ಪುತ್ತೂರು: ಪಶ್ಚಿಮ ಬಂಗಾಳದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅಲ್ಲಿನ ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನೈತಿಕ ಬೆಂಬಲ ನೀಡುವ ಜತೆಗೆ ಅವರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಪುತ್ತೂರು ಐಎಂಎ ಸಂಘಟನೆ ವತಿಯಿಂದ ಪುತ್ತೂರಿನ ವೈದ್ಯರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಮೂಲಕ ರಾಷ್ಟ್ರಪತಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಆಮರಣಾಂತ ಉಪವಾಸ ಸತ್ಯಾಗ್ರಹ 10ನೇ ದಿನಕ್ಕೆ ಕಾಲಿಟ್ಟಿದ್ದು, ಈಗಾಗಲೇ ಮೂರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸತ್ಯಾಗ್ರಹವನ್ನು ಹಾಗೂ ಅವರ ಬೇಡಿಕೆಗಳನ್ನು ಬೆಂಬಲಿಸಿ ರಾಜ್ಯದ ವಿವಿಧ ಕಡೆಗಳ ಮೆಡಿಕಲ್ ಕಾಲೇಜುಗಳಲ್ಲಿ ಸಾಂಕೇತಿಕ ಉಪವಾಸ ನಡೆಸಲಾಗುತ್ತಿದೆ. ಪುತ್ತೂರಿನಲ್ಲಿಯೂ ಭಾರತೀಯ ವೈದ್ಯಕೀಯ ಸಂಘ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡಲು ಮನವಿ ಸಲ್ಲಿಸಿದೆ.
ಭಾರತೀಯ ವೈದ್ಯಕೀಯ ಸಂಘದ ಪುತ್ತೂರು (ಐಎಂಎ) ಘಟಕದ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಮಾತನಾಡಿ, ಕಿರಿಯ ವೈದ್ಯರ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಡಾ.ಗಣೇಶ್‌ಪ್ರಸಾದ್ ಮುದ್ರಾಜೆ, ರಾಜ್ಯ ಸಮಿತಿ ಸದಸ್ಯ ಡಾ.ಎಸ್.ಎಸ್.ಜೋಶಿ, ಡಾ.ಬದ್ರಿನಾಥ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಡಾ.ಜೆ.ಸಿ.ಅಡಿಗ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಶ್ರೀಪತಿ ರಾವ್, ಡಾ.ರಾಮ್ ಕಿಶೋರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.