ಉಳ್ಳಾಲ: ಉಳ್ಳಾಲ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸೋಮೇಶ್ವರ-ಉಳ್ಳಾಲ ನಡುವಿನ ಮೂಡ ಸೈಟ್ ಸಮೀಪ ಮೈತುಂಬ ಗಾಯವಾಗಿರುವ ನಾಯಿಯೊಂದು ಇತರ ನಾಯಿಗಳಿಗೆ ಕಚ್ಚುತ್ತಿರುವ ಬಗ್ಗೆ ಆತಂಕಗೊಂಡು ವ್ಯಕ್ತಿಯೊಬ್ಬರು ನಗರಸಭೆಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ರೇಬಿಸ್ ಹರಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಮುನ್ನೂರು, ತಲಪಾಡಿ ಗ್ರಾಮದ ರಸ್ತೆ ಬದಿ, ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ಸೋಮೇಶ್ವರ ಪುರಸಭೆ ಹೊರತುಪಡಿಸಿ ಬೇರೆ ಎಲ್ಲಿಯೂ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ನಿಯಂತ್ರಣ ಲಸಿಕೆ ಶಿಬಿರಗಳು ನಡೆದಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದು.
ಉಳ್ಳಾಲ ನಗರಸಭೆ ವ್ಯಾಪ್ತಿಗೆ ಒಳಪಡುವ ಸೋಮೇಶ್ವರ ಮೂಡ ಲೇಔಟ್‌ನ ದ್ವಾರಕಾನಗರದಲ್ಲಿ ಮೈತುಂಬ ಗಾಯಗಳಿದ್ದ ನಾಯಿಯೊಂದ, ಇತರ ನಾಯಿಗಳಿಗೆ ಕಚ್ಚುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಈ ನಾಯಿಯನ್ನು ದೊಣ್ಣೆಯಿಂದ ಹೊಡೆದಿದ್ದರು. ಶಕ್ತಿನಗರ ಅನಿಮಲ್ ಕೇರ್ ಟ್ರಸ್ಟ್‌ನವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಅವರು ಬಂದು ಪರೀಕ್ಷಿಸುವಷ್ಟರಲ್ಲಿ ನಾಯಿ ಸತ್ತು ಹೋಗಿತ್ತು. ಇದರಿಂದ ನಾಯಿಯ ಆರೋಗ್ಯ ಪರಿಶೀಲನೆ ಸಾಧ್ಯವಾಗಲಿಲ್ಲ.ಈ ಸಂಬಂಧ ನಗರಸಭೆ ಪೌರಾಯುಕ್ತರಿಗೆ ದೂರು ನೀಡಲಾಗಿತ್ತು ಎನ್ನುತ್ತಾರೆ ಸ್ಥಳೀಯರು.
‘ಉಳ್ಳಾಲ, ಸೋಮೇಶ್ವರ ಪ್ರದೇಶಗಳಲ್ಲಿ ರೇಬಿಸ್ ವೈರಾಣು ಇರುವ ನಾಯಿಗಳು ಪತ್ತೆಯಾಗಿವೆ. ಈಗಾಗಲೇ ಎರಡು ನಾಯಿಗಳ ವೈದ್ಯಕೀಯ ಪರೀಕ್ಷೆ ನಡೆದಿದೆ. ಇದರಿಂದ ಸಾಕುನಾಯಿಗಳ ಬಗ್ಗೆಯೂ ಭಯವಾಗುತ್ತಿದೆ. ನಗರಸಭೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟದ ಸಂಚಾಲಕ ಮಂಗಳೂರು ರಿಯಾಜ್, ಪೌರಾಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಹುಚ್ಚು ನಾಯಿಗಳು ಇರುವ ಬಗ್ಗೆ ಆತಂಕವಾಗುತ್ತಿದೆ. ನಾಯಿಗಳಿಗೆ ರೇಬಿಸ್ ನಿಯಂತ್ರಣ ಲಸಿಕೆ ಹಾಕಬೇಕು ಎಂದು ಸ್ಥಳೀಯ ಡಾ.ಜಯಕುಮಾರ್ ಆಗ್ರಹಿಸಿದ್ದಾರೆ.
‘ನಾಯಿಗಳಿಗೆ ರೇಬಿಸ್ ಲಕ್ಷಣಗಳಿದ್ದರೆ ಟ್ರಸ್ಟ್ ವತಿಯಿಂದ ಅದನ್ನು ಹಿಡಿದು 10 ದಿನಗಳ ಕಾಲ ಐಸೊಲೇಷನ್ ವಾರ್ಡ್‌ನಲ್ಲಿ ಇಟ್ಟು ಗಮನಿಸಲಾಗುತ್ತದೆ. 10 ದಿನಗಳ ಒಳಗೆ ಸತ್ತುಹೋದಲ್ಲಿ ಅದರ ಮೆದುಳಿನ ಮಾದರಿಯನ್ನು ವೈರಾಣು ಪರೀಕ್ಷೆಗೆ ಕಳುಹಿಸಿ ಕೊಡಲಾಗುತ್ತದೆ. ಡಾಗ್ ರೂಲ್ಸ್ ಕಾನೂನು ಗ್ರಾಮಾಂತರ ಭಾಗದಲ್ಲಿ ಪಾಲನೆ ಆಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳು ಬೀದಿನಾಯಿ ನಿಯಂತ್ರಣಕ್ಕೆ ಸಂಬಂಧಿಸಿ ಅನುದಾನ ಮೀಸಲಿಡುತ್ತಿಲ್ಲ. ಇದರಿಂದ ನಾಯಿಗಳ ಸಂಖ್ಯೆ ಹಚ್ಚಾಗುತ್ತಲೇ ಇದೆ. ಈ ಭಾಗಗಳಲ್ಲಿ ರೇಬಿಸ್ ಹರಡಿದಲ್ಲಿ ನಿಯಂತ್ರಣವೂ ಅಸಾಧ್ಯ’ ಎಂದು ಅನಿಮಲ್ ಕೇರ್ ಟ್ರಸ್ಟ್ ಟ್ರಸ್ಟಿ ಸುಮಾ ಆರ್. ನಾಯಕ್ ಹೇಳಿದರು.
‘ರೇಬಿಸ್ ಅಪಾಯಕಾರಿ’
‘ರೇಬಿಸ್ ವ್ಯಾಪಕವಾಗಿ ಹರಡಬಹುದು. ಬೀದಿನಾಯಿಗಳ ಸಂಖ್ಯೆಯೂ ಹೆಚ್ಚಾಗಿದೆ. ಬೀದಿನಾಯಿಗಳ ನಿಯಂತ್ರಣದ ಕುರಿತು ಪಶುಸಂಗೋಪನಾ ಇಲಾಖೆಯಲ್ಲಿ ಯಾವುದೇ ಯೋಜನೆಗಳಿಲ್ಲ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯಾಡಳಿತ ಸೇರಿಕೊಂಡು ಶಿಬಿರ ನಡೆಸಬಹುದು. ಬೀದಿನಾಯಿಗಳ ನಿಯಂತ್ರಣಕ್ಕೆ ಶಿಬಿರಗಳು ಪರಿಣಾಮಕಾರಿಯಾಗಿ ನಡೆದಲ್ಲಿ ಜನರಲ್ಲಿ ಅರಿವು ಮೂಡುತ್ತದೆ’ ಎಂದು ಉಳ್ಳಾಲ ಕೋಟೆಕಾರು ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ. ನಾಗರಾಜ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.