ADVERTISEMENT

ಮಂಗಳೂರು | ಕಾರು ಬೆನ್ನಟ್ಟಿ ಹಲ್ಲೆ: ಚೂರಿ ಇರಿತ

ಬೆರಳಿನಲ್ಲಿ ಅಸಹ್ಯ ಸಂಜ್ಞೆ ತೋರಿಸಿದ್ದಕ್ಕೆ ಶುರುವಾದ ಜಗಳ

​ಪ್ರಜಾವಾಣಿ ವಾರ್ತೆ
Published 27 ಮೇ 2024, 6:12 IST
Last Updated 27 ಮೇ 2024, 6:12 IST

ಮಂಗಳೂರು: ಬೆರಳಿನಲ್ಲಿ ಅಸಹ್ಯ ಸಂಜ್ಞೆ ತೋರಿಸಿದ್ದಕ್ಕೆ ಕಾರಿನ ಚಾಲಕರ ನಡುವೆ ಶನಿವಾರ ರಾತ್ರಿ ಶುರುವಾದ ಜಗಳ  ಹಲ್ಲೆ ಹಾಗೂ ಚೂರಿ ಇರಿತ ನಡೆಸುವಷ್ಟು ತಾರಕಕ್ಕೆ ಹೋಗಿದೆ.

‘ಕಾರಿನ ಚಾಲಕನೊಬ್ಬ, ಇನ್ನೊಂದು ಕಾರನ್ನು ಬೆನ್ನಟ್ಟಿ ಹೋಗಿ ಹಲ್ಲೆ ನಡೆಸಿದ್ದಾನೆ. ಏಟು ತಿಂದ ಇನ್ನೊಂದು ಕಾರಿನ ಚಾಲಕ ಚೂರಿಯಿಂದ ಇರಿದಿದ್ದಾನೆ. ಎರಡೂ ಕಡೆಯವರು ದೂರು ನೀಡಿದ್ದು, ನಗರ ಪೂರ್ವ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

‘ನಗರದ ಉರ್ವ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನೋಡಿ, ಸ್ನೇಹಿತ ಗುರುರಾಜ್‌ ಜೊತೆ ಮನೆಗೆ ಹೋಗುತ್ತಿದ್ದೆ. ಕಾರೊಂದು ಪದವು ಜಂಕ್ಷನ್‌ನಲ್ಲಿ ಏಕಾಏಕಿ ಬಲಬದಿಗೆ (ಶರಬತ್ ಕಟ್ಟೆ ಕಡೆಗೆ)  ತಿರುಗಿತು. ನಾನು ಬ್ರೇಕ್ ಹಾಕಿ ಕಾರು ನಿಲ್ಲಿಸಿದಾಗ ಅದರ ಚಾಲಕ ನನ್ನತ್ತ ಬೆರಳನ್ನು ಅಸಹ್ಯವಾಗಿ ತೋರಿಸಿದ. ಆತನ ಕಾರನ್ನು ಹಿಂಬಾಲಿಸಿಕೊಂಡು ಹೋದಾಗ ಭದ್ರಕಾಳಿ ದೇವಸ್ಥಾನದ ಬಳಿ ಆಪಾದಿತನು ಕಾರನ್ನು ನಿಲ್ಲಿಸಿದ.  ಗುರುರಾಜ್ ಅವರು ಕಾರಿನಿಂದಿಳಿದು ಆತನ ಕಾರಿನ ಬಳಿ ಹೋದರು. ಆಗ ಆತ  ಕಾರನ್ನು ಅವರ ಮೇಲೆ ಹಾಯಿಸಲು ಯತ್ನಿಸಿದ. ಈ ವೇಳೆ ಗುರುರಾಜ್ ತಪ್ಪಿಸಿಕೊಂಡರು. ಬಳಿಕ ನಾವು ಆತನ ಕಾರನ್ನು ಹಿಂಬಾಲಿಸಿಕೊಂಡು ಹೋದೆವು.  ಶರಬತ್ ಕಟ್ಟೆ ಬಳಿ ಆತನು ಕಾರನ್ನು ನಿಲ್ಲಿಸಿ ಅವಾಚ್ಯವಾಗಿ ಬೈದ. ಕಾರಿನಿಂದ ಇಳಿದ ಆತ ಕೈಯ್ಯಲ್ಲಿದ್ದ ಚೂರಿಯಿಂದ ಗುರುರಾಜ್   ಕಿಬ್ಬೊಟ್ಟೆಗೆ ಇರಿದ. ನನಗೂ ಇರಿಯಲು ಬಂದ. ಆತನಿಂದ ತಪ್ಪಿಸಿಕೊಳ್ಳುವಾಗ ನನ್ನ ತೋರು ಬೆರಳಿಗೂ ಗಾಯವಾಗಿದೆ. ಗುರುರಾಜ್ ಅವರು ಕಂಕನಾಡಿ ಫಾದರ್ ಮುಲ್ಲರ್‌ ಆಸ್ಪತ್ರೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಆ ಕಾರು ಚಾಲಕನ ಹೆಸರು ಲೈಲ್ ರೆಬೆಲ್ಲೊ ಎಂದು ಗೊತ್ತಾಗಿದೆ ಎಂದು ಆರೋಪಿಸಿ ಆಶಿಶ್‌ ಎಂಬುವರು ದೂರು ನೀಡಿದ್ದಾರೆ.’

