ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹಗಲು– ರಾತ್ರಿ ನಡೆಯುತ್ತಿರುವ ಧರಣಿ ಒಂದು ತಿಂಗಳು ಪೂರೈಸಿದೆ.
ಸುರತ್ಕಲ್ ಟೋಲ್ ಗೇಟ್ ರದ್ದತಿಗೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಅ.18ರಂದು ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಿತ್ತು. ಸುಂಕ ವಸೂಲಿ ಸ್ಥಗಿತಗೊಳಿಸಲು ಆ ಬಳಿಕವೂ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಸಮಿತಿಯು ಎನ್‌ಐಟಿಕೆ ಪ್ರವೇಶ ದ್ವಾರದ ಬಳಿ ಅ.28ರಿಂದ ಹಗಲು- ರಾತ್ರಿ ಧರಣಿ ನಡೆಸುತ್ತಿದೆ.
ಸುರತ್ಕಲ್ ಟೋಲ್‌ಗೇಟ್ ಅನ್ನು ಹೆಜಮಾಡಿಯ ಟೋಲ್‌ಪ್ಲಾಜಾ ಜೊತೆ ವಿಲೀನಗೊಳಿಸುವ ಕುರಿತು ಕೇಂದ್ರ ಸರ್ಕಾರ ನ.11ರಂದು ಅಧಿಸೂಚನೆ ಹೊರಡಿಸಿತ್ತು.
ಸುರತ್ಕಲ್‌ನಿಂದ ನಂತೂರುವರೆಗಿನ ಹೆದ್ದಾರಿಗೆ ಸಂಬಂಧಿಸಿದ ಸುಂಕವನ್ನು ಡಿ. 1ರಿಂದ ಸುರತ್ಕಲ್ ಟೋಲ್‌ಗೇಟ್ ಬದಲು ಹೆಜಮಾಡಿ ಟೋಲ್‌ಗೇಟ್‌ನಲ್ಲೇ ವಾಹನಗಳಿಂದ ಸಂಗ್ರಹಿಸಲು ಸಿದ್ಧತೆ ನಡೆದಿದೆ. ಸುಂಕ ವಸೂಲಿ ಮಾಡುವ ಸ್ಥಳವನ್ನಷ್ಟೇ ಬದಲಾವಣೆ ಮಾಡಿ, ಸುಂಕದ ಪ್ರಮಾಣವನ್ನು ಕಿಂಚಿತ್ ಕೂಡಾ ಕಡಿಮೆ ಮಾಡದಿರುವ ಸರ್ಕಾರದ ಕ್ರಮವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.