ADVERTISEMENT

ಮತೀಯವಾದಿಗಳಿಗೆ ರಾಜ್ಯ ಸರ್ಕಾರ ಬೆಂಬಲ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:44 IST
Last Updated 16 ಜೂನ್ 2024, 4:44 IST
ದೇರಳಕಟ್ಟೆ ಆಸ್ಪತ್ರೆಯಲ್ಲಿ ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಸಿ.ಟಿ ರವಿ ಭೇಟಿ ಮಾಡಿದರು.
ದೇರಳಕಟ್ಟೆ ಆಸ್ಪತ್ರೆಯಲ್ಲಿ ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಸಿ.ಟಿ ರವಿ ಭೇಟಿ ಮಾಡಿದರು.   

ಉಳ್ಳಾಲ: ‘ಮತೀಯ ಶಕ್ತಿಗಳು ಮತ್ತು ಮತಾಂಧರಿಗೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಬೆಂಬಲ ನೀಡುತ್ತಿರುವುದರಿಂದಲೇ ರಾಜ್ಯದ ಉದ್ದಗಲದಲ್ಲಿ ಕುಕೃತ್ಯಗಳು ನಡೆಯುತ್ತಿವೆ’ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಬೋಳಿಯಾರ್‌ ಚೂರಿ ಇರಿತ ಪ್ರಕರಣದಲ್ಲಿ ಗಾಯಗೊಂಡು ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ವಯದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರಾದ ನಂದ ಕುಮಾರ್‌ ಮತ್ತು ಹರೀಶ್  ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದರು. 

‘ಬೋಳಿಯಾರ್‌ ಪ್ರಕರಣದಲ್ಲಿ ಹೊರಗಿನವರು ಬಂದು ಸೌಹಾರ್ದ ಕೆಡಿಸುತ್ತಿದ್ದಾರೆ’ ಎಂಬ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಖಾದರ್‌ ಅವರು ಒಳಗಿನವರೇ ಆಗಿದ್ದಾರೆ. ಅವರು ನೆಟ್ಟಗಿದ್ದರೆ ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಘಟನೆ ಸಂಭವಿಸುತ್ತಿರಲಿಲ್ಲ. ಒಳಗಿನವರು ಮತೀಯವಾದಿಗಳಿಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಬೇಕು
ಪೊಲೀಸ್ ಇಲಾಖೆ ಮತಾಂಧರ ಕೈಗೊಂಬೆಯಂತೆ ವರ್ತಿಸಬಾರದು’ ಎಂದರು.

ADVERTISEMENT

‘ಪ್ರಮುಖ ಆರೋಪಿಯನ್ನು ಶೀಘ್ರವೇ ಬಂಧಿಸಬೇಕು. ಆರೋಪಿಗಳನ್ನು ರಕ್ಷಿಸಲು ಕೆಲವರು ಷಡ್ಯಂತ್ರ ಮಾಡುತ್ತಿದ್ದು, ಅದು ಅವರಿಗೆ ತಿರುಗು ಬಾಣ ಆಗಲಿದೆ. ಸರ್ಕಾರದ ಈ ತಾರತಮ್ಯದ ಕೆಟ್ಟ ನೀತಿಯ ವಿರುದ್ಧ ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಧ್ವನಿ ಎತ್ತುತ್ತೇವೆ. ಮತೀಯವಾದಿಗಳಿಗೆ ಬೆಂಬಲ ಕೊಡುತ್ತಿರುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ ಮೇಲೆ ಅವರು ಅಧಿಕಾರದಲ್ಲಿರಲು ಸಾಧ್ಯವಿಲ್ಲ’ ಎಂದರು.

ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸತೀಶ್ ಕುಂಪಲ, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ಕಾರ್ಯದರ್ಶಿ ದಿನೇಶ್ ಅಮ್ಟೂರು,ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್‌, ಬಿಜೆಪಿ ಕ್ಷೇತ್ರ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕಾರ್ಯದರ್ಶಿ ಜೀವನ್ ಕುಮಾರ್ ಕೆರೆಬೈಲು, ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಮಾಜಿ ಶಾಸಕ ಜಯರಾಮ ಶೆಟ್ಟಿ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಯಶವಂತ ಅಮೀನ್, ಜಯಶ್ರೀ ಕರ್ಕೇರ, ಸುಷ್ಮಾ ಕೋಟ್ಯಾನ್, ಹೇಮಂತ್ ಶೆಟ್ಟಿ, ನಿಶಾನ್ ಪೂಜಾರಿ ಜೊತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.