ ಕಾಂತಿಕೆರೆ
Published 26 ಆಗಸ್ಟ್ 2024, 7:14 IST
Last Updated 26 ಆಗಸ್ಟ್ 2024, 7:14 IST
ಕೊಟ್ಟಾರದಲ್ಲಿ ಕಳೆದ ವರ್ಷ ನಡೆದ ಶ್ರೀಕೃಷ್ಣ ಜಯಂತಿಯಲ್ಲಿ ಮೊಸರು ಕುಡಿಕೆ ಒಡೆಯಲು ಸಿದ್ಧರಾದ ಸ್ಪರ್ಧಿ
ಕೊಟ್ಟಾರದಲ್ಲಿ ಕಳೆದ ವರ್ಷ ನಡೆದ ಶ್ರೀಕೃಷ್ಣ ಜಯಂತಿಯಲ್ಲಿ ಮೊಸರು ಕುಡಿಕೆ ಒಡೆಯಲು ಸಿದ್ಧರಾದ ಸ್ಪರ್ಧಿ   

ಮಂಗಳೂರು: ಲೀಲೆಗಳ ಮೂಲಕವೇ ಜಗದ ಮೇಲೆ ಮಾಯಾ ಬಲೆ ಹೆಣೆದನು  ಶ್ರೀಕೃಷ್ಣ. ಜಟಿಲ ಸಮಸ್ಯೆಗಳನ್ನು ಸಹ ವಿನೋದಾವಳಿಗಳಿಂದ ಸುಲಭವಾಗಿ ಬಗೆಹರಿಸುವ ಸಾಮರ್ಥ್ಯದ ಈ ಪರಮಾತ್ಮ, ಸಕಾರಾತ್ಮಕ ದ್ವಂದ್ವ ಸ್ವಭಾವದ ಮೂಲಕವೂ ವಿಶಿಷ್ಟ ಎನಿಸಿಕೊಂಡಿರುವ ನಿಪುಣ. ಶೌರ್ಯ– ಧೈರ್ಯವಂತ, ಆಡಳಿತಗಾರ, ದುಷ್ಟ ಸಂಹಾರಕ, ಗೋರಕ್ಷಕ, ಪ್ರಕೃತಿ ಸಂರಕ್ಷಕ ಎಂಬಿತ್ಯಾದಿ ವಿಶೇಷಣಗಳಿರುವ ಕೃಷ್ಣನ ಜೀವನಸೌಂದರ್ಯದ ಪ್ರಜ್ಞೆಯೂ ಚಿಂತನೆಯ ಒರೆಗೆ ಹಚ್ಚಬಹುದಾದ‌ ವಿಷಯ. ಬೆಣ್ಣೆಪ್ರಿಯ ಕೃಷ್ಣನ ಆರಾಧಾನೆಯಲ್ಲಿ ನಾಡು ಈಗ ಪುಳಕಗೊಂಡಿದೆ. ಕೃಷ್ಣನ ವೇಷತೊಟ್ಟ ಮಕ್ಕಳ ಮುದ್ದುಮುಖದ ಮುಗ್ಧತನ, ಮೊಸರು ಕುಡಿಕೆ ಒಡೆಯುವ ಯುವಕರ ಉತ್ಸಾಹ, ಬೆಣ್ಣೆಕಳ್ಳ, ಸೀರೆ ಕಳ್ಳ ಕೃಷ್ಣನ ವೇಷದಲ್ಲಿ ಮಿನುಗುವ ಬಾಲಕರ ಕಳ್ಳನೋಟ, ರಾಧೆಯ ಪೋಷಾಕಿನಲ್ಲಿ ಬೆಳಗುವ ಯುವತಿಯರ ವಯ್ಯಾರದಲ್ಲಿ ದ್ವಾಪರ ಯುಗ ಮರುಸೃಷ್ಟಿ ಆಗುತ್ತಿದೆ. ದಶದಿಕ್ಕಿನಲ್ಲೂ ಕೃಷ್ಣನ ಲೀಲಾವಳಿ ಸೊಗಯಿಸುತಿದೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷ್ಣಾಷ್ಟಮಿ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ಕೃಷ್ಣನ ವೇಷ ಸ್ಪರ್ಧೆ, ಸಾಂಸ್ಕೃತಿಕ– ಕ್ರೀಡಾ ಕಾರ್ಯಕ್ರಮಗಳು ಸಾರ್ವಜನಿಕ ಶ್ರೀಕೃಷ್ಣಾಷ್ಟಮಿಯ ಪ್ರಮುಖ ಆಕರ್ಷಣೆಯಾಗಿದ್ದರೆ ಹಬ್ಬದ ಆಚರಣೆಗಳಿಗೆ ರಂಗು ತುಂಬುವುದು ಮೊಸರು ಕುಡಿಕೆ. ಜಿಲ್ಲೆಯ ಕೆಲವು ಕಡೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗೆ ವರ್ಷಗಳ ಇತಿಹಾಸವಿದೆ. ಶತಮಾನ ದಾಟಿದ ಮೊಸರು ಕುಡಿಕೆ ಆಯೋಜನಾ ಸಮಿತಿಗಳೂ ಇವೆ. ಜನ್ಮಾಷ್ಟಮಿ ಆಚರಣೆ ಕಾಲ ಕಳೆದಂತೆಲ್ಲ ಬದಲಾವಣೆಯ ಹಾದಿಯಲ್ಲಿ ಸಾಗಿದ ಜೊತೆಗೆ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ ಬದ್ಧತೆಯ ನಿದರ್ಶನಗಳೂ ಇವೆ.

