ಪುತ್ತೂರು: ‘ಸನ್ಯಾಸಿಯಾದರೂ ಸಮಾಜದ ವಿಮುಖಗಳಿಗೆ ಸ್ಪಂದಿಸುತ್ತಿದ್ದ ಸ್ವಾಮಿ ವಿವೇಕಾನಂದ ಅವರು ಸನ್ಯಾಸಿಗಳೂ ಸಮಾಜದ ಜತೆಜತೆಗೆ ಇರಬೇಕೆಂಬುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಸಂವೇದನ ಫೌಂಡೇಷನ್ ಸ್ಥಾಪಕ ಪ್ರಕಾಶ್ ಮಲ್ಪೆ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವೇಕಾನಂದ ಜಯಂತಿಯಲ್ಲಿ ಅವರು ಮತನಾಡಿದರು.
‘ಕೇವಲ ಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು. ದರಿದ್ರ ಭಾರತ ಎನ್ನುವ ಮನಸ್ಥಿಯನ್ನು ದೂರ ಸರಿಸಿದ ಅವರು ಪೌರತ್ಯಾ ಮತ್ತು ಪಾಶ್ಚಾತ್ಯದ ಭಾವ ಸೇತುವಾಗಿ ಉಳಿದುಕೊಳ್ಳುತ್ತಾರೆ. ಸ್ವಾಮಿ ವಿವೇಕಾನಂದರನ್ನು ನೋಡಿ ಇಂದಿನ ಸನ್ಯಾಸಿಗಳು ಅರ್ಥಮಾಡಿಕೊಳ್ಳಬೇಕು. ಭಾರತ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಟೀಕೆ ಮಾಡಿದರೆ ವಿವೇಕಾನಂದರು ಸರಿಯಾದ ಉತ್ತರ ಕೊಡುತ್ತಿದ್ದರು. ಅವರು ಭಾರತದ ನಿಜವಾದ ಸಾಂಸ್ಕೃತಿಕ ರಾಯಭಾರಿ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಶ್ರೀರಾಮ ನಮಗೆ ಜೀವನದ ಪ್ರತಿ ಮೌಲ್ಯಗಳಲ್ಲಿ ಆದರ್ಶ. ಅಂಥ ಶ್ರೀರಾಮ ಜನ್ಮಭೂಮಿಯಲ್ಲಿ ಸ್ವಾಮಿ ವಿವೇಕಾನಂದರು ಹುಟ್ಟಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಜಗತ್ತು ವೀರರಿಗೆ, ಶಕ್ತಿವಂತರಿಗೆ ಮಾತ್ರ ಸಿಗುತ್ತದೆ. ಆದರೆ, ತನ್ನ ಚಿಂತನೆಯಿಂದ ಜಗತ್ತನ್ನು ಗೆದ್ದವರು ಸ್ವಾಮಿ ವಿವೇಕಾನಂದರು. ವಿದೇಶಿಯರ ತುಳಿತ, ಒದೆಗೆ, ಅಪಮಾನಕ್ಕೆ ಬಿದ್ದಾಗ ಅಲ್ಲಿಂದ ಮೇಲಕ್ಕೆ ಎದ್ದು ನಿಲ್ಲಬೇಕೆಂದು ಸ್ವಾಮಿ ವಿವೇಕಾನಂದರು ಮಾರ್ಗದರ್ಶನ ಮಾಡಿದರು. ಹಿಂದೂ ಧರ್ಮ ಬದಿಗೆ ಸರಿಸಿದರೆ ಪ್ರಾಣ ಹೋದಂತೆ. ಭಾರತದ ನೆಲ ನಮಗೆ ದೇವರು. ದೇವರು ಮತ್ತು ಭಾರತ ಒಂದೇ ಎಂದು ವಿವೇಕಾನಂದರು ಮತ್ತೆ ಮತ್ತೆ ನೆನಪು ಮಾಡಿಸಿದರು ಎಂದರು.
ಬೆಟ್ಟಂಪಾಡಿ ನಿವಾಸಿ, ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಹೈಜಂಪ್‌ನಲ್ಲಿ ಚಿನ್ನದ ಪದಕ ಪಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಜಿ.ಎಂ.ಕೀರ್ತಿ ಅವರನ್ನು ಸನ್ಮಾನಿಸಲಾಯಿತು. ‘ರಾಮಮಂದಿರದ ಹೋರಾಟದ ಮಜಲುಗಳು’ ಎಂಬ ವಿಶೇಷ ಪುಸ್ತಕ ‘ಪುನರ್ವಸು’ ಮುಖಪುಟದ ಬಿಡುಗಡೆ ಮಾಡಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಸ್ವಾಗತಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ವಂದಿಸಿದರು. ವಿದ್ಯಾ ಎಸ್., ವಿಜಯಸರಸ್ವತಿ ನಿರೂಪಿಸಿದರು.
ರಾಮ ತಾರಕ ಮಂತ್ರವನ್ನು ಶ್ರೀವಿದ್ಯಾ ಪಾದೆಕಲ್ಲು ಮತ್ತು ಬಳಗದವರು ಪಠಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಆಧಾರಿತ ಪ್ರಸಂಗವನ್ನು ಸೂತ್ರ ಮತ್ತು ಸಲಾಕೆ ಬೊಂಬೆಯಾಟದ ಮೂಲಕ ಬೆಂಗಳೂರಿನ ರಂಗ ಪುತ್ಥಳಿ ಬೊಂಬೆಯಾಟದ ಕಲಾವಿದರು ಪ್ರಸ್ತುತ ಪಡಿಸಿದು. ಪುತ್ಥಲಿ ಬೊಂಬೆಯಾಟದಲ್ಲಿ ಶ್ರೀರಾಮನ ಕುರಿತು ಪಂಚವಟಿಯ ಚಿತ್ರಣ ಪ್ರದರ್ಶನಗೊಂಡಿತು. ವಾಲ್ಮೀಕಿ ರಾಮಾಯಣ ಕುರಿತ ಚಿತ್ರ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.