ADVERTISEMENT

ಮಂಗಳೂರು | ಪೊಲೀಸರ ಸೋಗಿನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಕರೆ: ಹಣಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 20:16 IST
Last Updated 12 ಜೂನ್ 2024, 20:16 IST
   

ಮಂಗಳೂರು: ನಗರದ ಕೆಲವು ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರಿಗೆ ಪೊಲೀಸರ ಸೋಗಿನಲ್ಲಿ ಮಂಗಳವಾರ ಮತ್ತು ಬುಧವಾರ ಬೆದರಿಕೆ ಕರೆಗಳು ಬಂದಿವೆ.  ವಾಟ್ಸ್ ಆ್ಯಪ್ ಬಳಸಿ ಕರೆ ಮಾಡಿದ ಕಿಡಿಗೇಡಿಗಳು ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ‘ನಿಮ್ಮ ಮಗ/ಮಗಳನ್ನು ಬಂಧಿಸಿದ್ದೇವೆ. ಇಂತಿಷ್ಟು ಹಣ ನೀಡಿದರೆ ಎಫ್‌ಐಆರ್‌ ದಾಖಲಿಸದೇ ಬಿಟ್ಟುಬಿಡುತ್ತೇವೆ’ ಎಂದು ಹೇಳಿದ್ದಾರೆ.

‘ವಿದ್ಯಾರ್ಥಿಗಳ ಪೋಷಕರಿಗೆ ಪೋಲೆಂಡ್‌, ಪಾಕಿಸ್ತಾನ ಮೊದಲಾದ ವಿದೇಶಿ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬಂದಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗೆ ಕ್ರಮವಹಿಸಿದ್ದೇವೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.

‘ಕರೆ ಮಾಡಿದ ಕಿಡಿಗೇಡಿಗಳು ಪೋಷಕರ ಬಳಿ ಹಿಂದಿಯಲ್ಲಿ ಮಾತನಾಡಿ ತಮ್ಮನ್ನು ಪೊಲೀಸ್‌ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ‘ನಿಮ್ಮ ಮಗ/ ಮಗಳನ್ನು ಪ್ರಕರಣವೊಂದರಲ್ಲಿ ಬಂಧಿಸಿದ್ದೇವೆ. ಎಫ್‌ಐಆರ್‌ ದಾಖಲಿಸದೇ ಅವರನ್ನು ಬಿಟ್ಟುಬಿಡಬೇಕಾದರೆ ನೀವು ಹಣ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಕೆಲವು ಪೋಷಕರು ಈ ಬಗ್ಗೆ ಪರಿಶೀಲಿಸಿದಾಗ ಅವರ ಮಕ್ಕಳು ಶಾಲೆಯಲ್ಲಿ ಸುರಕ್ಷಿತವಾಗಿದ್ದು, ಇದು ಹುಸಿ ಕರೆ ಎಂದು ಗೊತ್ತಾಗಿದೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಶಾಲಾ ತರಗತಿಗಳು ನಡೆಯುತ್ತಿದ್ದ ಅವಧಿಯಲ್ಲೇ ಇಂತಹ ಕರೆಗಳನ್ನು ಮಾಡಲಾಗಿದೆ. ಬೆದರಿಸಿ ಹಣ ಪೀಕಿಸುವ ಉದ್ದೇಶದಿಂದಲೇ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಕರೆ ಬಂದ ಸಂಖ್ಯೆಯ ಡಿಪಿಯಲ್ಲಿ ಪೊಲೀಸ್‌ ಅಧಿಕಾರಿಗಳ ಭಾವಚಿತ್ರಗಳಿದ್ದವು. ಅವುಗಳನ್ನು ನೋಡಿ ಕೆಲವು ಪೋಷಕರು ನಿಜಕ್ಕೂ ಪೊಲೀಸರಿಂದಲೇ ಕರೆ ಬಂದಿರಬಹುದು ಎಂದು ಭಾವಿಸಿದ್ದರು. ಬೆದರಿಕೆ ಕರೆಯನ್ನು ನಂಬಿ ಹಣ ಕಳೆದುಕೊಂಡ ಬಗ್ಗೆ ಇದುವರೆಗೆ ಯಾರಿಂದಲೂ ದೂರು ಬಂದಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕೆಲವು ಪೋಷಕರಿಗೆ ನಿಮ್ಮ ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ. ಬಿಡಿಸಲು ಹಣ ಕೊಡಬೇಕು’ ಎಂದೂ ಹುಸಿ ಕರೆಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.