ADVERTISEMENT

ಡ್ರಗ್ಸ್ ವಿರುದ್ಧ ಮೊಳಗಿದ ವಿದ್ಯಾರ್ಥಿ ಧ್ವನಿ

ಸೇಂಟ್ ಅಲೋಶಿಯಸ್ ಕಾಲೇಜಿನಿಂದ ನೆಹರೂ ಮೈದಾನಕ್ಕೆ ನಡಿಗೆ; ಪ್ರಮಾಣ ವಚನ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:41 IST
Last Updated 18 ಅಕ್ಟೋಬರ್ 2024, 14:41 IST
ಮಾದಕವಸ್ತು ವಿರುದ್ಧ ನಡಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಬಿಳಿ ಧ್ವಜ ಬೀಸಿ ಜಾಗೃತಿಗೆ ಕರೆ ನೀಡಿದರು :ಪ್ರಜಾವಾಣಿ ಚಿತ್ರ
ಮಾದಕವಸ್ತು ವಿರುದ್ಧ ನಡಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಬಿಳಿ ಧ್ವಜ ಬೀಸಿ ಜಾಗೃತಿಗೆ ಕರೆ ನೀಡಿದರು :ಪ್ರಜಾವಾಣಿ ಚಿತ್ರ   

ಮಂಗಳೂರು: ಮಾದಕ ಪದಾರ್ಥಗಳ ವಿರುದ್ಧ ನಿರಂತರ ಧ್ವನಿ ಮೊಳಗಿಸುವೆ, ನಾನು ಮಾದಕ ಪದಾರ್ಥ ಸೇವಿಸುವುದಿಲ್ಲ, ಇತರರು ಸೇವಿಸದಂತೆ ತಡೆಯಲು ಪ್ರಯತ್ನಿಸುವೆ. ಮಾದಕ ಪದಾರ್ಥಗಳನ್ನು ಸದಾ ವಿರೋಧಿಸುವೆ...

ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಘೋಷಣೆಗಳನ್ನು ಮೊಳಗಿಸುತ್ತಿದ್ದಂತೆ ಮಾದಕ ಪದಾರ್ಥಗಳ ವಿರುದ್ಧ ನಗರದಲ್ಲಿ ಹೊಸ ಅಲೆ ಎದ್ದಿತು.

ಮಂಗಳೂರು ಧರ್ಮಪ್ರಾಂತ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳು, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಹಾಗೂ ಕ್ಯಾಥಲಿಕ್ ಶೈಕ್ಷಣಿಕ ಮಂಡಳಿ, ಮಾದಕ ಪದಾರ್ಥಗಳ ವಿರುದ್ಧ ಶುಕ್ರವಾರ ಆಯೋಜಿಸಿದ್ದ ನಡಿಗೆಯಲ್ಲಿ ಮಂಗಳೂರು ನಗರ ಮತ್ತು ಸುತ್ತಮುತ್ತದ ಧರ್ಮಪ್ರಾಂತ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ನಡಿಗೆಯಲ್ಲಿ ನೆಹರು ಮೈದಾನದಲ್ಲಿ ಡ್ರಗ್ಸ್ ವಿರುದ್ಧ ಧ್ವನಿ ಮೊಳಗಿಸಿದರು.

ADVERTISEMENT

ಸೇಂಟ್ ಅಲೋಶಿಯಸ್ ಕಾಲೇಜು ಆವರಣದಲ್ಲಿ ಸೇರಿದ ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವಿರುದ್ಧ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದುಕೊಂಡು ಸಾಗಿದರು. ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್ ಕಾರ್ಯಕರ್ತರು ಹಾಗೂ ಎನ್‌ಸಿಸಿ ಕೆಡೆಟ್ಸ್‌ ಜೊತೆಗೂಡಿದರು.  ಕಾಲೇಜಿನ ರೆಕ್ಟರ್ ಫಾದರ್ ಸ್ಟೀಫನ್ ಪಿಂಟೊ ನಡಿಗೆಗೆ ಚಾಲನೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಉಪ ಪೊಲೀಸ್ ಆಯುಕ್ತ ಸಿದ್ಧಾರ್ಥ್ ಗೋಯಲ್ ಪ್ರಮಾಣ ವಚನ ಬೋಧಿಸಿದರು. ನಂತರ ಮಾತನಾಡಿದ ಅವರು ಉತ್ತಮ ಸಮಾಜ ಬೇಕೇ ಬೇಡವೇ ಎಂಬುದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು, ಸಮಾಜ ಉಳಿಯಬೇಕೆಂದರೆ ಮಾದಕ ಪದಾರ್ಥಗಳಂಥ ಪಿಡುಗನ್ನು ದೂರ ಮಾಡಬೇಕು ಎಂದರು. 

ಪೊಲೀಸ್ ಉಪ ಆಯುಕ್ತ ದಿನೇಶ್ ಕುಮಾರ್, ನಡಿಗೆ ಕಾರ್ಯಕ್ರಮದ ಸಂಚಾಲಕ ಲೂಯಿಸ್ ಜೆ.ಪಿಂಟೊ, ಮಂಗಳೂರು ಧರ್ಮಪ್ರಾಂತದ ಕಾರ್ಯದರ್ಶಿ ಜಾನ್ ಡಿಸೋಜ, ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕೊಹೆಲ್ಲೊ ಇದ್ದರು. ಶಿವಕುಮಾರ್ ವಂದಿಸಿದರು.

ಕಾರ್ಯಕ್ರಮದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಸಿದ್ಧಾರ್ಥ ಗೋಯಲ್ ‘ಮಾದಕ ಪದಾರ್ಥಗಳ ವಿರುದ್ಧ ನಿರಂತರ ಅಭಿಯಾನ ನಡೆಯಬೇಕು. ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ಕೊಡಬಹುದು, ಆದರೆ ಅದರಿಂದ ಬದುಕು ಹಾಳಾಗುತ್ತದೆ. ಹೀಗಾಗಿ ಡ್ರಗ್ಸ್‌ ವಿರುದ್ಧ ಜಾಗೃತಿ ಮೂಡಿಸುವುದು ಉತ್ತಮ ಕಾರ್ಯ. ವಿದ್ಯಾರ್ಥಿಗಳು ಇಷ್ಟೊಂದು ಸಂಖ್ಯೆಯಲ್ಲಿ ನಡಿಗೆಯಲ್ಲಿ ಪಾಲ್ಗೊಂಡಿರುವುದು ಅಭಿನಂದನೀಯ’ ಎಂದರು.

ಮಾದಕವಸ್ತು ವಿರುದ್ಧ ನಡಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಬಿಳಿ ಧ್ವಜ ಬೀಸಿ ಜಾಗೃತಿಗೆ ಕರೆ ನೀಡಿದರು :ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.