ಮಂಗಳೂರು: ನಗರದ ವೆಲೆನ್ಸಿಯಾದಲ್ಲಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನೆಗೆ ಕಲ್ಲು ತೂರಿದ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಬಂಟ್ವಾಳ ತಾಲ್ಲೂಕಿನ ಬೊಳಂತೂರು ಗ್ರಾಮದ ಚಾಲಕ ಭರತ್ ಅಲಿಯಾಸ್ ಯಕ್ಷಿತ್ (24) ಹಾಗೂ ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿ ಹೌಸ್‌ನ ದಿನೇಶ್ ಕೆ.(20) ಬಂಧಿತ ಆರೋಪಿಗಳು. ದಿನೇಶ್ ಹಣಕಾಸು ಸಂಸ್ಥೆಯಲ್ಲಿ ಹಣ ಸಂಗ್ರಾಹಕನಾಗಿದ್ದಾರೆ. ಇವರಿಬ್ಬರೂ ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
‘ಐವನ್ ಅವರು ಈಚೆಗೆ ನೀಡಿದ ಹೇಳಿಕೆಯಿಂದ ಆಕ್ರೋಶಗೊಂಡು ಅವರ ಮನೆಗೆ ಕಲ್ಲು ತೂರಿದ್ದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆ.21ರಂದು ರಾತ್ರಿ 9.30ರ ವೇಳೆಗೆ ‘ಫ್ರಿಶ್ ಕ್ರೌನ್’ ಹೋಟೆಲ್ ಊಟ ಮಾಡಿದ್ದ ಆರೋಪಿಗಳು ಕಲ್ಲು ಬಿಸಾಡುವ ಕುರಿತು ಅಲ್ಲಿ ದಿಢೀರ್ ನಿರ್ಧರಿಸಿದ್ದರು’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿಗೆ ನೀಡಿದ್ದನ್ನು ಖಂಡಿಸಿ ನಗರದಲ್ಲಿ ಇದೇ 19ರಂದು ನಡೆದ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಐವನ್ ಡಿಸೋಜ, ‘ಬಾಂಗ್ಲಾ ದೇಶದ ಪ್ರಧಾನಿ ಓಡಿಹೋದಂತಹ ಪರಿಸ್ಥಿತಿ ರಾಜ್ಯಪಾಲರಿಗೂ ಬರುತ್ತದೆ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೇ 21ರಂದು ರಾತ್ರಿ ಐವನ್ ಡಿಸೋಜ ಮನೆಗೆ ಕಲ್ಲು ತೂರಾಟ ನಡೆದಿತ್ತು. ಈ ಬಗ್ಗೆ ನಗರ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
‘ಆರೋಪಿಗಳ ಪತ್ತೆಗೆ ನಗರ ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಓಡಾಡಿದ ದೃಶ್ಯಗಳನ್ನು ಹಾಗೂ ನಗರದಲ್ಲಿ ವಾಹನಗಳ ಸಂಚಾರದ ವಿವರಗಳನ್ನು ತನಿಖಾ ತಂಡವು ಕಲೆಹಾಕಿತ್ತು. ಆರೋಪಿಗಳನ್ನು ನೋಡಿದವರಿಂದಲೂ ಮಾಹಿತಿ ಸಂಗ್ರಹಿಸಿತ್ತು. ಕಲೆಹಾಕಿದ ಈ ಮಾಹಿತಿಗಳನ್ನು ವಿಶ್ಲೇಷಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ’ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.