ಶತಕ ಮೀರಿದ ಸಂಭ್ರಮ:

ಮಂಗಳೂರು ನಗರದ ಮಧ್ಯಭಾಗದಲ್ಲಿರುವ ಅತ್ತಾವರ ಕಟ್ಟೆಯಲ್ಲಿ ನಡೆಯುವ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವಕ್ಕೆ ಶತಮಾನದ ಹಿನ್ನೆಲೆ ಇದೆ. ಬಂಡಿ ನೇಮಕ್ಕೆ ಹೆಸರಾಗಿರುವ ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ಆರಂಭಗೊಂಡ ಕಾರ್ಯಕ್ರಮಗಳಿಗೆ ಈಗ 115ನೇ ವರ್ಷ. ಇಲ್ಲಿ ಸಾರ್ವಜನಿಕ ಆಚರಣೆ ಆರಂಭಗೊಂಡು ನಾಲ್ಕು ದಶಕಗಳು ಆಗಿವೆ ಎನ್ನುತ್ತಾರೆ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿಯ ಕಾರ್ಯದರ್ಶಿ ಶರತ್ ಕುಮಾರ್. 

ADVERTISEMENT

‘ನಂದಿಗುಡ್ಡ ವೃತ್ತದಿಂದ ಬರುವ ಶೋಭಾಯಾತ್ರೆ, ಸ್ತಬ್ಧಚಿತ್ರ, ಹುಲಿವೇಷ ಇತ್ಯಾದಿ ಇಲ್ಲಿನ ಪ್ರಮುಖ ಆಕರ್ಷಣೆ. ಈ ಬಾರಿ ಆರು ಹುಲಿವೇಷಗಳು ಮತ್ತು 4 ಸ್ತಬ್ಧಚಿತ್ರಗಳು ಸಿದ್ಧವಾಗಿವೆ. ಪೂರ್ವಿಕರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

ಕೊಟ್ಟಾರದಲ್ಲಿ ಜಂಟಿ ಆಚರಣೆ 

ದುರಭ್ಯಾಸ ಇಲ್ಲದಾಗಿಸಿ ಕೃಷ್ಣನ ಹೆಸರಿನಲ್ಲಿ ಒಳ್ಳೆಯ ಕೆಲಸಗಳಿಗೆ ಪ್ರೇರಣೆಯಾಗಲು ನಾಲ್ವರು ಸಮಾನಮನಸ್ಕರು ಸೇರಿಕೊಂಡು ಆರಂಭಿಸಿದ ಕೊಟ್ಟಾರ ಶ್ರೀ ಜ್ಞಾನೋದಯ ಭಜನಾಮಂದಿರದಲ್ಲಿ ನಡೆಯುವ ಅಷ್ಟಮಿ ಕಾರ್ಯಕ್ರಮಗಳಿಗೆ 80 ವರ್ಷಗಳ ಹಿನ್ನೆಲೆ ಇದೆ.

