ಮಂಗಳೂರು:ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ನಡೆದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಝಿಲ್ ಹತ್ಯೆ ಹಿಂದೆ ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡದ ಕೈವಾಡ ಇರುವ ಬಗ್ಗೆ ಪೊಲೀಸರಿಗೆ ಖಚಿತ ಸುಳಿವು ಸಿಕ್ಕಿದೆ. ಪೊಲೀಸರು ಈ ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದ್ದಾರೆ.
ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡವು ಬಜ್ಪೆಯಲ್ಲಿ ನಡೆದ ಕೊಲೆ ಕೃತ್ಯದಲ್ಲಿ ಹಾಗೂ ಇನ್ನೊಂದು ಕೊಲೆ ಕೃತ್ಯದಲ್ಲಿ ಈ ಹಿಂದೆ ಭಾಗಿಯಾಗಿತ್ತು. ಆ ತಂಡದ ಸದಸ್ಯರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕಿದ್ದು ಕೆಲವರನ್ನು ವಶಕ್ಕೂ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ ಕಾರನ್ನು ಬಾಡಿಗೆಗೆ ನೀಡಿದ್ದ ಅರೋಪಿ ಅಜಿತ್ ಕ್ರಾಸ್ತಾನನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಕಾರು ಉಡುಪಿ ಜಿಲ್ಲೆಯ ಇನ್ನಾ ಗ್ರಾಮದ ಕಡೆಕುಂಜದಲ್ಲಿ ಭಾನುವಾರ ಪತ್ತೆಯಾಗಿತ್ತು. ಬಂಧಿತ ಆರೋಪಿ ನೀಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಸುಹಾಸ್ ಶೆಟ್ಟಿ ಗ್ಯಾಂಗ್ ಬೆನ್ನು ಹತ್ತಿತ್ತು.
'ಫಾಝಿಲ್ ಹತ್ಯೆ ಪ್ರಕರಣವನ್ನೂ ಭೇದಿಸಿದ್ದೇವೆ. ಸದ್ಯದಲ್ಲೆ ಆರೋಪಿಗಳನ್ನು ಬಂಧಿಸುತ್ತೇವೆ' ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪ್ರಜಾವಾಣಿಗೆ ತಿಳಿಸಿದರು.
ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಅವರೂ ಮಂಗಳೂರುಗೆ ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣಗಳ ತನಿಖೆಯ ಪ್ರಗತಿಯ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.