ADVERTISEMENT

ಧರ್ಮಸ್ಥಳ | 26,200 ಬಡ ವಿದ್ಯಾರ್ಥಿಗಳಿಗೆ ‘ಸುಜ್ಞಾನನಿಧಿ ಶಿಷ್ಯವೇತನ’

​ಪ್ರಜಾವಾಣಿ ವಾರ್ತೆ
Published 24 ಮೇ 2023, 8:24 IST
Last Updated 24 ಮೇ 2023, 8:24 IST
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಪ್ರತಿಭಾವಂತ ವಿದ್ಯಾರ್ಥಿನಿಗೆ ‘ಸುಜ್ಞಾನನಿಧಿ ಶಿಷ್ಯವೇತನ’ ವಿತರಿಸಿದ ಚಿತ್ರ
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಪ್ರತಿಭಾವಂತ ವಿದ್ಯಾರ್ಥಿನಿಗೆ ‘ಸುಜ್ಞಾನನಿಧಿ ಶಿಷ್ಯವೇತನ’ ವಿತರಿಸಿದ ಚಿತ್ರ   

ಮಂಗಳೂರು: ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮದ ಮೂಲಕ ಪ್ರಸಕ್ತ ವರ್ಷ 26,200 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್‌ ತಿಳಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮವನ್ನು ಜಾರಿಗೆ ತಂದರು. ಈ ಕಾರ್ಯಕ್ರಮದಂತೆ ಯೋಜನೆಯ ಸಂಘಗಳ ಬಡ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ.

3 ವರ್ಷದವರೆಗಿನ ಕೋರ್ಸ್‌ಗಳಿಗಾಗಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ತಲಾ ₹400ರಂತೆ ಹಾಗೂ ಅದರಿಂದ ಮೇಲ್ಪಟ್ಟ 5 ವರ್ಷದವರೆಗಿನ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಲಾ ₹1 ಸಾವಿರದಂತೆ  ಸಂಬಂಧಿಸಿದ ಕೋರ್ಸ್ ಮುಗಿಯುವವರೆಗೆ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಪಾವತಿಸಲಾಗುತ್ತಿದೆ.

ADVERTISEMENT

ವಿದ್ಯಾರ್ಥಿಗಳಿಂದಲೇ ಮರುದೇಣಿಗೆ: ಸುಜ್ಞಾನನಿಧಿ ಶಿಷ್ಯವೇತನವನ್ನು ಪಡೆದು ಶಿಕ್ಷಣವನ್ನು ಮುಗಿಸಿದ ಬಹುತೇಕ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಪ್ರಯೋಜನ ಪಡೆದು ಉತ್ತಮ ಉದ್ಯೋಗ ಗಿಟ್ಟಿಸಿಕೊಂಡ 225 ವಿದ್ಯಾರ್ಥಿಗಳು ‘ಸುಜ್ಞಾನನಿಧಿ ವೃದ್ಧಿ ಸಂಘ’ ರಚಿಸಿ ಸುಜ್ಞಾನನಿಧಿಗೆ ₹9.52 ಲಕ್ಷ ದೇಣಿಗೆ ನೀಡಿದ್ದಾರೆ.

ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ 2007ರಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮದಂತೆ ಇದುವರೆಗೆ ರಾಜ್ಯದ 71,091 ವಿದ್ಯಾರ್ಥಿಗಳಿಗೆ ₹82.52ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡಲಾಗಿದೆ ಎಂದು ಡಾ.ಎಲ್.ಎಚ್. ಮಂಜುನಾಥ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.