‘ಒಂದಾಣೆ ಬಾಡಿಗೆಯ ಕಟ್ಟಡದಲ್ಲಿದ್ದ ಭಜನಾ ಮಂದಿರ ಸ್ವಂತ ಜಾಗಕ್ಕೆ ಸ್ಥಳಾಂತರಗೊಂಡ ನಂತರ ಮೂರು ಬಾರಿ ನವೀಕರಣಗೊಂಡಿದೆ. ಕಟ್ಟಡ ಮತ್ತು ಕಾಲ ಬದಲಾದರೂ ಇಲ್ಲಿನ ಆಚರಣೆಯಲ್ಲಿ ಬದಲಾವಣೆ ಆಗಲಿಲ್ಲ. ಅಶೋಕನಗರದ ಹಿಂದೂ ಧಾರ್ಮಿಕ ಸೇವಾಸಂಘ ಜೊತೆಗೂಡಿದ ನಂತರ ಮೊಸರು ಕುಡಿಕೆ ಉತ್ಸವ ಹೆಚ್ಚು ವಿಜೃಂಭಿಸುತ್ತಿದೆ. ಅಶೋಕನಗರದಿಂದ ದೇವರ ವಿಗ್ರಹದ ಮೆರವಣಿಗೆ ಮೊಸರು ಕುಡಿಕೆಯ ಸಂಭ್ರಮ ಹೆಚ್ಚಿಸುತ್ತದೆ’ ಎಂದು ಭಜನಾಮಂದಿರದ ಅಧ್ಯಕ್ಷ ಶೇಖರ್ ಶೆಟ್ಟಿ ಸಂಕೇಶ ತಿಳಿಸಿದರು.

ಮನೆಗಳ ಮಧ್ಯದಲ್ಲಿ ಹಬ್ಬ

ಜೆಪ್ಪು ಜನಾರ್ದನನಗರ ಭಜನಾಮಂದಿರದಲ್ಲಿ 1950ರಿಂದ ಕೃಷ್ಣಾಷ್ಟಮಿ ಆಚರಣೆ ನಡೆಯುತ್ತಿದೆ. ಸುತ್ತ ಮನೆಗಳೇ ಇರುವ ಈ ಪ್ರದೇಶದಲ್ಲಿ ಜನಾರ್ದನ ಸ್ಪೋರ್ಟ್ಸ್‌ ಕ್ಲಬ್‌ ಆರಂಭಗೊಂಡ ನಂತರ ಮೊಸರು ಕುಡಿಕೆಯೊಂದಿಗೆ ಹಬ್ಬದ ಆಚರಣೆಯಲ್ಲಿ ಹೊಸತನ ಮೂಡಿತು. ಈಚೆಗೆ ಮೂರು ವರ್ಷಗಳಿಂದ ಹುಲಿವೇಷದ ರಂಗು ಕೂಡ ತುಂಬಿದೆ. ತಡರಾತ್ರಿ ವರೆಗೂ ಪೂಜೆ–ಪುನಸ್ಕಾರ ನಡೆಯುವುದರಿಂದ ಊರಿಡೀ ಸಂಭ್ರಮಿಸುತ್ತದೆ ಎಂದು ಮಂದಿರದ ಅಧ್ಯಕ್ಷ ಜೆ. ನವೀನ್ ಶೆಟ್ಟಿ ತಿಳಿಸಿದರು.