ADVERTISEMENT

ಪ್ರತಿ ದೂರು ನೀಡಿರುವ ಲೈಲ್‌ ರೆಬೆಲ್ಲೊ, ‘ನಾನು ಏ 28ರಂದು ದುಬೈನಿಂದ ಊರಿಗೆ ಮರಳಿದ್ದೆ. ಕಂಕನಾಡಿಯ ಸ್ನೇಹಿತ ಲೈಲ್‌ ರೆಬೆಲ್ಲೊ ಮನೆಗೆ ಶನಿವಾರ ರಾತ್ರಿ ಹೋಗಿದ್ದೆ. ಅಲ್ಲಿ ಅವರ ಸ್ನೇಹಿತ ಡಿಕ್ಷನ್  ಇದ್ದರು. ನಾವು ಮೂವರು ಲೈಲ್ ರೆಬೆಲ್ಲೊ ಅವರ  ಕಾರಿನಲ್ಲಿ ಪಂಪ್‌ವೆಲ್‌– ನಂತೂರು ಮಾರ್ಗವಾಗಿ ಹೆದ್ದಾರಿಯಲ್ಲಿ ಸಾಗಿದ್ದೆವು. ಲೈಲ್‌ ಅವರು ಪದವು ಜಂಕ್ಷನ್‌ ಸಮೀಪ  ಶರಬತ್‌ಕಟ್ಟೆ ಕಡೆಗೆ ತಿರುಗಿಸಿದಾಗ ಕೆಪಿಟಿ ಕಡೆಯಿಂದ ಇನ್ನೊಂದು ಕಾರು ಬಂತು. ಆ ಕಾರನ್ನು ನಮ್ಮನ್ನು ಹಿಂಬಾಲಿಸಿಕೊಂಡು ಬಂತು. ಸಮೀಪದ ದೇವಸ್ಥಾನದ ಬಳಿ ಆ ಕಾರಿನ ಚಾಲಕ ಕರ್ಕಶವಾಗಿ ಹಾರ್ನ್‌ ಹಾಕಿದ. ಆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಕೆಳಗಿಳಿದು ಅವಾಚ್ಯವಾಗಿ ಬೈಯುತ್ತ ನಮಗೆ ಹೊಡೆಯಲು ಕೈಎತ್ತಿಕೊಂಡು ಕಾರಿನತ್ತ ಬಂದ. ಆಗ ಲೈಲ್‌ ಅವರು ಕಾರನ್ನು ಚಲಾಯಿಸಿ ಮುಂದೆ ಹೋದರು. ನಮ್ಮ ಕಾರನ್ನು ಬೆನ್ನಟ್ಟಿಕೊಂಡು ಬಂದ ಆ ಕಾರು ಯೆಯ್ಯಾಡಿ ಬಳಿ ನಮ್ಮನ್ನು ಹಿಂದಿಕ್ಕಿ ರಸ್ತೆಗೆ ಅಡ್ಡವಾಗಿ ನಿಂತಿತು. ಅದರಲ್ಲಿದ್ದ ಇಬ್ಬರು ಲೈಲ್‌ ರೆಬೆಲ್ಲೊ ಅವರನ್ನು ಕಾರಿನಿಂದ ಕೆಳಗಿಳಿವಂತೆ ಬೆದರಿಸಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರು. ಅವರ ಹೆಸರು ಗುರುರಾಜ್‌ ಹಾಗೂ ಆಶಿಶ್‌ ಎಂದು ಗೊತ್ತಾಗಿದೆ’ ಎಂದು ಇನ್ನೊಬ್ಬ ವ್ಯಕ್ತಿ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.