ADVERTISEMENT

ಮತ್ತೊಬ್ಬ ಆರೋಪಿ ಬಂಧನ

ಬೋಳಿಯಾರ್‌: ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:54 IST
Last Updated 12 ಜೂನ್ 2024, 6:54 IST

ಮಂಗಳೂರು: ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಲುವಾಗಿ ವಿಜಯೋತ್ಸವ ಆಚರಿಸಿ ಮರಳುತ್ತಿದ್ದ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ನಲ್ಲಿ ಭಾನುವಾರ ಚೂರಿ ಇರಿದ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.

ಬೋಳಿಯಾರ್‌ ನಿವಾಸಿ ಅಬೂಬಕರ್‌ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಶಾಕಿರ್, ಅಬ್ದುಲ್ ರಜಾಕ್‌, ಅಬೂಬಕರ್ ಸಿದ್ಧಿಕ್‌, ಸವದ್‌ ಹಾಗೂ ಮೋನು ಅಲಿಯಾಸ್‌ ಹಫೀಜ್‌ನನ್ನು ಪೊಲೀಸರು ಸೋಮವಾರವೇ ಬಂಧಿಸಿದ್ದರು. 

ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತ ಹರೀಶ್‌ (41) ಹಾಗೂ ನಂದ ಕುಮಾರ್‌ (24) ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

‘ಈ ಕೃತ್ಯದಲ್ಲಿ ಇನ್ನೂ 14 ಮಂದಿ ಭಾಗಿಯಾಗಿದ್ದು, ಅವರಿಗಾಗಿ  ಹುಡುಕಾಟ ನಡೆಸುತ್ತಿದ್ದೇವೆ. ಅವರನ್ನು ಬಂಧಿಸಲು ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆತನ ಹೆಸರು ರೌಡಿಗಳ ಪಟ್ಟಿಯಲ್ಲಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್‌ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪ್ರಚೋದನಾಕಾರಿ ಘೋಷಣೆ:

‘ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆ ವೇಳೆ  ‘ಭಾರತ್‌ ಮಾತಾಕಿ ಜೈ’ ಎಂಬ ಘೋಷಣೆ ಕೂಗಿದ್ದು ನಿಜ. ಅದಲ್ಲದೆಯೂ ಬೇರೆ ಕೆಲವು ಪ್ರಚೋದನಾಕಾರಿ ಘೋಷಣೆಗಳನ್ನೂ ಕೂಗಿದ್ದಾರೆ. ಇದರಿಂದಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು. ಬೋಳಿಯಾರ್‌ನ ಆಟೊರಿಕ್ಷಾ ನಿಲ್ದಾಣದ ಬಳಿ ಕೂಗಿದ್ದ ಪ್ರಚೋದನಾಕಾರಿ ಘೋಷಣೆಗಳೂ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದ್ದವು. ಚೂರಿ ಇರಿತ ಕೃತ್ಯದ ಆರೋಪಿಗಳ ಜೊತೆ, ಪ್ರಚೋದನಾಕಾರಿ ಘೋಷಣೆ ಕೂಗಿದ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

‌‘ಬಿಜೆಪಿ ಕಾರ್ಯಕರ್ತರು ಮೆರವಣಿಗೆ ವೇಳೆ ಘೋಷಣೆ ಕೂಗುವಾಗ ಮುಸ್ಲಿಮರನ್ನು  ಪಾಕಿಸ್ತಾನಿಗಳೆಂದು ಕರೆದಿದ್ದಾರೆ. ಅವರ ಭಾವನೆಗಳಿಗೆ ಧಕ್ಕೆ ತರುವಂತಹ ಪದ ಬಳಕೆ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.