ಕದ್ರಿಯಲ್ಲಿ ಮಹಾಸಂಭ್ರಮ

ಕದ್ರಿ ಭಾಗದಲ್ಲಿ ಕೃಷ್ಣಾಷ್ಟಮಿ ಸಂದರ್ಭ ಮಹಾಸಂಭ್ರಮಕ್ಕೆ ಕಾರಣವಾಗುತ್ತದೆ. ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿ ಕದ್ರಿ ರಾಜಾಂಗಣದಲ್ಲಿ ಮೊಸರು ಕುಡಿಕೆಯ ವೈಭವಕ್ಕೆ ಕಾರಣವಾಗಿದ್ದರೆ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸುವ ಕಾರ್ಯಕ್ರಮ ವೈವಿಧ್ಯದಲ್ಲಿ ಕೃಷ್ಣನ ವಿವಿಧ ಲೀಲಾವಳಿಯ ಸ್ಪರ್ಧೆಗಳು ಕಣ್ಮನಕ್ಕೆ ಆನಂದ ನೀಡುತ್ತವೆ. ನಾಲ್ಕು ದಶಕಗಳಿಂದ ನಡೆಯುತ್ತಿರುವ ಹಬ್ಬ ಈಗ ಮಕ್ಕಳ ರಾಷ್ಟ್ರೀಯ ಉತ್ಸವವಾಗಿ ಮಾರ್ಪಟ್ಟಿದೆ.

ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿಯ ಮೊಸರು ಕುಡಿಕೆ ಅರ್ಧಶತಮಾನ ದಾಟಿ ಮುನ್ನಡೆಯುತ್ತಿದೆ. ಕದ್ರಿ ಶ್ರೀ ಜಯಮಾರುತಿ ಭಜನಾ ಮಂದಿರದಿಂದ ಶ್ರೀಕೃಷ್ಣನ ಶ್ರೀಗಂಧದ ಪ್ರತಿಮೆ ತರುವುದು, ಕದ್ರಿ ಕಂಬಳ ರಸ್ತೆಯ ಗೋಪಾಲಕೃಷ್ಣ ಮಠದಿಂದ ಕದ್ರಿ ದೇವಸ್ಥಾನಕ್ಕೆ ಮೊಸರು ಕುಡಿಕೆ ಶೋಭಾಯಾತ್ರೆ ಬರುವುದು ಇತ್ಯಾದಿ ಈ ಭಾಗದ ಜನರಲ್ಲಿ ಪುಳಕ ಉಂಟುಮಾಡುತ್ತದೆ.

ಇಸ್ಕಾನ್‌ನಲ್ಲಿ ತೊಟ್ಟಿಲು ಸೇವೆ

ಶೃಂಗಾರ ಪೂಜೆ, ಬೆಣ್ಣೆ ಕೃಷ್ಣನಿಗೆ ತೊಟ್ಟಿಲು ಸೇವೆ, ರಾಜಭೋಗ ಆರತಿ, ಶಯನ ಆರತಿ ಇತ್ಯಾದಿಗಳ ಮೂಲಕ ಇಸ್ಕಾನ್‌ನಲ್ಲಿ ಕೃಷ್ಣಾಷ್ಟಮಿ ಕಳೆಕಟ್ಟುತ್ತದೆ. ಕುಂಪಲೋತ್ಸವ ಹೆಸರಿನಲ್ಲಿ ಉಳ್ಳಾಲದಲ್ಲಿ ನಡೆಯುವ ಮೊಸರು ಕುಡಿಕೆ, ಬಂಟ್ವಾಳ ಭಂಡಾರಿಬೆಟ್ಟು ಶ್ರೀಕೃಷ್ಣ ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿಯ ಆಚರಣೆ,  ಸಜೀಪಮುನ್ನೂರು ಶ್ರೀ ಶಾರದಾ ಯುವಕ ಮಂಡಲ ಶಾರದಾ ನಗರದಲ್ಲಿ ಆಯೋಜಿಸುವ ಶ್ರೀಕೃಷ್ಣ ಜನ್ಮಾಷ್ಟಮಿಯ ಸುವರ್ಣ ಮಹೋತ್ಸವ, ಕಲ್ಲಡ್ಕ ಗೋಳ್ತಮಜಲು ರಾಮನಗರದ ರಾಮಮಂದಿರ 92ನೇ ವರ್ಷದ ಮೊಸರು ಕುಡಿಕೆ, ವಗ್ಗ ಕಾಡಬೆಟ್ಟು ಶಾರದಾಂಬ ಭಜನಾ ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ವಾಮದಪದವು ಬಸ್ತಿಕೋಡಿ ನಾಗರಿಕ ಸೇವಾ ಸಮಿತಿಯ 32ನೇ ವರ್ಷದ ಮೊಸರು ಕುಡಿಕೆ ಉತ್ಸವ ಕೂಡ ಕೃಷ್ಣಸ್ಮರಣೆಗೆ ಕಾರಣವಾಗುತ್ತವೆ. 

