ADVERTISEMENT

ಭಾರಿ ಮೆರವಣಿಗೆ– ಮುಗಿಲು ಮುಟ್ಟಿದ ಟೈಲರ್‌ಗಳ ಆಕ್ರೋಶ

ಕ್ಷೇಮ ನಿಧಿ ಸ್ಥಾಪನೆಗೆ ಒತ್ತಾಯಿಸಿ ಹೊಲಿಗೆ ವೃತ್ತಿ ನಿರತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 4:25 IST
Last Updated 27 ಜುಲೈ 2022, 4:25 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಟೈಲರ್‌ಗಳು ಬಲ್ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು– ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಟೈಲರ್‌ಗಳು ಬಲ್ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳ ಟೈಲರ್‌ಗಳು ನಗರದಲ್ಲಿ ಮಂಗಳವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕರ್ನಾಟಕ ರಾಜ್ಯ ಟೈಲರ್‌ಗಳ ಸಂಘದ ನೇತೃತ್ವದಲ್ಲಿ ಬಲ್ಮಠದ ಶಾಂತಿನಿಲಯದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಭಾರಿ ಮೆರವಣಿಗೆಯಲ್ಲಿ ಸಾವಿರಾರು ಟೈಲರ್‌ಗಳು ಹೆಜ್ಜೆ ಹಾಕುವ ಮೂಲಕ ಶಕ್ತಿ ಪ್ರದರ್ಶಿಸಿದರು.

ಹೊಲಿಗೆ ವೃತ್ತಿಯಲ್ಲಿ ತೊಡಗಿರುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕ್ಷೇಮ ನಿಧಿ ಮಂಡಳಿಯನ್ನು ಸ್ಥಾಪಿಸಬೇಕು. ನಿವೃತ್ತಿ ವೇತನ ಸೌಲಭ್ಯ ಒದಗಿಸಬೇಕು ಎಂಬುದೂ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಈ ಬೇಡಿಕೆಗಳನ್ನು ಈಡೇರಿಸುವುದಕ್ಕೆ 15 ದಿನಗಳ ಗಡುವು ನೀಡಿದ ಪ್ರತಿಭಟನಾಕಾರರು, ಇಲ್ಲದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.ಎ., ‘ಕೆಲವೇ ದಿನಗಳಲ್ಲಿ ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಆಚರಿಸುತ್ತಿದೆ. ನವದೆಹಲಿಯಲ್ಲಿ ಅಂದು ಧ್ವಜಾರೊಹಣ ನೆರವೇರಿಸುವ ಮಹಾನೀಯರಿಂದ ಹಿಡಿದು ಎಲ್ಲರ ಮಾನ ಮುಚ್ಚುವ ಬಟ್ಟೆಯನ್ನು ಹೊಲಿಯುವವರು ನಾವು. ಆದರೆ, ನಾವು ಮಾನವಂತರಾಗಿ ಬದುಕುವ ಸ್ಥಿತಿ ಇದೆಯೇ ಎಮದು ಆತ್ಮಾವಲೋಕನ ಮಾಡಿಕೊಳ್ಳಬೇಕು. 75 ವರ್ಷಗಳಲ್ಲೂ ನಮ್ಮ ಬಗ್ಗೆ ಯಾವ ಸರ್ಕಾರವೂ ಕಾಳಜಿ ವಹಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

’ಹಲವು ವರ್ಷಗಳಿಂದ ಬೇರೆ ಬೇರೆ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದರೂ ಇದುವರೆಗೆ ಬೇಡಿಕೆ ಈಡೇರಿಲ್ಲ. ಹಿಂದೆ ಟೈಲರ್‌ಗಳಿಗೆ ಸರ್ಕಾರದಿಂದ ಪಿಂಚಣಿ ದೊರೆಯುತ್ತಿತ್ತು. 5 ವರ್ಷ ಚಾಲ್ತಿಯಲ್ಲಿದ್ದ ಈ ಪಿಂಚಣಿಯನ್ನು ಕ್ರಮೇಣ ನಿಲ್ಲಿಸಲಾಯಿತು. ಟೈಲರ್‌ಗಳ ಮಕ್ಕಳಿಗೆ ಸರ್ಕಾರ ವಿದ್ಯಾರ್ಥಿವೇತನ ಸವಲತ್ತನ್ನು ಒದಗಿಸಿತ್ತು. ಇದನ್ನೂ ಎರಡೇ ವರ್ಷದಲ್ಲಿ ಸ್ಥಗಿತಗೊಳಿಸಲಾಯಿತು. ಸರ್ಕಾರ ಹೇಳಿದ ಎಲ್ಲರೀತಿಯ ಗುರುತಿನ ಚೀಟಿಗಳನ್ನೂ ಮಾಡಿಸಿದ್ದೇವೆ. ಆದರೂ ಟೈಲರ್‌ಗಳಿಗೆ ಸವಲತ್ತುಗಳು ಮರೀಚಿಕೆಯಾಗಿಯೇ ಉಳಿದಿವೆ’ ಎಂದರು.

