ADVERTISEMENT

ಆತ್ಮಸ್ಥೈರ್ಯ ಹೆಚ್ಚಿಸಿದ ನಿರ್ದಿಷ್ಟ ದಾಳಿ: ಕರ್ನಲ್ ಶರತ್ ಭಂಡಾರಿ

ನಿರ್ದಿಷ್ಟ ದಾಳಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 13:55 IST
Last Updated 29 ಸೆಪ್ಟೆಂಬರ್ 2018, 13:55 IST
ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ನಿರ್ದಿಷ್ಟ ದಾಳಿ ದಿನಾಚರಣೆ’ ಶನಿವಾರ ನಡೆಯಿತು.(ಮುಡಿಪು ಚಿತ್ರ)
ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ನಿರ್ದಿಷ್ಟ ದಾಳಿ ದಿನಾಚರಣೆ’ ಶನಿವಾರ ನಡೆಯಿತು.(ಮುಡಿಪು ಚಿತ್ರ)   

ಮುಡಿಪು: ‘ನಿರ್ದಿಷ್ಟದಾಳಿ (ಸರ್ಜಿಕಲ್ ಸ್ಟ್ರೈಕ್) ಭಾರತದ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸಿದೆ. ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸೈನಿಕರ ಸೇವೆಯನ್ನು ನಾವು ಸದಾ ಸ್ಮರಿಸಿಕೊಳ್ಳಬೇಕಿದೆ’ ಎಂದು ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹೇಳಿದರು.

ಭಾರತವು ನಡೆಸಿದ ಸರ್ಜಿಕಲ್ ದಾಳಿಗೆ ಎರಡು ವರ್ಷ ಪೂರೈಸಿದ್ದು, ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಮಂಗಳಸಭಾಂಗಣದಲ್ಲಿ ಶನಿವಾರ ನಡೆದ ನಿರ್ದಿಷ್ಟ ದಾಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಸ್ರೇಲ್, ಅಮೇರಿಕದಂತಹ ರಾಷ್ಟ್ರಗಳು ಮಾತ್ರ ಇಂತಹ ನಿರ್ದಿಷ್ಟ ದಾಳಿಯಲ್ಲಿ ಗುರುತಿಸಿದ್ದವು. ಇದೀಗ ಭಾರತ ಕೂಡಾ ಯಶಸ್ವಿ ನಿರ್ದಿಷ್ಟ ದಾಳಿಯ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿ ಗುರುತಿಸುವಂತಾಗಿದೆ.

ADVERTISEMENT

‘ಕೆಲವು ದೇಶಗಳು ಇಂತಹ ನಿರ್ದಿಷ್ಟ ದಾಳಿ ನಡೆಸಿವೆ. ಕೆಲವು ಯಶಸ್ವಿಯಾದರೆ, ಕೆಲವು ವಿಫಲವಾಗಿವೆ. ಆದರೆ ಭಾರತವು ಸರಿಯಾದ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯೊಂದಿಗೆ ವೀರ ಸೈನಿಕರ ಬಲದಿಂದ ನಿರ್ದಿಷ್ಟ ದಾಳಿಯ ಮೂಲಕ ವಿರೋಧಿ ದೇಶಕ್ಕೆ ಸ್ಪಷ್ಟವಾದ ಉತ್ತರವನ್ನು ನೀಡಿದೆ ಎಂದರು.

‘ದೇಶ ರಕ್ಷಣೆಯ ಭಾವದ ಜೊತೆಗೆ ನಾವು ಸ್ವಚ್ಛತೆಯ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕಿದೆ. ಸ್ವಚ್ಛತೆಯ ಭಾವನೆಯು ನಮ್ಮ ಹೃದಯದಲ್ಲಿ ಹುಟ್ಟಬೇಕು. ಕಳೆದ ಕೆಲವು ವರ್ಷದಿಂದ ಮೋದಿ ಈ ನಿಟ್ಟಿನಲ್ಲಿ ಸ್ವಚ್ಛತೆಯ ಬಗ್ಗೆ ಚಳವಳಿಯನ್ನೇ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ. , ‘ಸರ್ಜಿಕಲ್ ದಾಳಿ ದಿನಾಚರಣೆಯು ನಮ್ಮ ಸೈನಿಕರ ಸೇವೆಯನ್ನು ನೆನಪಿಸುವ ದಿನವಾಗಿದೆ’ ಎಂದು ಹೇಳಿದರು.

ಕುಲಸಚಿವ ಪ್ರೊ.ಎ.ಎಂ.ಖಾನ್ , ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಬಾರ್ಕೂರು ಉದಯ , ಡಾ.ಧನಂಜಯ ಕುಂಬ್ಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.