ಸುಳ್ಯ: ಸುಳ್ಯ ತಾಲ್ಲೂಕು 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇಲ್ಲಿನ ನೆಹರು ಸ್ಮಾರಕ ಮಹಾವಿದ್ಯಾಲಯದಲ್ಲಿ ಫೆ.19ರಂದು ನಡೆಯಲಿದೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರ ಕೋಲ್ಚಾರ್ ಮತ್ತು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ‘ಇಲ್ಲಿನ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಸುಳ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ (ರಾಷ್ಟ್ರ), ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ (ಕಸಾಪ) ಹಾಗೂ ಡಾ.ಹರಪ್ರಸಾದ್ ತುದಿಯಡ್ಕ (ಕನ್ನಡ) ಧ್ವಜಾರೋಹಣ ನೆರವೇರಿಸುವರು’ ಎಂದರು.
ಚಿಂತಕ ಲಕ್ಷ್ಮೀಶ ತೋಳ್ಪಾಡಿ ಸಮ್ಮೇಳನ ಉದ್ಘಾಟಿಸುವರು. ಸಚಿವ ಎಸ್.ಅಂಗಾರ ದೀಪ ಬೆಳಗುವರು. ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಕೃತಿ ಬಿಡುಗಡೆ ಮಾಡುವರು. ಸ್ಮರಣ ಸಂಚಿಕೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಬಿಡುಗಡೆ ಮಾಡುವರು. ತಹಶೀಲ್ದಾರ್ ಅನಿತಾಲಕ್ಷ್ಮಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೃ.ಶಾ.ಮರ್ಕಂಜ ಪಾಲ್ಗೊಳ್ಳುವರು.
ಬಳಿಕ ಕವಯಿತ್ರಿ ಸಂಗೀತಾ ರವಿರಾಜ್ ಹೊಸೂರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತಿಗಳಿಗೆ, ಕಲಾವಿದರಿಗೆ ನುಡಿ ನಮನ, ಸಮ್ಮೇಳನಾಧ್ಯಕ್ಷರ ಸಾಹಿತ್ಯ-ಸಂವಾದ ಗೋಷ್ಠಿ ನಡೆಯಲಿದೆ.
ಸಂಜೆ 4 ರಿಂದ ಸಮಾರೋಪ ಮತ್ತು ಕನ್ನಡ ಕಸ್ತೂರಿ ಸನ್ಮಾನ ಸಮಾರಂಭ ನಡೆಯಲಿದೆ. ಸಾಹಿತಿ-ಚಿಂತಕ ತಾಳ್ತಜೆ ಡಾ. ವಸಂತಕುಮಾರ ಸಮಾರೋಪ ಭಾಷಣ ಮಾಡಿವರು. ನಟ ಶಿವಧ್ವಜ್ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 12 ಜನರಿಗೆ ‘ಕನ್ನಡ ಕಸ್ತೂರಿ’ ಸನ್ಮಾನಿಸಿ ಗೌರವಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಅಕ್ಷಯ್ ಕೆ.ಸಿ, ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ, ರಜತ್ ಅಡ್ಕಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.