ಮೆರವಣಿಗೆ ಉದ್ಘಾಟಿಸಿದ ಸಂಘದ ಜಿಲ್ಲಾ ಸಮಿತಿ ಸಮಿತಿ ಅಧ್ಯಕ್ಷರಾದ ಜಯಂತ ಉರ್ಲಾಂಡಿ, ‘ಟೈಲರ್‌ಗಳಿಗೆ ಜೀವನ ಭದ್ರತೆ ಕಲ್ಪಿಸುವ ಕುರಿತು 23 ವರ್ಷಗಳಿಂದ ಹಲವಾರು ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೂ ನಮ್ಮ ಬೇಡಿಕೆಯನ್ನು ಈಡೇರಿಲ್ಲ. ನಾವು ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಇದಕ್ಕೆ ಸ್ಪಂದನೆ ಸಿಗದಿದ್ದರೆ ಮುಂದೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದರು.

ಸಂಘಟನೆಯ ಪ್ರಮುಖರಾದ ವಸಂತ್ ಬಿ., ‘ಟೈಲರ್‌ಗಳ ಕ್ಷೇಮನಿಧಿ ಮಂಡಳಿ ಸ್ಥಾಪನೆ 23 ವರ್ಷಗಳಷ್ಟು ಹಳೆಯ ಬೇಡಿಕೆ. ಅದು ಈಗಲೂ ಭರವಸೆಯಾಗಿಯೇ ಉಳಿದಿದೆ’ ಎಂದರು.‌

ಟೈಲರ್‌ಗಳ ಸಂಘಟನೆಯ ಮುಖಂಡ ಲಿಂಗಪ್ಪ, ‘ಇದುವರೆಗೆ ಹಣ ಸಂದಾಯ ಮಾಡಿದ, 60 ವರ್ಷ ತುಂಬಿದ ಎಲ್ಲಾ ಎನ್‍ಪಿಎಸ್ ಲೈಟ್ ಫಲಾನುಭವಿಗಳಿಗೂ ತಿಂಗಳಿಗೆ ಕನಿಷ್ಠ ₹ 3,000 ನಿವೃತ್ತಿ ವೇತನ ನೀಡಬೇಕು. ಹೆಣ್ಣು ಮಕ್ಕಳಿಗೆ ವಿವಾಹ ಧನ, ಹೆರಿಗೆ ಭತ್ಯೆ, ಮನೆ ಕಟ್ಟಲು ಅಥವಾ ಮನೆ ದುರಸ್ತಿಗೆ ಆರ್ಥಿಕ ನೆರವು, ಕಡಿಮೆ ಬಡ್ಡಿಯ ಸಾಲ,ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ನೀಡಬೇಕು’ ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಂಘಟನೆಯ ಪ್ರಮುಖರು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌ ಅವರಿಗೆ ಸಲ್ಲಿಸಿದರು.

ಸಂಘಟನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ ಕುಮಾರ್‌, ಉಪಾಧ್ಯಕ್ಷ ಸುರೇಶ ಸಾಲ್ಯಾನ್, ಸಂಘಟನೆಯ ಪ್ರಮುಖರಾದ ಕೆ.ಎಸ್‌.ಆನಂದ್, ಖಜಾಂಚಿ ಈಶ್ವರ ಕುಲಾಲ್, ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ವಿದ್ಯಾ ಶೆಟ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.