ADVERTISEMENT

ಕನ್ನಡ ಹುಡುಕುವ ಪರಿಸ್ಥಿತಿ ಬರಬಾರದು: ಟಿ.ಎಸ್ ನಾಗಾಭರಣ

ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಸಭೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 16:22 IST
Last Updated 7 ಏಪ್ರಿಲ್ 2022, 16:22 IST
ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಮಂಗಳೂರಿನಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿದರು.
ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಮಂಗಳೂರಿನಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿದರು.   

ಮಂಗಳೂರು: ಕರ್ನಾಟಕದಲ್ಲಿ ಕನ್ನಡವನ್ನು ಹುಡುಕಾಡುವ ಪರಿಸ್ಥಿತಿ ಎದುರಾಗಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಎಚ್ಚರಿಸಿದರು.

ನಗರದ ಅಂಬೇಡ್ಕರ್‌ ವೃತ್ತದ ಬಳಿಯ ಬ್ಯಾಂಕ್ ಆಫ್ ಬರೋಡದ ಸಭಾಂಗಣದಲ್ಲಿ ಗುರುವಾರ ಕನ್ನಡ ಅನುಷ್ಠಾನ ಕುರಿತು ಹಮ್ಮಿಕೊಳ್ಳಲಾದ ಸಭೆಯಲ್ಲಿ ಅವರು ಮಾತನಾಡಿದರು.

ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಅರ್ಜಿ, ಚಲನ್, ನಾಮಫಲಕಗಳು, ಜಾಹೀರಾತುಗಳು, ನಮೂನೆ, ಚೆಕ್, ರಸೀದಿ ಸೇರಿದಂತೆ ಇತ್ಯಾದಿಗಳು ಕನ್ನಡದಲ್ಲೇ ಮುದ್ರಿತಗೊಂಡು ಗ್ರಾಹಕರ ಕೈಸೇರಬೇಕು. ಹಿಂದಿ, ಇಂಗ್ಲಿಷ್‌ ಭಾಷೆಗೆ ನೀಡುವ ಸ್ಥಾನಮಾನ ಕನ್ನಡ ಭಾಷೆಗೂ ದೊರಕಬೇಕು ಎಂದರು.

ADVERTISEMENT

ಹೊರ ರಾಜ್ಯಗಳಿಂದ ಬರುವ ಉದ್ಯೋಗಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಅದಕ್ಕೆ ಅನುಕೂಲವಾಗುವಂತಹ ತರಬೇತಿಗಳನ್ನು ಆಯೋಜಿಸಬೇಕು. ಒಂದು ವೇಳೆ ಕನ್ನಡವನ್ನು ಕಲಿಯದೇ, ಕನ್ನಡವನ್ನು ಬಳಸದೇ ಹೋದಲ್ಲಿ ಅಂತಹ ಉದ್ಯೋಗಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರೈತರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಅರ್ಥವಾಗಲು ಬ್ಯಾಂಕಿನ ಅಧಿಕೃತ ವೆಬ್‍ಸೈಟ್ ಹಾಗೂ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕು. ಬ್ಯಾಂಕುಗಳಲ್ಲಿರುವ ಕನ್ನಡ ಘಟಕಗಳಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಎಲ್ಲ ಆಚರಣೆಗಳನ್ನು ನಡೆಸಬೇಕು. ಬ್ಯಾಂಕುಗಳ ಮಾಸಪತ್ರಿಕೆಗಳಲ್ಲಿಯೂ ಕನ್ನಡ ಭಾಷೆಯ ಲೇಖನಗಳು ಇರಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಬಳಸದೆ ಇತರೆ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಮುಂದೆ ಕನ್ನಡವನ್ನು ಹುಡುಕುವ ಪರಿಸ್ಥಿತಿ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಬ್ಯಾಂಕ್‌ನ ವಲಯ ಮಹಾ ಪ್ರಬಂಧಕಿ ಗಾಯತ್ರಿ, ಉಪ ಮಹಾ ಪ್ರಬಂಧಕ ಗೋಪಾಲಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿ ಡಾ.ಸಂತೋಷ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.