ಶೋಭಾಯಾತ್ರೆಯ ಗಮ್ಮತ್ತು

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ 14 ವರ್ಷಗಳಿಂದ ಉತ್ಸವ ಮತ್ತು ಶೋಭಾಯಾತ್ರೆ ಆಯೋಜಿಸುತ್ತಿದೆ. ಈ ಬಾರಿ ಶೋಭಾಯಾತ್ರೆ ಆಗಸ್ಟ್‌ 31ರಂದು ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಲಿದೆ.

ಕೃಷ್ಣಕಟ್ಟೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಮೂಡುಬಿದಿರೆ ಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಕೃಷ್ಣಕಟ್ಟೆಯಲ್ಲಿ 37 ವರ್ಷದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮುದ್ದುಕೃಷ್ಣ ಸ್ಪರ್ಧೆಗಳು ಮುದ ನೀಡುತ್ತಿವೆ. ಅಂಬೆಗಾಲು ಇಡುತ್ತಿರುವ ಜವನೆರ್ ಬೆದ್ರ ಫೌಂಡೇಷನ್‌ನ ಮೊಸರು ಕುಡಿಕೆ ಉತ್ಸವದಲ್ಲಿ ಎರಡನೇ  ವರ್ಷದ ಕೃಷ್ಣೋತ್ಸವ ನಡೆಯಲಿದೆ.

ಮುಡಿಪು ಭಾಗದ ಅಸೈಗೋಳಿ ಯುವಕ ಮಂಡಲ ಹಾಗೂ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ಹಬ್ಬಕ್ಕೆ 36 ವರ್ಷಗಳು ಸಂದಿವೆ. ಕ್ರೀಡಾಕೂಟ, ರಾಧಾಕೃಷ್ಣ, ಬಾಲಕೃಷ್ಣ ವೇಷ ಸ್ಪರ್ಧೆ, ಯಕ್ಷ ನೃತ್ಯ ಸ್ಪರ್ಧೆ, ಜಾರುಗಂಬ ಸ್ಪರ್ಧೆ, ಪಟ್ಟೋರಿ ಶ್ರೀ ನಾಗಬ್ರಹ್ಮ ಕ್ಷೇತ್ರದಿಂದ ಶೋಭಾಯಾತ್ರೆ ಇಲ್ಲಿನ ವಿಶೇಷವಾಗಿದ್ದು ಪಜೀರು ಬೇಂಗೋಡಿಪದವು ಶ್ರೀಕೃಷ್ಣ ಭಜನಾಮಂದಿರದಲ್ಲಿ ಜನ್ಮಾಷ್ಟಮಿಯ ಮೊಸರು ಕುಡಿಕೆಗೆ 59 ವರ್ಷಗಳು ಸಂದಿವೆ.

ಪೂರಕ ಮಾಹಿತಿ: ಬಿ.ಎನ್‌.ಲೋಕೇಶ್‌, ಶಶಿಧರ ರೈ ಕುತ್ಯಾಳ, ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು, ಸತೀಶ ಕೋಣಾಜೆ, ಗಣೇಶ್ ಬಿ.ಶಿರ್ಲಾಲು, ಮೋಹನ್‌ ಶ್ರೇಯಾನ್‌

ಮೊಸರು ಕುಡಿಕೆ ಒಡೆಯುವ ಸಂಭ್ರಮ
ಕಂಬ ಏರಿ ಮೊಸರು ಕುಡಿಕೆ ಒಡೆಯುವ ಸಾಹಸ. ಸುಬ್ರಹ್ಮಣ್ಯದ ನೋಟ
ಜಾರುವ ಕಂಬ
ಅಟ್ಟಿಮಡಿಕೆ ವೈಭವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಸುಬ್ರಹ್ಮಣ್ಯ ಭಾಗದಲ್ಲಿ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಸಂಭ್ರಮ ಗರಿಗೆದರಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ 19 ವರ್ಷಗಳಿಂದ ನಡೆಯುತ್ತಿರುವ ಉತ್ಸವದಲ್ಲಿ 30 ಅಡಿ ಎತ್ತರದ ಜಾರುವ ಕಂಬ ಏರಿ ಕುಡಿಕೆ ಒಡೆಯುವ ಸ್ಪರ್ಧೆ ಅಟ್ಟಿ ಮಡಕೆ ಒಡೆಯುವ ಸ್ಪರ್ಧೆ ಮಹಿಳೆಯರಿಗೆ ಜಾರುವ ಅಡ್ಡಕಂಬದಲ್ಲಿ ನಡೆಯುವ ಸ್ಪರ್ಧೆ ಕಣ್ಣಿಗೆ ಆನಂದ. 
ಕಳೆದುಹೋಗಿದೆ ಹಳೆಯ ಸಂಭ್ರಮ
ಹಿಂದೆ ಶ್ರೀಕೃಷ್ಣ ಜಯಂತಿಯ ಐಭೋಗ ಬೇರೆಯೇ ರೀತಿಯದಾಗಿತ್ತು. ಸಿಪ್ಪೆ ಸುಲಿದು ಎಣ್ಣೆ ಹಚ್ಚಿ ಜಾರುವಂತೆ ಮಾಡಿದ ಕಂಗಿಗೆ ಹತ್ತಿ ಮೊಸರು ಕುಡಿಕೆ ಒಡೆಯಬೇಕಿತ್ತು. ಅದು ಭಾರಿ ಸಾಹಸದ ಕಾರ್ಯ. ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡುತ್ತಿದ್ದರು. ಭಾರ ಎತ್ತುವ ಸ್ಪರ್ಧೆ ಗುಂಡುಕಲ್ಲು ಎತ್ತುವ ಸವಾಲು ಲಗೋರಿ ತೆಂಗಿನಕಾಯಿ ಒಡೆಯುವುದು ಇತ್ಯಾದಿ ಗಮ್ಮತ್ತು ಇತ್ತು ಎಂದು ಮೆಲುಕು ಹಾಕಿದರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ. ಆಧುನಿಕ ಬದುಕಿನಲ್ಲಿ ಕೆಲವು ಸಂಪ್ರದಾಯಗಳು ಇಲ್ಲದಾಗುತ್ತಿವೆ. ಮಂಗಳೂರು ಭಾಗದಲ್ಲಿ ದೇವಸ್ಥಾನಗಳ ಆಶ್ರಯದಲ್ಲಿ ಕೃಷ್ಣಾಷ್ಟಮಿ ನಡೆಯುತ್ತಿದ್ದರೂ ಅದಕ್ಕೆ ಸಾರ್ವಜನಿಕ ಸ್ಪರ್ಶ ಇದೆ. ಕೃಷ್ಣವೇಷ ಸ್ಪರ್ಧೆಗಳು ಈಗ ಎಲ್ಲ ಕಡೆ ನಡೆಯುತ್ತಿವೆ. ಮಾಲ್‌ಗಳಲ್ಲೂ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.